ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಟೋಲ್‌ ರದ್ದು ಮಾಡುತ್ತೇವೆ

ಲ್ಯಾಂಕೊ– ಜೆಎಸ್‍ಆರ್ ಪ್ರತಿನಿಧಿಗಳಿಗೆ ಸಂಸದ ಮುನಿಸ್ವಾಮಿ ಖಡಕ್‌ ಎಚ್ಚರಿಕೆ
Last Updated 29 ಆಗಸ್ಟ್ 2019, 15:37 IST
ಅಕ್ಷರ ಗಾತ್ರ

ಕೋಲಾರ: ‘ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಜನರಿಗೆ ಆಗುತ್ತಿರುವ ತೊಂದರೆ ನಿವಾರಿಸದಿದ್ದರೆ ಟೋಲ್ ಸಂಗ್ರಹ ರದ್ದುಪಡಿಸುವಂತೆ ಕೇಂದ್ರ ಸಚಿವರಿಗೆ ಶಿಫಾರಸು ಮಾಡುತ್ತೇವೆ’ ಎಂದು ಸಂಸದ ಎಸ್.ಮುನಿಸ್ವಾಮಿ ಖಡಕ್‌ ಎಚ್ಚರಿಕೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಸುರಕ್ಷತೆ ಸಂಬಂಧ ಇಲ್ಲಿ ಗುರುವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಲ್ಯಾಂಕೊ ಸಂಸ್ಥೆ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ‘ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಹೆದ್ದಾರಿ ಗುಣಮಟ್ಟದಿಂದ ಇದೆ. ಆದರೆ, ರಾಜ್ಯದಲ್ಲಿ ಹೆದ್ದಾರಿ ಕಳಪೆಯಾಗಿದೆ. ಮುಂದಾಲೋಚನೆಯಿಂದ ರಸ್ತೆ ನಿರ್ಮಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಲ್ಯಾಂಕೊ ಹಾಗೂ ಜೆಎಸ್‍ಆರ್ ಕಂಪನಿ ಪ್ರತಿನಿಧಿಗಳಿಗೆ ರಾಷ್ಟ್ರೀಯ ಹೆದ್ದಾರಿಯ ನ್ಯೂನತೆ ತೋರಿಸಲು ಸೆ.5ರ ನಂತರ ದಿನಾಂಕ ನಿಗದಿಪಡಿಸಿ. ನಾನೂ ಬರುತ್ತೇನೆ. ಯಾವ ಸ್ಥಳದಲ್ಲಿ ಏನು ಕೆಲಸ ಆಗಬೇಕು ಎಂಬುದನ್ನು ತಿಳಿಸಿ’ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

‘ಚೆನ್ನೈ ಮೂಲಕ ಹಾದು ಹೋಗಿರುವ ಹೆದ್ದಾರಿಗಳಲ್ಲಿ ಅಪಘಾತ ಪ್ರಮಾಣ ತುಂಬಾ ಕಡಿಮೆಯಿದೆ. ಅಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲು ಏನು ಸಮಸ್ಯೆ’ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.

ಹೆಚ್ಚು ಅಪಘಾತ: ‘ಜಿಲ್ಲೆ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿ ಹೆಚ್ಚು ಅಪಘಾತ ಸಂಭವಿಸುತ್ತಿವೆ. 2018–19ರಲ್ಲಿ 687 ಅಪಘಾತ ಸಂಭವಿಸಿದ್ದು, 237 ಮಂದಿ ಮೃತಪಟ್ಟಿದ್ದಾರೆ. 2019–20ರಲ್ಲಿ ಈವರೆಗೆ 263 ಅಪಘಾತ ಸಂಭವಿಸಿದ್ದು, 75 ಮಂದಿ ಮೃತಪಟ್ಟಿದ್ದಾರೆ. ಅತಿ ಹೆಚ್ಚು ಅಪಘಾತ ಸಂಭವಿಸುತ್ತಿರುವ 14 ಸ್ಥಳಗಳನ್ನು ಗುರುತಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ವಿವರಿಸಿದರು.

‘ಜಿಲ್ಲಾಡಳಿತ ಭವನದ ಬಳಿ ಸರ್ವಿಸ್‌ ರಸ್ತೆ ನಿರ್ಮಿಸುವಂತೆ ಸೂಚಿಸಲಾಗಿತ್ತು. ಆದರೆ, ಜನರ ಓಡಾಟಕ್ಕೆ ಅವಶ್ಯವಿರುವ ಕನಿಷ್ಠ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳಿಗೆ ಜನರ ಪ್ರಾಣದ ಬಗ್ಗೆ ಸ್ವಲ್ಪವೂ ಜವಾಬ್ದಾರಿ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊರತೆಯಿದೆ: ‘ಕೋಲಾರ ತಾಲ್ಲೂಕು ಗಡಿಯಿಂದ ನಂಗಲಿ ಗಡಿವರೆಗೆ ಹೆದ್ದಾರಿಯಲ್ಲಿ ಅಳವಡಿಸಿರುವ ಮಿಣುಕು ದೀಪಗಳು (ಬ್ಲಿಂಕರ್ಸ್‌) ಮಂದ ಬೆಳಕಿನಿಂದ ಕೂಡಿವೆ. ಸೂಚನಾ ಫಲಕ, ಬ್ಯಾರಿಕೇಡ್ ಅಳವಡಿಕೆ ಸೇರಿದಂತೆ ಸುರಕ್ಷತಾ ಕ್ರಮಗಳಲ್ಲಿ ಕೊರತೆಯಿದೆ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಾಹ್ನವಿ ದೂರಿದರು.

‘ಮುಳಬಾಗಿಲು ಪಟ್ಟಣ ವ್ಯಾಪ್ತಿಯಲ್ಲಿ ಸರ್ವಿಸ್‌ ರಸ್ತೆ ನಿರ್ಮಾಣ ಮಾಡಬೇಕು ಮತ್ತು ಕೆಲವೆಡೆ ವಾಹನಗಳು ತಿರುವು ಪಡೆಯಲು ಸ್ಥಳಾವಕಾಶ ನೀಡಬೇಕು. ಕೋಲಾರ ನಗರದ ಬಂಗಾರಪೇಟೆ ಜಿಗ್‌ಜಾಗ್‌ ಸೇರಿದಂತೆ ಸಾಕಷ್ಟು ಮೇಲ್ಸೇತುವೆಗಳಲ್ಲಿ ಬೀದಿ ದೀಪ ಉರಿಯುತ್ತಿಲ್ಲ’ ಎಂದು ಡಿವೈಎಸ್ಪಿ ಉಮೇಶ್ ಹೇಳಿದರು.

ಸ್ವಚ್ಛತೆಯಿಲ್ಲ: ಅಧಿಕಾರಿಗಳು ರಸ್ತೆ ಸುರಕ್ಷತಾ ಕ್ರಮ ಕೈಗೊಳ್ಳಲು ನಿರ್ಲಕ್ಷ್ಯ ತೋರಿರುವುದಕ್ಕೆ ಸಿಡಿಮಿಡಿಗೊಂಡ ಸಂಸದರು, ‘ಜನರ ಪ್ರಾಣ ರಕ್ಷಣೆಗೆ ಅವಶ್ಯವಿರುವ ಕೆಲಸ ಮಾಡದಿದ್ದರೆ ಟೋಲ್ ಯಾಕೆ ಸಂಗ್ರಹಿಸುತ್ತೀರಿ? ಹೆದ್ದಾರಿ ಬದಿಯಲ್ಲಿ ಸ್ವಚ್ಛತೆಯಿಲ್ಲ. ವಾಹನ ಡಿಕ್ಕಿಯಾಗಿ ನಾಯಿ ಸತ್ತರೂ ತೆರವು ಮಾಡುವುದಿಲ್ಲ. ಅಲ್ಲೇ ದುರ್ನಾತ ಬೀರುತ್ತಿರುತ್ತದೆ. ರಸ್ತೆ ವಿಭಜಕದ ಮಧ್ಯೆ ಗಿಡ ಬೆಳೆಸಿಲ್ಲ. ಹೆದ್ದಾರಿ ಬದಿಯಲ್ಲಿ ಆಂಬುಲೆನ್ಸ್‌ ಸೌಲಭ್ಯ ಕಲ್ಪಿಸಿಲ್ಲ’ ಎಂದು ಗುಡುಗಿದರು.

‘ಟೋಲ್ ಕಟ್ಟಲು ಯಾರಾದರೂ ವಿರೋಧಿಸಿದರೆ ರೌಡಿಗಳನ್ನು ಇಟ್ಟುಕೊಂಡು ಗಲಾಟೆ ಮಾಡ್ತಿರಿ. ಇದು ಆಂಧ್ರಪ್ರದೇಶವಲ್ಲ. ನಿಮ್ಮ ಆಟ ಇಲ್ಲಿ ನಡೆಯಲ್ಲ. ಸಮಸ್ಯೆಯಿದ್ದರೆ ಪೊಲೀಸರ ಗಮನಕ್ಕೆ ತನ್ನಿ. ಅದು ಬಿಟ್ಟು ಗೂಂಡಾಗಿರಿ ಮಾಡಿದರೆ ಗಂಟು ಮೂಟೆ ಕಟ್ಟಿಸುತ್ತೇನೆ’ ಎಂದು ಲ್ಯಾಂಕೊ ಕಂಪನಿ ಪ್ರತಿನಿಧಿ ಡೋಂಗ್ರೆ ಅವರನ್ನು ತರಾಟೆಗೆ ತೆಗೆದುಕೊಂಡರು.

ಮಂಜೂರಾತಿ ದೊರೆತಿದೆ: ‘ಜಿಲ್ಲೆಯ ಗಡಿ ಭಾಗದ ರಾಮಸಂದ್ರದಿಂದ ನಂಗಲಿವರೆಗೆ 72 ಕಿ.ಮೀ ಹೆದ್ದಾರಿ ಹಾದು ಹೋಗಿದೆ. ಜಿಲ್ಲಾ ಕೇಂದ್ರದ ಪವನ್ ಕಾಲೇಜು ಹಾಗೂ ಟಮಕ ಬಳಿ ಪಾದಚಾರಿಗಳ ಅನುಕೂಲಕ್ಕೆ ಮೇಲ್ಸೇತುವೆ ನಿರ್ಮಿಸಲು ಮಂಜೂರಾತಿ ದೊರೆತಿದೆ. ಕೊಂಡರಾಜನಹಳ್ಳಿ, ವಡಗೂರುಗೇಟ್, ತಂಬಿಹಳ್ಳಿ ಗೇಟ್‌ನಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ವಿಭಾಗೀಯ ಕಚೇರಿಗೆ ಪ್ರಸ್ತಾವ ಸಲ್ಲಿಸಿದ್ದು, ಶೀಘ್ರವೇ ಮಂಜೂರಾತಿ ಸಿಗಲಿದೆ’ ಎಂದು ಹೆದ್ದಾರಿ ಪ್ರಾಧಿಕಾರದ ತಾಂತ್ರಿಕ ಅಧಿಕಾರಿ ವಾಣಿಶ್ರೀ ವಿವರಿಸಿದರು.

‘ಜಿಲ್ಲಾಡಳಿತ ಭವನದ ಬಳಿ 1.30 ಕಿ.ಮೀ ಸರ್ವಿಸ್‌ ರಸ್ತೆ, ಚರಂಡಿ ನಿರ್ಮಾಣಕ್ಕೆ ₹ 4.50 ಕೋಟಿ ವೆಚ್ಚದ ಯೋಜನೆಗೆ ಅನುಮತಿ ಸಿಕ್ಕಿದೆ. ಆದರೆ, ಕಾಮಗಾರಿ ಆರಂಭಿಸಲು ಲ್ಯಾಂಕೊ ಕಂಪನಿ ಆರ್ಥಿಕ ಸಮಸ್ಯೆ ಮುಂದಿಟ್ಟಿದೆ. ಹೆದ್ದಾರಿ ನಿರ್ವಹಣೆಯಲ್ಲಿ ಕಂಪನಿ ವಿಫಲವಾಗಿರುವುದರಿಂದ ಟೋಲ್ ಸಂಗ್ರಹಣೆ ರದ್ದುಪಡಿಸುವಂತೆ ಶಿಫಾರಸು ಮಾಡಲಾಗಿದೆ. ಸರ್ವಿಸ್‌ ರಸ್ತೆ ನಿರ್ಮಾಣದ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲು ನಾಲ್ಕೈದು ತಿಂಗಳು ಕಾಲಾವಕಾಶಬೇಕು’ ಎಂದು ತಿಳಿಸಿದರು.

ಉಪ ವಿಬಾಗಾಧಿಕಾರಿ ಸೋಮಶೇಖರ್, ಜಿ.ಪಂ ಸದಸ್ಯೆ ಅಶ್ವಿನಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT