ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಸಮಾಜದ ಅವಿಭಾಜ್ಯ ಅಂಗ: ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅಭಿಪ್ರಾಯ
Last Updated 10 ಮಾರ್ಚ್ 2021, 15:46 IST
ಅಕ್ಷರ ಗಾತ್ರ

ಕೋಲಾರ: ‘ಮಹಿಳೆಯರು ಮತ್ತು ಪುರುಷರು ಸಮಾಜದ ಅವಿಭಾಜ್ಯ ಅಂಗ. ಮಹಿಳೆಯರಿಗೆ ಉತ್ತಮ ಸ್ಥಾನಮಾನ ಕಲ್ಪಿಸಿದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಅಭಿಪ್ರಾಯಪಟ್ಟರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ರೋಟರಿ ಕೋಲಾರ ನಂದಿನಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ರಾಜಕೀಯ, ವ್ಯಾಪಾರ ಅಥವಾ ಯಾವುದೇ ಹುದ್ದೆಯಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ಸಮಾಜವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬಹುದು. ಮಹಿಳೆಯರು ಮನೆಗೆಲಸಕ್ಕೆ ಸೀಮಿತವಾಗದೆ ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಕಿವಿಮಾತು ಹೇಳಿದರು.

‘ಹಿಂದಿನ ಸಮೀಕ್ಷೆಗೆ ಹೊಲಿಕೆ ಮಾಡಿದರೆ ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಯಾರು ಕಾರಣರು ಎಂಬ ಬಗ್ಗೆ ಆತ್ಮಾವಲೋಕನ ನಡೆಯಬೇಕು. ಹೆಣ್ಣು ಭ್ರೂಣ ಹತ್ಯೆ ಇಂದಿಗೂ ಚಾಲ್ತಿಯಲ್ಲಿರುವುದು ವಿಷಾದಕರ. ಮಹಿಳೆಯರು ಮತ್ತು ಪುರುಷರ ಸಂಖ್ಯೆಯಲ್ಲಿ ಸಮತೋಲನ ಸಾಧಿಸಲು ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಬೇಕು’ ಎಂದರು.

ಆರ್ಥಿಕ ಶಕ್ತಿ: ‘ದೇಶ, ನದಿಯನ್ನು ಸಂಬೋಧಿಸಬೇಕಾದರೆ ಶಕ್ತಿ ದೇವತೆಗಳಿಗೆ ಹೋಲಿಸುತ್ತಾರೆ. ರಾಜ್ಯದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಯೋಜನೆ ವತಿಯಿಂದ ಸ್ವಸಹಾಯ ಗುಂಪುಗಳನ್ನು ರಚಿಸಿ ಆರ್ಥಿಕ ಶಕ್ತಿ ತುಂಬುತ್ತಿದ್ದೇವೆ' ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಚಂದ್ರಶೇಖರ್‌ ಹೇಳಿದರು.

‘ಈ ಹಿಂದೆ ಮಹಿಳೆಯರನ್ನು ಮನೆ ಕೆಲಸಕ್ಕೆ ಸಿಮೀತಗೊಳಿಸಲಾಗಿತ್ತು. ಈಗ ಪ್ರತಿ ಕ್ಷೇತ್ರದಲ್ಲೂ ಮಹಿಳೆಯರು ಸಾಧನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಮಹಿಳೆಯರು ವಿದ್ಯಾವಂತರಾದರೆ ತಮ್ಮ ಮಕ್ಕಳಿಗೆ ವಿದ್ಯೆ ಕಲಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಾರೆ. ಕುಟುಂಬ ಪೋಷಣೆ ಜತೆಗೆ ಸಮಾಜದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಶಕ್ತಿ ಮಹಿಳೆಯರಿಗಿದೆ’ ಎಂದು ಅಭಿಪ್ರಾಯಪಟ್ಟರು.

ದೌರ್ಜನ್ಯ ನಿಂತಿಲ್ಲ: ‘ಸಂವಿಧಾನದಲ್ಲಿ ಪುರುಷರಷ್ಟೇ ಮಹಿಳೆಯರಿಗೂ ಮೀಸಲಾತಿ ಕಲ್ಪಿಸಲಾಗಿದೆ. ಈ ಮೀಸಲಾತಿ ದುರ್ಬಳಕೆ ಆಗಬಾರದು. ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ’ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಕಳವಳ ವ್ಯಕ್ತಪಡಿಸಿದರು.

‘ಮಹಿಳೆಯರ ರಕ್ಷಣೆಗಾಗಿ ರೂಪಿಸಿರುವ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಮಕ್ಕಳ ಬೆಳವಣಿಗೆ ಬಗ್ಗೆ ಪೋಷಕರು ಗಮನ ಹರಿಸಬೇಕು. ಮಕ್ಕಳನ್ನು ಸುಶಿಕ್ಷಿತರಾಗಿ ಮಾಡಿ ಒಳ್ಳೆಯ ಬದುಕು ಕಟ್ಟಿಕೊಡಬೇಕು. ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ನಿರ್ಣಾಯಕ’ ಎಂದರು.

ವಿವಿಧ ಕ್ಷೇತ್ರದ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಸ್ಕೌಟ್ಸ್ ಆಯುಕ್ತ ಸುರೇಶ್, ಗೈಡ್ಸ್ ಆಯುಕ್ತೆ ಕೆ.ಆರ್.ಜಯಶ್ರೀ, ನರ್ಮಾದ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅರುಣಾ, ರೋಟರಿ ಉಪ ರಾಜ್ಯಪಾಲ ಗೋಪಾಲರೆಡ್ಡಿ, ಗೈಡ್ ರಾಜ್ಯ ಪ್ರತಿನಿಧಿ ಎಂ.ಲತಾ, ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT