ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದಲ್ಲಿ ಮಹಿಳೆ ಅಬಲೆಯಲ್ಲ ಸಬಲೆ

ಸ್ವಾಭಿಮಾನದಿಂದ ಬದುಕಿ: ಶಾಸಕ ಶ್ರೀನಿವಾಸಗೌಡ ಕಿವಿಮಾತು
Last Updated 4 ಆಗಸ್ಟ್ 2021, 15:20 IST
ಅಕ್ಷರ ಗಾತ್ರ

ಕೋಲಾರ: ‘ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡುತ್ತಿರುವ ಮಹಿಳೆ ಸಬಲೆಯೇ ಹೊರತು ಅಬಲೆಯಲ್ಲ. ಮಹಿಳೆಯರು ಯಾವುದೇ ಕಾರಣಕ್ಕೂ ಅಸ್ತಿತ್ವ ಕಳೆದುಕೊಳ್ಳದೆ ಸ್ವಾಭಿಮಾನದಿಂದ ಬದುಕಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಕಿವಿಮಾತು ಹೇಳಿದರು.

ಅಂಗನವಾಡಿ, ಅಕ್ಷರ ದಾಸೋಹ, ಆಶಾ, ವಿಆರ್‌ಡಬ್ಲ್ಯೂ ಹಾಗೂ ಎಂಆರ್‌ಡಬ್ಲ್ಯೂ ಕ್ಷೇಮಾಭಿವೃದ್ಧಿ ಸಂಘ, ಪ್ರಜಾ ಸೇವಾ ಸಮಿತಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಹಯೋಗದಲ್ಲಿ ಇಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಜಾಗೃತಿ ಸಮಾವೇಶದಲ್ಲಿ ಮಾತನಾಡಿ, ‘ಗ್ರಾಮೀಣ ಮಹಿಳೆಯರು ಸರ್ಕಾರದ ಸವಲತ್ತು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಸಲಹೆ ನೀಡಿದರು.

‘ಸರ್ಕಾರ ಗ್ರಾಮೀಣ ಮಹಿಳೆಯರಿಗೆ ಮತ್ತಷ್ಟು ಕಾರ್ಯಕ್ರಮಗಳನ್ನು ರೂಪಿಸಬೇಕು. ಡಿಸಿಸಿ ಬ್ಯಾಂಕ್‌ನ ಸಾಲ ಸೌಲಭ್ಯ ಹಾಗೂ ಸರ್ಕಾರದ ಸವಲತ್ತುಗಳು ಸಮಾಜದ ಕಟ್ಟಡ ಕಡೆಯ ಬಡ ಕುಟುಂಬದ ಮಹಿಳೆಗೂ ತಲುಪಬೇಕು. ಈ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸಬೇಕು. ಅರ್ಹರಿಗೆ ಸವಲತ್ತು ಕಲ್ಪಿಸುವುದು ಅಧಿಕಾರಿಗಳ ಜವಾಬ್ದಾರಿ’ ಎಂದು ಸೂಚಿಸಿದರು.

‘ಮಹಿಳೆಯು ನಾಲ್ಕು ಗೋಡೆಗಳ ಮಧ್ಯೆ ಕುಟುಂಬ ನಿರ್ವಹಣೆಗಷ್ಟೇ ಸೀಮಿತವೆಂಬ ಕಾಲ ಬದಲಾಗಿದೆ. ಮಹಿಳೆಯರು ಈಗ ಪುರುಷರಿಗೆ ಸರಿ ಸಮಾನ. ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಉನ್ನತ ಸ್ಥಾನ ಅಲಂಕರಿಸಿ ಪುರುಷರಿಗೆ ಸಮನಾಗಿ ಬೆಳೆಯಬೇಕು’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಆಶಿಸಿದರು.

‘ಮಹಿಳಾ ಸಬಲೀಕರಣ ಎಂದರೆ ಮಹಿಳೆಯರ ಸುರಕ್ಷತೆಗೆ ಒತ್ತು ನೀಡುವುದಾಗಿದೆ. ಮಹಿಳೆಯರ ಮೇಲೆ ಸಮಾಜದಲ್ಲಿ ನಡೆಯುವ ದೌರ್ಜನ್ಯದ ಬಗ್ಗೆ ಅರಿವು ಮೂಡಿಸಿ ಧೈರ್ಯ ತುಂಬಿ ಸ್ವಾವಲಂಬಿಗಳಾಗಿಸಬೇಕು. ವೇದಗಳ ಕಾಲದಲ್ಲೂ ಮಹಿಳೆಯರಿಗೆ ಸಮಾನ ಅವಕಾಶಗಳಿದ್ದವು. ಮಹಿಳೆಯರನ್ನು ಕುಟುಂಬಕ್ಕೆ ಸೀಮಿತಗೊಳಿಸದೆ ಎಲ್ಲಾ ಕ್ಷೇತ್ರದಲ್ಲೂ ಭಾಗವಹಿಸುವಂತೆ ಅವಕಾಶ ಕಲ್ಪಿಸಬೇಕು’ ಎಂದರು.

ಸಮಾನ ಅವಕಾಶ: ‘ಸಮಾಜ ಸುಧಾರಕರು, ಮಹನೀಯರ ಹೋರಾಟ, ತ್ಯಾಗ ಬಲಿದಾನದಿಂದ ಮಹಿಳೆಯರಿಗೆ ಇಂದು ಸಮಾಜದಲ್ಲಿ ಪುರುಷರಷ್ಟೇ ಸಮಾನ ಅವಕಾಶ ದೊರೆತಿವೆ. ಮಹಿಳೆಯರು ಎಲ್ಲಾ ಅಡೆತಡೆ ಮೀರಿ ಎಲ್ಲಾ ರಂಗದಲ್ಲೂ ಸ್ಪರ್ಧೆ ನೀಡುತ್ತಿದ್ದಾರೆ. ಮಹಿಳೆಯರಿಗೆ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು’ ಎಂದು ಹೇಳಿದರು.

‘ಸರ್ಕಾರದ ಸೌಲಭ್ಯಗಳನ್ನು ಸಕಾಲಕ್ಕೆ ಮಹಿಳೆಯರಿಗೆ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜಿಲ್ಲಾಡಳಿತ ಸಹ ಮಹಿಳೆಯರ ಕ್ಷೇಮಾಭಿವೃದ್ಧಿಗೆ ಹೆಚ್ಚು ಒತ್ತು ನೀಡಲಿದೆ. ಮಹಿಳೆಯರು ಯಾವುದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಛೇರಿಗೆ ಬಂದು ತಮ್ಮ ಅಹವಾಲು ಸಲ್ಲಿಸಬಹುದು. ಮಹಿಳೆಯರಿಗೆ ಯಾವುದೇ ಸಮಸ್ಯೆಯಾದರೆ ಜಿಲ್ಲಾಡಳಿತ ಎಲ್ಲಾ ರೀತಿಯ ನೆರವು ನೀಡಲಿದೆ’ ಎಂದರು.

ಸುರಕ್ಷತೆಗೆ ಒತ್ತು: ‘ಮಹಿಳೆಯರಿಗೆ ಕಾನೂನು ನೆರವು ನೀಡಲು ಇಲಾಖೆ ಬದ್ಧವಾಗಿದೆ. ಮಹಿಳೆಯರ ಸುರಕ್ಷತೆಗೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಹೆಚ್ಚು ಒತ್ತು ಕೊಡುತ್ತೇವೆ. ದೌರ್ಜನ್ಯ, ಅತ್ಯಾಚಾರ, ಶೋಷಣೆ ಸಂಬಂಧ ಮಹಿಳೆಯರು ನಿರ್ಭಿತಿಯಿಂದ ಪೊಲೀಸ್‌ ಠಾಣೆಗೆ ಅಥವಾ ನಿಯಂತ್ರಣ ಕೊಠಡಿಗೆ ದೂರು ಕೊಡಬಹುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್‌ಬಾಬು ತಿಳಿಸಿದರು.

ಸಾಧಕ ಮಹಿಳೆಯರಿಗೆ ಪ್ರಜಾರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ, ಪ್ರಜಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಸಿ.ಶಿವಣ್ಣ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT