ಮಂಗಳವಾರ, ಜನವರಿ 21, 2020
29 °C

ಮಹಿಳೆಯರೇ ಪಾಠ ಕಲಿಸುತ್ತಾರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಡಿಸಿಸಿ ಬ್ಯಾಂಕ್ ವಿರುದ್ಧ ಟೀಕೆ ಅಥವಾ ಆರೋಪ ಮಾಡುವವರಿಗೆ ಮಹಿಳೆಯರೇ ತಕ್ಕ ಪಾಠ ಕಲಿಸುತ್ತಾರೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಡಿಸಿಸಿ ಬ್ಯಾಂಕ್ ಈ ಹಿಂದೆ ಕೋಮಾ ಸ್ಥಿತಿಯಲ್ಲಿದ್ದಾಗ ಮೇಲಕ್ಕೇತ್ತಲು ಯಾರೂ ಮುಂದೆ ಬರಲಿಲ್ಲ. ಈಗ ಬ್ಯಾಂಕ್‌ನ ಅಭಿವೃದ್ಧಿ ಸಹಿಸದೆ ಟೀಕೆ ಮಾಡುವವರ ಸಂಖ್ಯೆ ಹೆಚ್ಚಿದೆ. ಬ್ಯಾಂಕ್‌ ಅನ್ನು ಹಿಂದಿನ ಪರಿಸ್ಥಿತಿಗೆ ಕಳುಹಿಸುವ ಸಂಚು ನಡೆದಿದೆ’ ಎಂದು ದೂರಿದರು.

‘ಈವರೆಗೆ ಕೆಲ ದಲ್ಲಾಳಿಗಳು ಬ್ಯಾಂಕ್ ಸುತ್ತ ಸುತ್ತಾಡಿ ಸುಮ್ಮನಾದರು. ಈಗ ಮುಖಂಡರ ಮೇಲೆ ಒತ್ತಡ ತಂದು ಇಲ್ಲಸಲ್ಲದ ಆರೋಪ ಮಾಡಿಸುತ್ತಿದ್ದಾರೆ. ಬ್ಯಾಂಕ್‌ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುವವರ ಬಳಿ ದಾಖಲೆಪತ್ರ ಇದ್ದರೆ ಬಂದು ಪರಿಶೀಲಿಸಲಿ. ಅದು ಬಿಟ್ಟು ಹಾದಿಬೀದಿಯಲ್ಲಿ ಆರೋಪ ಮಾಡಿದರೆ ಏನು ಪ್ರಯೋಜನ? ಜನರ ನಂಬಿಕೆ ಹುಸಿ ಮಾಡಲು ಸಾಧ್ಯವಿಲ್ಲ’ ಎಂದು ಸಂಸದ ಎಸ್‌.ಮುನಿಸ್ವಾಮಿ ಅವರಿಗೆ ತಿರುಗೇಟು ನೀಡಿದರು.

‘ನಾನು ಒಳ್ಳೆ ಕೆಲಸ ಬೆಂಬಲಿಸುತ್ತೇನೆ. ಜನಪರ ಕೆಲಸ ಮಾಡುವ ಸಂಸ್ಥೆಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು. ಸಂಸದರು ರಾಜಕೀಯ ದುರುದ್ದೇಶದಿಂದ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ವಿರುದ್ಧ ಮಾತನಾಡಿದ್ದಾರೆ. ಈ ಗೊಂದಲಕ್ಕೆ ತೆರೆ ಎಳೆಯುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಪ್ರತಿಕ್ರಿಯಿಸಿ, ‘ಕಾಯ್ದೆ ನೆಪದಲ್ಲಿ ದೇಶದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆದಿದೆ. ಈ ಕಾಯ್ದೆ ತಡೆ ಹಿಡಿಯುವುದು ಸೂಕ್ತ’ ಎಂದು ಅಭಿಪ್ರಾಯಪಟ್ಟರು.

ಪ್ರತಿಕ್ರಿಯಿಸಿ (+)