ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಬೀಸಿ ಕರೆಯುತ್ತಿದೆ ಯರಗೋಳ್ ಡ್ಯಾಂ

Published 24 ಸೆಪ್ಟೆಂಬರ್ 2023, 6:14 IST
Last Updated 24 ಸೆಪ್ಟೆಂಬರ್ 2023, 6:14 IST
ಅಕ್ಷರ ಗಾತ್ರ

ವರದಿ: ಕಾಂತರಾಜ್

ಬಂಗಾರಪೇಟೆ: ಝಯ್ಗುಟ್ಟುವ ಜೇನುನೊಣಗಳ ಶಬ್ದ, ಯತ್ತ ನೋಡಿದರೂ ಹಚ್ಚು ಹಸಿರಾದ ಮರಗಿಡಗಳು, ಎರಡು ಬೆಟ್ಟಗಳ ನಡುವೆ ಸ್ಥಬ್ದವಾಗಿ ನಿಂತಿರುವ ನೀರು...

ಇದು ಕೋಲಾರ ಜಿಲ್ಲೆಯ ಮೂರು ನಗರ ಹಾಗೂ 45 ಹಳ್ಳಿಗಳಿಗೆ ನೀರು ಒದಗಿಸಲು ನಿರ್ಮಿಸಿರುವ ಬಂಗಾರಪೇಟೆ ತಾಲ್ಲೂಕಿನ ಏಕೈಕ ಜಲಾಶಯ ಯರಗೋಳ್ ಡ್ಯಾಂನ ದೃಶ್ಯವಿದು.

ತಮಿಳುನಾಡಿನ ಗಡಿ ಭಾಗದ ಯರಗೋಳ್ ಎಂಬ ಪುಟ್ಟ ಗ್ರಾಮದ ಬಳಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲಾಗಿದೆ.

ಬಂಗಾರಪೇಟೆ ಪಟ್ಟಣದಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಯರಗೋಳ್ ಡ್ಯಾಂನ ಸೊಬಗು ಆಕರ್ಷಣೆಯಾಗಿದ್ದು, ಕಣ್ಣಿಗೆ ಹಬ್ಬದಂತಿದೆ. ಡ್ಯಾಂ ಅಂಚಿನ ಮರ ಗಿಡಗಳಲ್ಲಿನ ಹಕ್ಕಿಗಳ ಕಲರವ. ಹಕ್ಕಿಗಳ ಗೂಡು, ಅಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಅರಣ್ಯ. ಬಗೆ ಬಗೆಯ ಮರಗಳು ಪರಿಸರ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿವೆ.

ಪ್ರಸ್ತುತ ಡ್ಯಾಂ ಭರ್ತಿಯಾಗಿದ್ದು, ಅಣೆಕಟ್ಟೆಯಿಂದ ಉತ್ತರಕ್ಕೆ ಸುಮಾರು 1.5 ಕಿ.ಮೀ. ಹಾಗೂ ಪೂರ್ವ ಪಶ್ಚಿಮಕ್ಕೆ 1 ಕಿ.ಮೀ.ವ್ಯಾಪ್ತಿಯಲ್ಲಿ ನೀರು ವ್ಯಾಪಿಸಿದೆ.

ಎರಡು ವರ್ಷದ ಹಿಂದೆ ಈ ಜಾಗ ಬರೀ ನೀರು ಹರಿಯುವ ಹಳ್ಳ ಅಷ್ಟೇ. ಹೆಚ್ಚೆಂದರೆ ದನಕರುಗಳಿಗೆ ನೀರುಣಿಸುವ ಜಾಗ. ಈಗ ಡ್ಯಾಂ ಹತ್ತಾರು ಹಳ್ಳಿಗಳಿಗೆ ಉಸಿರಾಗಿದೆ. ಬತ್ತಿಹೋಗಿದ್ದ ಕೆರೆ, ಕುಂಟೆ, ಕೊಳವೆಬಾವಿಗಳಲ್ಲಿ ಜೀವಜಲ ಪುಟಿಯುತ್ತಿದೆ. ಅಳಿವಿನ ಅಂಚಿನಲ್ಲಿದ್ದ ಕೋಟ್ಯಂತರ ಜೀವಿಗಳ ಉಗಮ ಸ್ಥಾನವಾಗಿ ಬದಲಾಗಿದೆ.

ಡ್ಯಾಂ ಬಹುತೇಕ ಅರಣ್ಯ ಪ್ರದೇಶದಲ್ಲಿ ಒಟ್ಟು 375.37 ಎಕರೆಯಲ್ಲಿ ವ್ಯಾಪಿಸಿದೆ. ಆ ಪೈಕಿ 153.15 ಎಕರೆ ಅರಣ್ಯ ಭೂಮಿ, 127.10 ಎಕರೆ ಖಾಸಗಿ ಭೂಮಿ ಹಾಗೂ 95.12 ಎಕರೆ ಸರ್ಕಾರಿ ಗೋಮಾಳವನ್ನು ಆಕ್ರಮಿಸಿಕೊಂಡಿದೆ.

500 ಎಂಸಿಎಫ್‌ಸಿಟಿ ಸಾಮರ್ಥ್ಯದ ಈ ಅಣೆಕಟ್ಟು ನಿರ್ಮಾಣಕ್ಕೆ ₹160 ಕೋಟಿ ವೆಚ್ಚ ತಗುಲಿದೆ. ಡ್ಯಾಂನಿಂದ ಮೂರು ನಗರಗಳಿಗೆ ಪೈಪ್‌ಲೈನ್‌ ಅಳವಡಿಕೆ, ನೀರು ಸಂಸ್ಕರಣಾ ಘಟಕ, ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಸೇರಿದಂತೆ ಇತರೆ ಕಾಮಗಾರಿಗಳಿಗೆ ₹79.92 ಕೋಟಿ ವ್ಯಯಿಸಿದ್ದು, ಒಟ್ಟು ₹240 ಕೋಟಿ ವೆಚ್ಚವಾಗಿದೆ.   

ಡ್ಯಾಂ ಸಮೀಪ ಸುಂದರ ಉದ್ಯಾನ ನಿರ್ಮಿಸಿ, ಅಗತ್ಯ ಸೌಲಭ್ಯ ಒದಗಿಸಬೇಕು ಎನ್ನುವುದು ಸುತ್ತಲಿನ ಗ್ರಾಮಸ್ಥರ ಆಗ್ರಹವಾಗಿದೆ.

ಯರಗೋಳ್ ಡ್ಯಾಂ ತುಂಬಿ ತಮಿಳುನಾಡಿನತ್ತ ಹರಿಯುತ್ತಿರುವುದು 
ಯರಗೋಳ್ ಡ್ಯಾಂ ತುಂಬಿ ತಮಿಳುನಾಡಿನತ್ತ ಹರಿಯುತ್ತಿರುವುದು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT