ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6ಕ್ಕೆ ಯುವಜನ ಹಕ್ಕಿನ ಮೇಳ

Last Updated 4 ಮಾರ್ಚ್ 2021, 13:23 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯದಲ್ಲಿ ಯುವಜನ ಸಬಲೀಕರಣ ನಿಗಮ ಸ್ಥಾಪನೆ ಮತ್ತು ಯುವಜನರ ಹಕ್ಕುಗಳಿಗೆ ಜಿಲ್ಲಾ ಕೇಂದ್ರದಲ್ಲಿ ಮಾರ್ಚ್‌ 6ರಂದು ಯುವಜನ ಹಕ್ಕಿನ ಮೇಳ ಹಮ್ಮಿಕೊಳ್ಳಲಾಗಿದೆ’ ಎಂದು ಯುವ ಮುನ್ನಡೆ ಸಂಘಟನೆ ಸದಸ್ಯೆ ಸುನಿತಾ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲಾ ಕೇಂದ್ರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆಯುವ ಮೇಳವನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಉದ್ಘಾಟಿಸುತ್ತಾರೆ. ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು, ಸಾಹಿತಿ ಸಿ.ಜಿ.ಲಕ್ಷ್ಮೀಪತಿ ಅತಿಥಿಗಳಾಗಿ ಭಾಗವಹಿಸುತ್ತಾರೆ’ ಎಂದರು.

‘ಮೇಳದ ದಿನ ಬೆಳಿಗ್ಗೆ ನಗರದ ಹೊಸ ಬಸ್ ನಿಲ್ದಾಣದಿಂದ ಮೆಕ್ಕೆ ವೃತ್ತದವರೆಗೆ ಮೆರವಣಿಗೆ ಬಂದು ಮಾನವ ಸರಪಳಿ ರಚಿಸಲಾಗುತ್ತದೆ. ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಯುವಜನರಿಗೆ ಸಂಬಂಧಿಸಿದ ಸೃಜನಶೀಲ ಆಲೋಚನೆ ಮತ್ತು ಯೋಜನೆಗಳ ವಿಚಾರವಾಗಿ ಚಿಂಥನ ಮಂಥನ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರತಿನಿಧಿಗಳು ಮೇಳದಲ್ಲಿ ಭಾಗವಹಿಸುತ್ತಾರೆ’ ಎಂದು ವಿವರಿಸಿದರು.

‘ರಾಜ್ಯ ಸರ್ಕಾರ 2013ರಲ್ಲಿ ಸಚಿವ ಸಂಪುಟದಲ್ಲಿ ಕೈಗೊಂಡ ತೀರ್ಮಾನದಂತೆ ಯುವಜನ ಸಬಲೀಕರಣ ನಿಗಮ ಸ್ಥಾಪಿಸಬೇಕು. ಯುವಜನರಿಗೆ ಶಿಕ್ಷಣ, ಆರೋಗ್ಯ, ಉದ್ಯೋಗದ ಭರವಸೆ ನೀಡಬೇಕು. ಸರ್ಕಾರ ಧರ್ಮ, ಜಾತಿ, ಪ್ರದೇಶದ ಆಧಾರದಲ್ಲಿ ನಿಗಮ ಹಾಗೂ ಪ್ರಾಧಿಕಾರ ರಚಿಸುತ್ತಿದೆ. ಇಂತಹ ನಿಗಮಗಳಿಂದ ಉಳ್ಳವರಿಗೆ ಮಾತ್ರ ಅನುಕೂಲವಾಗುತ್ತಿದೆ. ಮಧ್ಯಮ ಮತ್ತು ಕೆಳ ವರ್ಗದವರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಕಾರಾತ್ಮಕ ಕೆಲಸ: ‘ರಾಜ್ಯದಲ್ಲಿ ಸುಮಾರು 2 ಕೋಟಿ ಯುವಜನರಿದ್ದಾರೆ. ಇವರೆಲ್ಲಾ ಸಬಲೀಕರಣಗೊಂಡರೆ ರಾಜ್ಯಕ್ಕೆ ಮತ್ತು ದೇಶಕ್ಕೆ ಭವಿಷ್ಯದಲ್ಲಿ ಸಕಾರಾತ್ಮಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಯುವಜನರ ಹಕ್ಕು ಘೋಷಣೆಯಾಗಬೇಕು. ಯುವಜನರ ಸಬಲೀಕರಣಕ್ಕೆ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಯುವಜನ ಆಯೋಗ ರಚಿಸಬೇಕು’ ಎಂದು ಒತ್ತಾಯಿಸಿದರು.

ಸಂಘಟನೆ ಸದಸ್ಯರಾದ ದೀಪಿಕಾ, ಸಂಕೇತ್‌, ಮೇಘನಾ, ಆನಂದ್, ರಂಜನ್‌, ರಾಜಕುಮಾರ್, ನಂದನ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT