ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಯುವಜನೋತ್ಸವ: ಜನಪ್ರತಿನಿಧಿ, ಅಧಿಕಾರಿಗಳೂ ಗೈರು!

Published 26 ನವೆಂಬರ್ 2023, 13:11 IST
Last Updated 26 ನವೆಂಬರ್ 2023, 13:11 IST
ಅಕ್ಷರ ಗಾತ್ರ

ಕೋಲಾರ: ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮ ಪ್ರೇಕ್ಷಕರು ಹಾಗೂ ಕಲಾವಿದರ ಕೊರತೆಯಿಂದ ಬಿಕೋ ಎನ್ನುತ್ತಿತ್ತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನೆಹರೂ ಯುವ ಕೇಂದ್ರ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಈ ಕಾರ್ಯಕ್ರಮ  ಏರ್ಪಡಿಸಲಾಗಿತ್ತು.

ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ನಿಗದಿಯಾಗಿದ್ದು ಕಲಾತಂಡಗಳು, ಗಣ್ಯರು ಸಕಾಲಕ್ಕೆ ಆಗಮಿಸದ ಹಿನ್ನೆಲೆಯಲ್ಲಿ 11.45ಕ್ಕೆ ಪ್ರಾರಂಭವಾಯಿತು.

ಉದ್ಘಾಟನೆ ಮಾಡಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಅಧ್ಯಕ್ಷತೆ ವಹಿಸಬೇಕಿದ್ದ ಶಾಸಕ ಕೊತ್ತೂರು ಜಿ.ಮಂಜುನಾಥ್, ಮುಖ್ಯ ಅತಿಥಿಗಳು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮಾ ಬಸವಂತಪ್ಪ, ಪೊಲೀಸ್‌ ವರಿಷ್ಠಾಧಿಕಾರಿಗಳಾದ ಎಂ.ನಾರಾಯಣ, ಕೆ.ಎಂ.ಶಾಂತರಾಜು ಬಂದಿರಲಿಲ್ಲ.

ಜನಪ್ರತಿನಿಧಿಗಳಲ್ಲಿ ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ಎಂ.ಎಲ್.ಅನಿಲ್ ಕುಮಾರ್ ಹಾಗೂ ಅಧಿಕಾರಿಗಳಲ್ಲಿ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಆರ್.ಗೀತಾ ಮಾತ್ರ ಇದ್ದರು. ಪ್ರೇಕ್ಷಕರ ಕೊರತೆ ಬಗ್ಗೆ ಹಾಗೂ ಕಾರ್ಯಕ್ರಮದ ಅವ್ಯವಸ್ಥೆ ಕುರಿತು ಅನಿಲ್ ಕುಮಾರ್, ಇಂಚರ ಗೋವಿಂದರಾಜು ಹಾಗೂ ಸಂಘ–ಸಂಸ್ಥೆಗಳ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಿಂದೆ ಹೆಚ್ಚು ಆದ್ಯತೆ ಇತ್ತು. ಅದೇ ರೀತಿ ಆಸಕ್ತರಿಗೆ ಪ್ರೋತ್ಸಾಹ ದೊರೆಯುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಅರಿವು ಮೂಡಿಸುವ, ಪ್ರಚಾರ ಮಾಡುವ ಕಾರ್ಯ ನಡೆಯುತ್ತಿಲ್ಲ. ಹೀಗಾಗಿ, ಕಾರ್ಯಕ್ರಮ ವಿಫಲವಾಗಿದೆ’ ಎಂದರು.

ಸ್ಪರ್ಧೆಗಳ ಆಯ್ಕೆಗೆ ಕೇವಲ 10 ಕಲಾ ತಂಡಗಳು ನೋಂದಣಿಯಾಗಿದ್ದವು. ಯುವಕರಲ್ಲಿ ಕಲೆ, ಜಾನಪದ, ಸಂಗೀತ ಮತ್ತು ಸಂಸ್ಕೃತಿ ಬಗ್ಗೆ ಕಾಳಜಿ ಹೆಚ್ಚಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಸ್ಪರ್ಧೆ ಏರ್ಪಡಿಸಲಾಗುತ್ತದೆ. ವೈಯಕ್ತಿಕ ಸ್ಪರ್ಧೆಗಳಲ್ಲಿ ಆಯ್ಕೆಯಾದ ವಿಜೇತರಿಗೆ ಪ್ರಥಮ ಬಹುಮಾನ ₹ 2,000, ದ್ವಿತೀಯ ₹ 1,500 ರೂ ಹಾಗೂ ಗುಂಪು ಸ್ಪರ್ಧೆಗಳಲ್ಲಿ ₹ 10,000 ಹಾಗೂ ದ್ವಿತೀಯ ಬಹುಮಾನ ₹ 5,000 ಕೊಡಲಾಗುತ್ತದೆ.

ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಯುವಜನೋತ್ಸವಕ್ಕೆ ಪ್ರೇಕ್ಷಕರ ಕೊರತೆ 
ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಯುವಜನೋತ್ಸವಕ್ಕೆ ಪ್ರೇಕ್ಷಕರ ಕೊರತೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT