ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್‌ಗೆ ಜಿ.ಪಂ ಅಧ್ಯಕ್ಷರ ದಿಢೀರ್‌ ಭೇಟಿ

Last Updated 7 ಫೆಬ್ರುವರಿ 2020, 15:44 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ಕೆಂಬೋಡಿ ಗ್ರಾಮದ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್‌ ಗುರುವಾರ ರಾತ್ರಿ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಾಸ್ಟೆಲ್‌ ಅಡುಗೆ ಕೋಣೆ, ಊಟದ ಕೊಠಡಿ, ಉಗ್ರಾಣ, ಶೌಚಾಲಯ, ವಸತಿ ಕೊಠಡಿಗಳ ಸ್ಥಿತಿಗತಿ ಪರಿಶೀಲಿಸಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು.

‘ಹಾಸ್ಟೆಲ್‌ ಸಿಬ್ಬಂದಿ ವೇಳಾಪಟ್ಟಿ ಪ್ರಕಾರ ಊಟ, ತಿಂಡಿ ಕೊಡುತ್ತಿಲ್ಲ. ನೀರಿನ ಸಮಸ್ಯೆ ಗಂಭೀರವಾಗಿದ್ದು, ಸ್ನಾನಕ್ಕೆ ಬಿಸಿ ನೀರು ಬರುತ್ತಿಲ್ಲ. ಸೊಳ್ಳೆ ಕಾಟ ಹೆಚ್ಚಿದ್ದು, ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಸೊಳ್ಳೆ ಪರದೆ ಕೊಟ್ಟಿಲ್ಲ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಹಾಸ್ಟೆಲ್‌ ಮೇಲ್ವಿಚಾರಕ ಜಿ.ಎಂ.ಸುರೇಶ್‌, ‘ಸರ್ಕಾರದಿಂದ ಇನ್ನು ಸೊಳ್ಳೆ ಪರದೆ ಬಂದಿಲ್ಲ. ಇಲಾಖೆ ಅಧಿಕಾರಿಗಳನ್ನು ಸಹ ಕೇಳಲಾಗಿದೆ. ಆದರೆ, ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ’ ಎಂದು ತಿಳಿಸಿದರು.

ಬಾಲಕರ ಹಾಸ್ಟೆಲ್‌ ಉಗ್ರಾಣದಲ್ಲಿ ಮಕ್ಕಳಿಗೆ ವಿತರಿಸದೆ ದಾಸ್ತಾನು ಮಾಡಿದ್ದ ಪುಸ್ತಕ, ತರಕಾರಿ, ಖಾಲಿ ಸಾಮಗ್ರಿ ಪೆಟ್ಟಿಗೆಗಳನ್ನು ಗಮನಿಸಿದ ಜಿ.ಪಂ ಅಧ್ಯಕ್ಷರು ಮೇಲ್ವಿಚಾರಕನನ್ನು ತರಾಟೆಗೆ ತೆಗೆದುಕೊಂಡರು.

ಕೆಂಡಾಮಂಡಲ

ಮಕ್ಕಳ ಬಯೋಮೆಟ್ರಿಕ್ ಹಾಜರಾತಿ ದಾಖಲೆ ಮತ್ತು ಆಹಾರ ಸಾಮಗ್ರಿ ದಾಸ್ತಾನು ನಿರ್ವಹಣಾ ಪುಸ್ತಕ ತೋರಿಸುವಂತೆ ಅಧ್ಯಕ್ಷರು ಸೂಚಿಸಿದಾಗ ಮೇಲ್ವಿಚಾರಕರು ಹಾಜರಾತಿ ಪುಸ್ತಕ ತೋರಿಸಿ, ‘ಆಹಾರ ಸಾಮಗ್ರಿಗಳ ದಾಸ್ತಾನು ನಿರ್ವಹಣಾ ಪುಸ್ತಕ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಕಚೇರಿಯಲ್ಲಿದೆ’ ಎಂದು ಹೇಳಿದರು.

ಇದಕ್ಕೆ ಕೆಂಡಾಮಂಡಲರಾದ ಅಧ್ಯಕ್ಷರು, ‘ಹಾಸ್ಟೆಲ್‌ನ ದಾಖಲೆ ಪುಸ್ತಕಗಳು ಇಲ್ಲಿಯೇ ಇರಬೇಕು. ಸರಿಯಾಗಿ ಕೆಲಸ ಮಾಡಬೇಕೆಂಬ ಜವಾಬ್ದಾರಿಯಿಲ್ಲವೆ. ವಾರ್ಡನ್‌ಗಳ ಸಭೆ ನಡೆಸಿ 15 ದಿನವಾಗಿದೆ. ಹಾಸ್ಟೆಲ್‌ನ ಸೂಚನಾ ಫಲಕದಲ್ಲಿ ಅಧಿಕಾರಿಗಳ ದೂರವಾಣಿ ಸಂಖ್ಯೆ ನಮೂದಿಸಿಲ್ಲ. ದೂರು ಪೆಟ್ಟಿಗೆ ಸಹ ಅಳವಡಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಹಾಸ್ಟೆಲ್‌ ಪರಿಸ್ಥಿತಿ ವಾರದೊಳಗೆ ಸರಿ ಹೋಗಬೇಕು. ಇಲ್ಲದಿದ್ದರೆ ಶಿಸ್ತುಕ್ರಮ ಕೈಗೊಳ್ಳುತ್ತೇವೆ. ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಘಟಕದ ನೀರನ್ನೇ ಕೊಡಬೇಕು’ ಎಂದು ಸೂಚಿಸಿದರು.

ನಂತರ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದ ಅಧ್ಯಕ್ಷರು ದೂರಿನ ಪಟ್ಟಿಗೆ ತೆರೆದಾಗ, ವಿದ್ಯಾರ್ಥಿಗಳು ಆಟದ ಮೈದಾನ, ಕ್ರೀಡಾ ಸಾಮಗ್ರಿ, ಸ್ವಚ್ಛತೆ, ನೀರಿನ ಸಮಸ್ಯೆ ಬಗ್ಗೆ ದೂರು ಹಾಕಿರುವುದು ಕಂಡುಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT