ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಯೋಜನೆ ವಿಳಂಬ: ಸಿಇಒ ಗರಂ

ಪಿಡಿಇ– ಗ್ರಾ.ಪಂ ಅಧ್ಯಕ್ಷರ ವಿರುದ್ಧ ಶಿಸ್ತುಕ್ರಮ ಜರುಗಿಸುವ ಎಚ್ಚರಿಕೆ
Last Updated 7 ಡಿಸೆಂಬರ್ 2018, 12:42 IST
ಅಕ್ಷರ ಗಾತ್ರ

ಕೋಲಾರ: ‘ವಸತಿ ನಿರ್ಮಾಣದ ಪೈಲಟ್ ಯೋಜನೆಯನ್ನು 3 ವರ್ಷಗಳಲ್ಲಿ ಪೂರ್ಣಗೊಳಿಸದೆ ವಿಳಂಬ ಮಾಡಿದ್ದು, ರಾಜ್ಯದಲ್ಲಿ ಈ ಯೋಜನೆ ವಿಸ್ತರಣೆ ಅಸಾಧ್ಯ. ಇನ್ನಾದರೂ ಎಚ್ಚೆತ್ತು ಮನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸದಿದ್ದರೆ ಪಿಡಿಒಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತೇವೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದರು.

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಸಂಬಂಧ ಇಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಎಲ್ಲಾ ವರ್ಗದ ಬಡವರಿಗೆ ವಸತಿ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಪೈಲಟ್ ಯೋಜನೆಯಡಿ 18,556 ಮನೆಗಳ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿತ್ತು. ನಿರೀಕ್ಷೆಯಂತೆ ಎಲ್ಲಾ ಮನೆಗಳ ನಿರ್ಮಾಣ ಪೂರ್ಣಗೊಳ್ಳಬೇಕಿತ್ತು’ ಎಂದರು.

‘1,760 ಮನೆಗಳು ಕಾಮಗಾರಿ ಇನ್ನೂ ಆರಂಭವಾಗಿಲ್ಲ. 249 ಮನೆಗಳಿಗೆ ಫಲಾನುಭವಿಗಳನ್ನೇ ಆಯ್ಕೆ ಮಾಡಿಲ್ಲ. ಒಟ್ಟಾರೆ 7,086 ಮನೆಗಳ ನಿರ್ಮಾಣ ಕಾರ್ಯ ಬಾಕಿ ಉಳಿದಿರುವುದು ನಾಚಿಕೆಗೇಡು. ಫಲಾನುಭವಿ ಆಯ್ಕೆ ಪ್ರಕ್ರಿಯೆ ಒಂದು ವಾರದೊಳಗೆ ಪೂರ್ಣಗೊಳ್ಳಬೇಕು’ ಎಂದು ಸೂಚಿಸಿದರು.

‘ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮುಖ್ಯಮಂತ್ರಿಯವರ ಸಭೆಯಲ್ಲಿ ನಾನು ತಲೆ ತಗ್ಗಿಸುವಂತಾಗಿದೆ. ನಿರ್ಲಕ್ಷ್ಯ ಸಹಿಸುವುದಿಲ್ಲ. ಯೋಜನೆಗೆ ಸಹಕರಿಸದ ಗ್ರಾ.ಪಂ ಅಧ್ಯಕ್ಷರ ವಿರುದ್ಧವೂ ಶಿಸ್ತುಕ್ರಮಕ್ಕೆ ಶಿಫಾರಸು ಮಾಡುತ್ತೇವೆ. ಅವರೂ ಸಹ ಕಾನೂನು ವ್ಯಾಪ್ತಿಯಲ್ಲಿದ್ದಾರೆ. ಕಾಲಹರಣ ಮಾಡಿದರೆ ಯಾವುದೇ ಮುಲಾಜಿಲ್ಲದೆ ಇಬ್ಬರ ವಿರುದ್ಧವೂ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಹೇಳಿದರು.

ಜಿಪಿಎಸ್‌ ಬಾಕಿ: ‘ಶ್ರೀನಿವಾಸಪುರ ತಾಲ್ಲೂಕಿನಲ್ಲಿ 116 ಮನೆಗಳ ಮತ್ತು ಕೋಲಾರ ತಾಲ್ಲೂಕಿನಲ್ಲಿ 28 ಮನೆಗಳ ಜಿಪಿಎಸ್ ಕಾರ್ಯ ಇನ್ನೂ ಬಾಕಿಯಿದೆ. ಇದೇ ರೀತಿ ವಿಳಂಬ ಮಾಡಿದರೆ 10 ವರ್ಷವಾದರೂ ಮನೆ ನಿರ್ಮಾಣವಾಗಲ್ಲ. ಶಿಸ್ತುಕ್ರಮ ಜರುಗಿಸಿದರೆ ಮಾತ್ರ ಕೆಲಸ ಮಾಡುತ್ತೀರಾ. ಇತ್ತೀಚೆಗೆ ಅಮಾನತುಗೊಂಡ ಪಿಡಿಒ ಗತಿ ನಿಮಗೂ ಬರುತ್ತದೆ’ ಎಂದು ಕೆಂಡಾಮಂಡಲರಾದರು.

‘ಪ್ರಗತಿ ಪರಿಶೀಲನೆ ಸಭೆಯಲ್ಲಿ ನೀವು ಹೇಳಿದ ಕಟ್ಟುಕಥೆ ಕೇಳಿ ಕೇಳಿ ನಾನೂ ಕಥೆ ಕಲಿಯುವವನಾಗಿದ್ದೇನೆ. ಇನ್ನು ಮುಂದೆ ನಿಮ್ಮ ಆಟ ನಡೆಯಲ್ಲ. ಹಿಂದಿನ ಸಭೆಯಲ್ಲಿ ನೀಡಿದ ವರದಿಯನ್ನು ಈಗಿನ ಸಭೆಯ ವರದಿಯೊಂದಿಗೆ ಹೋಲಿಕೆ ಮಾಡಿ ನೋಡುತ್ತೇನೆ. ತಪ್ಪು ಕಂಡುಬಂದರೆ ನಿಮ್ಮನ್ನು ಯಾರೂ ರಕ್ಷಿಸಲ್ಲ’ ಎಂದರು.

ನೋಟಿಸ್‌ ನೀಡಿ: ‘45 ಫಲಾನುಭವಿಗಳನ್ನು ಆಯ್ಕೆ ಮಾಡಬೇಕಿದ್ದು, ಗ್ರಾ.ಪಂನ ಇಬ್ಬರು ಸದಸ್ಯರು ಅಡ್ಡಿಪಡಿಸುತ್ತಿದ್ದಾರೆ’ ಎಂದು ಚಲ್ದಿಗಾನಹಳ್ಳಿ ಪಿಡಿಒ ದೂರಿದರು. ಇದಕ್ಕೆ ಗರಂ ಆದ ಸಿಇಒ, ‘ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಒಗೆ ನೋಟಿಸ್‌ ನೀಡಿ’ ಎಂದು ಜಿ.ಪಂ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ್‌ ಅವರಿಗೆ ಆದೇಶಿಸಿದರು.

ಆಧಾರ್‌ ಕೇಂದ್ರ: ‘ಇಡೀ ಜಿಲ್ಲೆಯ ವಸತಿ ಯೋಜನೆ ಹಿಂದುಳಿಯಲು ಶ್ರೀನಿವಾಸಪುರ ತಾಲ್ಲೂಕಿನ ಪಿಡಿಒಗಳ ನಿರ್ಲಕ್ಷ್ಯ ಕಾರಣವಾಗಿದೆ. ನಿರ್ಲಕ್ಷ್ಯ ತೋರುವ ನಿಮ್ಮನ್ನು ಸೇವೆಯಲ್ಲಿ ಮುಂದುವರಿಸಿ ಕಾಲಹರಣ ಮಾಡುವಅಗತ್ಯವಿಲ್ಲ. ನಿಮ್ಮ ನಿರ್ಲಕ್ಷ್ಯಕ್ಕೆ ಪ್ರತಿ ಬಾರಿ ಮುಖ್ಯಮಂತ್ರಿಯವರ ಸಭೆಯಲ್ಲಿ ನಾನು ತಲೆ ತಗ್ಗಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಆಧಾರ್ ಜೋಡಣೆ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಗಿದೆ’ ಎಂದು ಕೆಲ ಪಿಡಿಒಗಳು ಸಮಜಾಯಿಷಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ‘ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಆಧಾರ್‌ ಕೇಂದ್ರ ತೆರೆಯಲುಸೂಚಿಸಲಾಗಿದ್ದು, 60 ಕಡೆ ಆಗಿದೆ. ಉಳಿದ ಕಡೆ ವಾರದೊಳಗೆ ಆಧಾರ್‌ ಕೇಂದ್ರ ಆರಂಭಿಸಿ ವರದಿ ನೀಡಬೇಕು’ ಎಂದು ಸೂಚಿಸಿದರು.

ಸುಮ್ಮನಿರುವುದಿಲ್ಲ: ‘ಕೆಲಸ ಮಾಡದ ಪಿಡಿಒಗಳನ್ನು ನಾನು ಅಮಾನತು ಮಾಡಿದರೆ ಸಾಹೇಬ್ರು (ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್‌) ಎಲ್ಲಾದ್ರೂ ಹೋಗ್ಲಿ ಬಿಡಪ್ಪ ಎಂದು ಹೇಳುತ್ತಾರೆ. ಇನ್ನು ಸುಮ್ಮನಿರುವುದಿಲ್ಲ. ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ. ಸಾಹೇಬ್ರು ಹೇಳಿದರೂ ಕೇಳಲ್ಲ’ ಎಂದು ಜಗದೀಶ್‌ ಅವರು ರಮೇಶ್‌ಕುಮಾರ್‌ರ ಆಪ್ತ ಕಾರ್ಯದರ್ಶಿ ರೂಪಶ್ರೀ ಅವರಿಗೆ ತಿಳಿಸಿದರು.

‘ನಾನು ಜಿಲ್ಲೆಗೆ ವರ್ಗಾವಣೆಯಾಗಿ ಬಂದಾಗ ಜಿಲ್ಲೆಯು ವಸತಿ ನಿರ್ಮಾಣದಲ್ಲಿ 28ನೇ ಸ್ಥಾನದಲ್ಲಿತ್ತು. ಈಗ 18ನೇ ಸ್ಥಾನಕ್ಕೆ ಬಂದಿದೆ. ಮುಂದೆ 8ನೇ ಸ್ಥಾನಕ್ಕೆ ಬರಬೇಕು ಎನ್ನುವುದು ನನ್ನ ಗುರಿ. ರದ್ದಾಗಿರುವ 1,207 ಮನೆ ಹಾಗೂ ಈ ಹಿಂದೆ ₹ 70 ಸಾವಿರ ಅನುದಾನದಲ್ಲಿ ಮಂಜೂರಾಗಿರುವ ಮನೆಗಳನ್ನು ಈಗಿನ ದರಕ್ಕೆ ಪರಿವರ್ತಿಸಿ ಕೊಡಿ’ ಎಂದು ಮನವಿ ಮಾಡಿದರು.

ಅಂಕಿ ಅಂಶ.....
* 18,556 ಮನೆಗೆಳಿಗೆ ಅನುಮೋದನೆ
* 249 ಫಲಾನುಭವಿಗಳ ಆಯ್ಕೆ ಆಗಿಲ್ಲ
* 7,086 ಮನೆ ನಿರ್ಮಾಣ ಕಾರ್ಯ ಬಾಕಿ
* 1,760 ಮನೆ ಕಾಮಗಾರಿ ಆರಂಭವಾಗಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT