ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಗೊಂದಿ ಅಭಿವೃದ್ಧಿಗೆ ಸರ್ಕಾರ ಚಿಂತನೆ

ವಿಜಯನಗರದ ಮೂಲ ರಾಜಧಾನಿ ಪ್ರವಾಸಿ ತಾಣ ಮಾಡುವಲ್ಲಿ ಮಾಸ್ಟರ್‌ ಪ್ಲಾನ್‌
Last Updated 15 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಗಂಗಾವತಿ: ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯಲ್ಪಟ್ಟ ಸಾಮ್ರಾಜ್ಯ ವಿಜಯನಗರದ ಮೂಲ ರಾಜಧಾನಿ ಎಂದು ಗುರುತಿಸಿಕೊಂಡಿರುವ ತಾಲ್ಲೂಕಿನ ಧಾರ್ಮಿಕ ಪುಣ್ಯಕ್ಷೇತ್ರ, ಐತಿಹಾಸಿಕ ತಾಣ ಆನೆಗೊಂದಿಯ ಅಭಿವೃದ್ಧಿಗೆ ಸರ್ಕಾರ ಮುಂದಾಗಿರುವುದು ಸ್ಥಳೀಯರ ಸಂತಸಕ್ಕೆ ಕಾರಣವಾಗಿದೆ.

’ಆನೆಗೊಂದಿ ಸೇರಿದಂತೆ ರಾಜ್ಯದ 20ಕ್ಕೂ ಹೆಚ್ಚು ಸ್ಥಳಗಳನ್ನು ಪ್ರವಾಸಿ ತಾಣವಾಗಿಸುವ ಉದ್ದೇಶಕ್ಕೆ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದ್ದು, ಈಗಾಗಲೆ ಖಾಸಗಿ ಸಂಸ್ಥೆಗಳ ಮೂಲಕ ಸಮೀಕ್ಷೆಯೂ ಮುಗಿದಿದೆ’ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ ಅವರು ಬೆಳಗಾವಿ ಅಧಿವೇಶನದಲ್ಲಿ ನೀಡಿರುವ ಹೇಳಿಕೆಯು ಸ್ಥಳೀಯರ ಸಂತಸಕ್ಕೆ ಕಾರಣವಾಗಿದೆ.

ಹಂಪಿಯ ವಿಜಯನಗರ ಸಾಮ್ರಾಜ್ಯಕ್ಕೆ ಇತಿಹಾಸದಲ್ಲಿ ದೊರೆತ ಗೌರವ, ಸ್ಥಾನಮಾನ ಆನೆಗೊಂದಿಗೂ ದೊರೆಯಬೇಕಿದೆ. ಆದರೆ, ಈ ಭಾಗದ ಪ್ರತಿನಿಧಿಗಳ, ಸಂಘಟನೆಗಳ ಹೋರಾಟದ ಕೊರತೆಯಿಂದಾಗಿ ಆನೆಗೊಂದಿ ತೆರೆಯ ಮರೆಗೆ ಸರೆದಿದೆ.

’ಆನೆಗೊಂದಿ ಉತ್ಸವ ಆಚರಣೆಗೂ ಪ್ರತಿವರ್ಷ ಈ ಭಾಗದ ಶಾಸಕ, ಸಂಸದ, ಸಚಿವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮುಖ್ಯಮಂತ್ರಿ ಅವರ ಮುಂದೆ ಅನುದಾನಕ್ಕಾಗಿ ಕೈಯೊಡ್ಡಿ ನಿಲ್ಲುವ ಸ್ಥಿತಿಯಿದೆ. ನಿಗಧಿತ ಅವಧಿಯಲ್ಲಿ ಎಂದೂ ಉತ್ಸವ ಆಚರಣೆಯಾಗಿಲ್ಲ. ಎರಡು, ಮೂರು ವರ್ಷಕ್ಕೊಮ್ಮೆ ಉತ್ಸವವಾಗಿರುವುದೇ ಸಾಧನೆ’ ಎಂದು ಸ್ಥಳೀಯ ಯುವಕರು ಬೇಸರ ವ್ಯಕ್ತಪಡಿಸುತ್ತಾರೆ.

ಆನೆಗೊಂದಿ ಹಾಗೂ ಸುತ್ತಲಿನ ಪ್ರದೇಶದಲ್ಲಿರುವ ನವ ವೃಂದಾನವನ ಗಡ್ಡೆ, ಪಂಪಾ ಸರೋವರ, ಅಂಜನಾದ್ರಿ ಬೆಟ್ಟ, ಋಷ್ಯಮುಖ ಪರ್ವತ, ತಾರಾ ಪರ್ವತ, ಚಿಂತಾಮಣಿ, ವಾಲಿಕಿಲ್ಲಾ, ಮೇಗೋಟೆ ದುರ್ಗಾ, ಆದಿ ಪರಾಶಕ್ತಿ ದೇಗುಲ.. ಹೀಗೆ ಸಾಲುಸಾಲು ಕ್ಷೇತ್ರಗಳು ಧಾರ್ಮಿಕವಾಗಿ ಆನೆಗೊಂದಿಯ ಹಿರಿಮೆಯನ್ನು ಹೆಚ್ಚಿಸಿವೆ.

ಪೌರಾಣಿಕ ಹಾಗೂ ಐತಿಹಾಸಿಕವಾಗಿ ಆನೆಗೊಂದಿ ರಾಮಾಯಾಣದ ಕಾಲಕ್ಕೆ ಸೇರಿದ್ದು ಎನ್ನಲಾಗುತ್ತಿದ್ದು, ಇದಕ್ಕೆ ಕಿಷ್ಕಿಂಧೆ ಎಂತಲೂ ಕರೆಯುತ್ತಾರೆ. ಆಂಜನೇಯನ ಜನ್ಮಸ್ಥಾನ, ವಾಲಿ-ಸುಗ್ರೀವರ ಕದನ ಕೋಟೆ, ವಾಲಿ ಭಂಡಾರ, ಪುರಾತನ ಲಕ್ಷ್ಮಿ ದೇವಸ್ಥಾನ ಹೀಗೆ ಸಾಲುಸಾಲು ಪೌರಾಣಿಕ ತಾಣಗಳೂ ಇಲ್ಲಿವೆ.

ಇಷ್ಟೆ ಅಲ್ಲದೇ ವಿದೇಶಿಗರ ನೆಚ್ಚಿನ ತಾಣ ಹಾಗೂ ಹೈದರಾಬಾದ್ ಮತ್ತು ಬೆಂಗಳೂರಿನ ಟೆಕ್ಕಿಗಳ ವಾರಂತ್ಯದ ಮೋಜು ಮಸ್ತಿಯ ತಾಣವಾಗಿ ವಿರೂಪಾಪುರಗಡ್ಡೆ ಮುನ್ನೆಲೆಯಲ್ಲಿ ಗುರುತಿಸಿಕೊಂಡಿದೆ. ಪ್ರಾಕೃತಿಕವಾಗಿಯೂ ಆನೆಗೊಂದಿ ಸುತ್ತಲಿನ ಶಿಲಾಪರ್ವತಗಳು ಪ್ರವಾಸಿಗರನ್ನು ಸೆಳೆಯುತ್ತವೆ.

ಪ್ರವಾಸಿ ತಾಣವಾಗಿ ಆನೆಗೊಂದಿ ಅಭಿವೃದ್ಧಿಯಾಗಲು ಬಹು ಆಯಾಮದಿಂದಲೂ ಹೇಳಿಮಾಡಿಸಿದ ತಾಣ. ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿಯಾದರೆ ಸಹಜವಾಗಿ ನೂರಾರು ಉದ್ಯೋಗ ಸೃಷ್ಟಿಯಾಗಿ ಆದಾಯ ಹೆಚ್ಚಲಿದೆ ಎನ್ನುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT