ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೈಕಲ್‌ ಟ್ಯೂಬ್‌ನಿಂದ ಕಟ್ಟಿ ಬೆಂಕಿಗೆಸೆದರು...

ಕೊಲೆ ಯತ್ನದ ರೀತಿ ಕೇಳಿಯೇ ದಂಗಾದ ಪೊಲೀಸರು
Published : 14 ಜನವರಿ 2018, 10:43 IST
ಫಾಲೋ ಮಾಡಿ
Comments

ಕುಕನೂರು (ಕೊಪ್ಪಳ ಜಿಲ್ಲೆ): ಗಂಡನನ್ನು ಸುಟ್ಟುಹಾಕಿ ಕೊಲೆಗೆ ಯತ್ನಿಸಿರುವ ಪತ್ನಿ ಮತ್ತು ಕುಟುಂಬದವರ ವಿಚಾರಣೆ ನಡೆಸಿದ ಪೊಲೀಸರೇ ಇಡೀ ಘಟನಾವಳಿಯ ಮಾಹಿತಿ ಕೇಳಿ ದಂಗಾಗಿದ್ದಾರೆ.

ಜ. 10ರಂದು ಕುಕನೂರು ಸಮೀಪದ ಹರಿಶಂಕರ ಬಂಡಿ ಗ್ರಾಮದಲ್ಲಿ ಪ್ರಭಯ್ಯ ಬಸಯ್ಯ ಹಿರೇಮಠ ಅವರ ಕೊಲೆಗೆ ಪತ್ನಿ ದಾಕ್ಷಾಯಿಣಿ, ಮಕ್ಕಳು ಮತ್ತು ಪ್ರಭಯ್ಯ ಅವರ ತಮ್ಮನ ಪತ್ನಿ ಸುಮಿತ್ರಾ ಯತ್ನಿಸಿದ ಪ್ರಕರಣ ನಡೆದಿತ್ತು.

ದಾಕ್ಷಾಯಿಣಿ ಅವರ ಮೇಲೆ ನಿತ್ಯ ಶಂಕೆ ವ್ಯಕ್ತಪಡಿಸಿ ಜಗಳ ತೆಗೆಯುತ್ತಿದ್ದ ಪ್ರಭಯ್ಯ ಅವರನ್ನು ಅಂದು ಕೊಡಲಿ ಹಿಡಿಕೆಯಿಂದ ಹೊಡೆದು ಊರ ಹೊರಗಿನ ಹೊಲದಲ್ಲಿ ತೊಗರಿ ಕಡ್ಡಿಗಳನ್ನು ರಾಶಿ ಹಾಕಿ ಬೆಂಕಿ ಹಚ್ಚಿ ಸುಟ್ಟುಹಾಕಲು ಯತ್ನಿಸಿದ್ದ ಪ್ರಕರಣ ನಡೆದಿತ್ತು. ಈಗ ಆರೋಪಿಗಳೆಲ್ಲರೂ ಪೊಲೀಸ್‌ ವಶದಲ್ಲಿದ್ದಾರೆ.

ಸ್ಮೃತಿ ತಪ್ಪುವವರೆಗೆ ಹೊಡೆದರು...
‘ಕೊಡಲಿ ಹಿಡಿಕೆಯ ಏಟು ಪ್ರಭಯ್ಯ ಅವರು ಸ್ಮೃತಿ ತಪ್ಪುವವರೆಗೂ ಮುಂದುವರಿದಿತ್ತು. ಅವರ ಮನೆಯಲ್ಲಿ ಇದೆಲ್ಲಾ ನಿತ್ಯದ ಸಂಗತಿ. ಹೀಗಾಗಿ ಪ್ರಭಯ್ಯ ಅವರ ಕಿರುಚಾಟಕ್ಕಾಗಲಿ, ದಾಕ್ಷಾಯಿಣಿ ಅವರ ಏರು ಧ್ವನಿಗಾಗಲಿ ನೆರೆಹೊರೆಯವರು ತಲೆಕೆಡಿಸಿಕೊಂಡಿರಲಿಲ್ಲ. ಪ್ರಜ್ಞಾಹೀನ ಪ್ರಭಯ್ಯ ಅವರ ಕೈಕಾಲುಗಳನ್ನು ಸೈಕಲ್‌ ಟ್ಯೂಬ್‌ನಿಂದ ಕಟ್ಟಿದರು. ಗೋಣಿ ಚೀಲದ ರೀತಿ ಅವರನ್ನು ಚಾದರದೊಳಗೆ ತುಂಬಿ ಅದರ ಮೇಲೆ ರಬ್ಬರ್‌ ಪೈಪ್‌ನಿಂದ ಬಿಗಿದರು. ಅಲ್ಲಿಂದ ಎತ್ತಿಕೊಂಡು ಊರಿಗೆ ಒಯ್ದರು. ಒಂದು ಗುಂಡಿ ತೋಡಿ ಒಂದಿಷ್ಟು ಕಡ್ಡಿ ರಾಶಿ ಹಾಕಿ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿದರು‘ ಎಂಬುದು ಪೊಲೀಸ್‌ ಮೂಲಗಳ ಮಾಹಿತಿ.

‘ಧಗಧಗನೆ ಉರಿಯುತ್ತಿದ್ದ ಬೆಂಕಿಗೆ ಚಾದರದ ಮೂಟೆಯೊಳಗಿದ್ದ ಪ್ರಭಯ್ಯ ಅವರನ್ನು ಎಸೆದುಬಿಟ್ಟರು. ಅದರ ಮೇಲಿಷ್ಟು ತೊಗರಿ ಕಡ್ಡಿಗಳನ್ನು ಸುರಿದರು. ಇಷ್ಟೆಲ್ಲ ಘಟನೆ ನಡೆದದ್ದು ಹಾಡಹಗಲೇ. ಚಾದರ ಸುಟ್ಟು ಕಟ್ಟುಗಳು ಬಿಡಿಸಿಕೊಂಡಾಗ ತಾನು ಉರಿದು ಹೋಗುತ್ತಿರುವುದು ಪ್ರಭಯ್ಯ ಅವರ ಅರಿವಿಗೆ ಬಂದಿತು’ ಎಂದು ಆ ಮೂಲಗಳು ಹೇಳುತ್ತವೆ.

‘ಅಲ್ಲಿಂದ ಬಿಡಿಸಿಕೊಂಡು ಗುಂಡಿಯಿಂದ ಮೇಲೆದ್ದು ಕಷ್ಟಪಟ್ಟು ಓಡಿ ಸಮೀಪದಲ್ಲೇ ಇದ್ದ ಕೆರೆಗೆ ಹಾರಿ ಉರಿ ಆರಿಸಿಕೊಂಡರು. ಪ್ರಭಯ್ಯ ಅವರ ಕಿರುಚಾಟ, ಸುಟ್ಟುಹೋಗಿರುವ ಮೈ ನೋಡಿದ ಅಕ್ಕಪಕ್ಕದ ಜಮೀನಿನವರು ಅವರನ್ನು ನೀರಿನಿಂದ ಮೇಲೆತ್ತಿ 108 ಆಂಬುಲೆನ್ಸ್‌ ಮೂಲಕ ಕುಕನೂರಿನ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಹೇಳಿಕೆ ಪಡೆದು  ಪ್ರಭಯ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ ರವಾನಿಸಿದೆವು. ಪ್ರಭಯ್ಯ ಈಗ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ’ ಎನ್ನುವುದು ಆ ಮೂಲಗಳ  ಹೇಳಿಕೆ.

ಅಸಹಾಯಕ ಪ್ರಭಯ್ಯ: 'ಪ್ರಭಯ್ಯ ಅವರ ಸ್ಥಿತಿಗೆ ಕಾರಣರಾದವರು ಜೈಲು ಸೇರಿದ್ದಾರೆ. ಆಸ್ಪತ್ರೆಯಲ್ಲಿ ಅವರನ್ನು ನೋಡಿಕೊಳ್ಳುವವರೂ ಇಲ್ಲ. ಬಂಧುಗಳು ಒಂದೆರಡು ಬಾರಿ ನೋಡಿ ಹೋಗಿದ್ದು ಬಿಟ್ಟರೆ ಅವರ ಕಾಳಜಿ ವಹಿಸುವವರಿಲ್ಲ. ಪ್ರಭಯ್ಯ ಇಡೀ ಮೈ ಸುಟ್ಟಿದೆ. ಘಟನೆಯ ಹೇಳಿಕೆ ಪಡೆದ ನಮಗೆ ಅದಕ್ಕೆ ಸಹಿ ಹಾಕಿಸುವುದೇ ಕಷ್ಟವಾಗಿತ್ತು. ಆದರೆ, ಅದೃಷ್ಟವಶಾತ್‌ ಅವರ ಎಡಗೈ ಹೆಬ್ಬೆಟ್ಟಿಗೆ ಮಾತ್ರ ಬೆಂಕಿ ಆವರಿಸಿರಲಿಲ್ಲ' ಎಂದು ಪೊಲೀಸ್‌ ಮೂಲಗಳ ವಿವರಣೆ.

ಆತ್ಮಹತ್ಯೆಗೆ ಯತ್ನಿಸಿದ್ದ ದಾಕ್ಷಾಯಿಣಿ: 'ಮೂರು ವರ್ಷಗಳ ಹಿಂದೆ ಪ್ರಭಯ್ಯ ಅವರು ತನ್ನ ಶೀಲ ಶಂಕಿಸಿ ಮಾತನಾಡುವುದು, ಚುಚ್ಚು ನುಡಿಯಿಂದ ಬೇಸತ್ತ ದಾಕ್ಷಾಯಿಣಿ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.

ಬದುಕುಳಿದ ಅವರನ್ನು ಕುಟುಂಬದವರೆಲ್ಲಾ ಸಮಾಧಾನಪಡಿಸಿ ಹೊಂದಿಕೊಂಡು ಬಾಳುವಂತೆ ರಾಜಿ ಮಾಡಿಸಿದ್ದರು. ಆದರೆ, ಪ್ರಭಯ್ಯ ಅವರ ವರ್ತನೆಯೂ ಸರಿಹೋಗಿರಲಿಲ್ಲ' ಎನ್ನುತ್ತಾರೆ ಸ್ಥಳೀಯರು.

'ಏನೇ ಇದ್ದರೂ ಈ ರೀತಿ ಕೊಲೆ ಮಾಡುವ ಹಂತಕ್ಕೆ ಹೋಗಬಾರದಿತ್ತು. ಇಂತಹ ಪರಿಸ್ಥಿತಿ ಬರಬಾರದಿತ್ತು. ಎಂದು ಪ್ರಭಯ್ಯ ಅವರ ಪರ ಗ್ರಾಮಸ್ಥರ ಅನುಕಂಪದ ಮಾತುಗಳು ಕೇಳಿಬರುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT