ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಹಾಸ್ಟೆಲ್‌ನಿಂದ 560 ವಿದ್ಯಾರ್ಥಿಗಳಿಗೆ ಅನುಕೂಲ’

ಲಿಂಗದಳ್ಳಿಯಲ್ಲಿ ₹25 ಕೋಟಿ ವೆಚ್ಚದಲ್ಲಿ ಅಬ್ದುಲ್ ಕಲಾಂ ವಸತಿ ನಿಲಯ ಲೋಕಾರ್ಪಣೆ
Published 3 ಜುಲೈ 2024, 14:25 IST
Last Updated 3 ಜುಲೈ 2024, 14:25 IST
ಅಕ್ಷರ ಗಾತ್ರ

ಕೊಪ್ಪಳ: ‘ತಾಲ್ಲೂಕಿನ ಹಿಟ್ನಾಳ, ಭಾಗ್ಯನಗರ ಮತ್ತು ಕೊಪ್ಪಳದ ಶಾಸಕರ ಮಾದರಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜು ಒಳಗೊಂಡಂತೆ ₹12 ಕೋಟಿ ವೆಚ್ಚದಲ್ಲಿ ಸರ್ಕಾರಿ ಇಂಟರ್‌ ನ್ಯಾಷನಲ್‌ ಮಾದರಿಯ ಶಾಲೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ’ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ‘ಎ.ಪಿ.ಜೆ ಅಬ್ದುಲ್ ಕಲಾಂ ಸಿ.ಬಿ.ಎಸ್.ಸಿ ವಸತಿ ಶಾಲೆ ಮತ್ತು ಪದವಿಪೂರ್ವ ಕಾಲೇಜು’ ಕಟ್ಟಡವನ್ನು ಬುಧವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2015-16ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯದ ಎರಡು ಕಡೆ ಅಬ್ದುಲ್‌ ಕಲಾಂ ವಸತಿ ಶಾಲೆಗಳನ್ನು ಘೋಷಣೆ ಮಾಡಿದ್ದು, ಇದರಲ್ಲಿ ಒಂದು ಶಾಲೆ ನನ್ನ ಕ್ಷೇತ್ರಕ್ಕೆ ಮಂಜೂರಾಗಿತ್ತು’ ಎಂದರು.

‘ಕೊಪಳದಲ್ಲಿ ವೈದ್ಯಕೀಯ ಕಾಲೇಜು ಮಾತ್ರವಲ್ಲದೆ ₹192 ಕೋಟಿ ವೆಚ್ಚದಲ್ಲಿ 450 ಹಾಸಿಗೆಯ ಆಸ್ಪತ್ರೆಯ ಕಟ್ಟಡ ನಿರ್ಮಿಸಲಾಗಿದೆ. ಶೀಘ್ರ ಆಸ್ಪತ್ರೆ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲೂ ಪ್ರಯತ್ನ ನಡೆದಿದೆ. ಕೊಪ್ಪಳ ವಿಧಾನಸಭಾ ಕ್ಷೇತ್ರದ 104 ಗ್ರಾಮಗಳಲ್ಲಿ 24X7 ಶುದ್ಧ ಕುಡಿಯುವ ನೀರು ಒದಗಿಸಲು ₹245 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದ್ದು, ಭಾಗ್ಯನಗರ-ಕೊಪ್ಪಳಕ್ಕೆ ಕುಡಿಯುವ ನೀರಿಗಾಗಿ ₹145 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ’ ಎಂದು ತಿಳಿಸಿದರು.

ಮಾಜಿ ಸಂಸದ ಕರಡಿ ಸಂಗಣ್ಣ ಮಾತನಾಡಿ ‘ವಸತಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಕಟ್ಟಡ ಉತ್ತಮ ಗುಣಮಟ್ಟ ಹೊಂದಿದೆ. ವಸತಿ ಶಾಲೆಗಳು, ವಸತಿ ನಿಲಯಗಳು ಸೇರಿ ಜಿಲ್ಲೆಗೆ ಹೊಸದಾಗಿ ಒಟ್ಟು 13 ಹೊಸ ವಸತಿ ಸಂಸ್ಥೆಗಳು ಮಂಜೂರಾಗಿದ್ದು ಖುಷಿನೀಡಿದೆ‘ ಎಂದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸುರೇಶ ಕೊಕರೆ, ಕೊಪ್ಪಳ ತಾಲ್ಲೂಕ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಾಲಚಂದ್ರನ್‌ ಮುನಿರಾಬಾದ್, ಬೆವಿನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಿಪ್ಪವ್ವ ಶಿವಪ್ಪ ನಾಯಕ, ಉಪಾಧ್ಯಕ್ಷ ಮುರಳಿ ಬಿಸರಳ್ಳಿ, ಸದಸ್ಯರಾದ ಅಂಜನಪ್ಪ ಲಿಂಗದಹಳ್ಳಿ, ಕೊಪ್ಪಳ ತಹಶೀಲ್ದಾರ್ ವಿಠ್ಠಲ್ ಚೌಗಲಾ, ತಾ.ಪಂ ಇಒ ದುಂಡಪ್ಪ ತುರಾದಿ, ಕಾಂಗ್ರೆಸ್‌ ಪ್ರಮುಖರಾದ ಎಸ್.ಬಿ.ನಾಗರಳ್ಳಿ, ಟಿ. ಜನಾರ್ದನ ಹುಲಿಗಿ, ಅಕ್ಬರ್‌ ಪಾಷಾ ಪಲ್ಟನ್‌, ಗೂಳಪ್ಪ ಹಲಗೇರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಸರ್ಕಾರಿ ಕಾರ್ಯಕ್ರಮ ಕಾಂಗ್ರೆಸ್ ಮಯ

ಹಾಸ್ಟೆಲ್‌ ಉದ್ಘಾಟನೆ ಸರ್ಕಾರಿ ಕಾರ್ಯಕ್ರಮವಾಗಿದ್ದರೂ ವೇದಿಕೆ ಮೇಲೆ ಜನಪ್ರತಿನಿಧಿಗಳ ಜೊತೆಗೆ ಕಾಂಗ್ರೆಸ್‌ ಮುಖಂಡರೇ ಪ್ರಮುಖವಾಗಿ ಪಾಲ್ಗೊಂಡಿದ್ದರು. ಸ್ಥಳೀಯ ಆಡಳಿತದ ಪ್ರಥಮ ಪ್ರಜೆಯೂ ಆಗಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ವೇದಿಕೆಯಲ್ಲಿ ಎರಡನೇ ಸಾಲಿನಲ್ಲಿ ಕೂರಿಸಲಾಗಿತ್ತು. ಸಂಗಣ್ಣ ಕರಡಿ ಮಾಜಿ ಸಂಸದರಾಗಿದ್ದರೂ ವೇದಿಕೆ ಮೇಲೆ ಕರೆಯಲಾಗಿತ್ತು. ಕಾರ್ಯಕ್ರಮ ಆರಂಭಕ್ಕೂ ಮೊದಲು ವೇದಿಕೆ ಮೇಲೆ ತೆರಳಲು ಸಂಗಣ್ಣ ಕರಡಿ ಅವರು ಹಿಂದೇಟು ಹಾಕಿದರೂ ಶಾಸಕ ಹಿಟ್ನಾಳ ’ಬನ್ನಿ ಬನ್ನಿ’ ಎಂದು ಒತ್ತಾಯದಿಂದ ಕರೆದೊಯ್ದರು. ಇದರ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಸಂಗಣ್ಣ ’ಪ್ರಜಾಪ್ರಭುತ್ವ ನಿಯಮದ ಪ್ರಕಾರ ನಾನು ವೇದಿಕೆ ಮೇಲೆ ಇರುವುದು ಸರಿಯಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT