ಬುಧವಾರ, ಮಾರ್ಚ್ 29, 2023
25 °C
ಮಕ್ಕಳನ್ನು ಸೆಳೆಯುತ್ತಿರುವ ಆಟಿಕೆ ಲೋಕ, ಚಿತ್ತಾಕರ್ಷದ ವಿದ್ಯುತ್‌ ದೀಪಗಳು

ಕೊಪ್ಪಳ: ಗವಿಮಠದ ಸನ್ನಿಧಿಯಲ್ಲಿ ಭಕ್ತರ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಇಲ್ಲಿನ ಪ್ರಸಿದ್ಧ ಗವಿಸಿದ್ಧೇಶ್ವರ ಮಠದ ಮಹಾರಥೋತ್ಸವ ನಡೆದು 15 ದಿನಗಳಾದರೂ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಬರುತ್ತಿದ್ದಾರೆ. ಅಮವಾಸ್ಯೆ ದಿನವಾದ ಶನಿವಾರವೂ ಎಂದಿಗಿಂತ ಭಕ್ತರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿಯೇ ಇತ್ತು.

ಗವಿಮಠಕ್ಕೆ ಪ್ರತಿ ಅಮಾವಾಸ್ಯೆಗೆ ಸಾಕಷ್ಟು ಜನ ಬರುತ್ತಾರೆ. ಮಹಾರಥೋತ್ಸವ ಮುಗಿದ ಬಳಿಕ ಮೊದಲ ಅಮಾವಾಸ್ಯೆ ಇದಾದ ಕಾರಣ ಬೆಳಗಿನ ಜಾವದಿಂದಲೇ ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಭಕ್ತರು ಗವಿಸಿದ್ಧೇಶ್ವರ ಸ್ವಾಮೀಜಿಯ ಗದ್ದುಗೆ ದರ್ಶನ ಪಡೆದರು. ಮಹಾರಥೋತ್ಸವಕ್ಕೆ ಕಾಯಿ ಒಡೆಯಿಸಿ, ಕೈ ಮುಗಿದು ನಮಸ್ಕರಿಸಿದರು.

ಬಂದ ಎಲ್ಲ ಭಕ್ತರಿಗೂ ಗೋಧಿ ಹುಗ್ಗಿ, ಬದನೇಕಾಯಿ ಪಲ್ಲೆ, ಅನ್ನ, ಸಾಂಬಾರು ಹಾಗೂ ಉಪ್ಪಿನಕಾಯಿ ಉಣಬಡಿಸಲಾಯಿತು. ಮಹಿಳೆಯರು, ಪುರುಷರು, ಹಿರಿಯರು ಹಾಗೂ ಮಕ್ಕಳು ಹೀಗೆ ಸಾಕಷ್ಟು ಜನ ಹಳ್ಳಿಗಳಿಂದ ಟ್ರ್ಯಾಕ್ಟರ್‌ ಹಾಗೂ ಚಕ್ಕಡಿಗಳ ಮೂಲಕ ಬಂದು ಗವಿಮಠದ ಅಜ್ಜನ ದರ್ಶನ ಪಡೆದರು.

ಮಠದ ಕೆರೆಯ ದಂಡೆಯಲ್ಲಿ ನಡೆದ ಬೆಳಕಿನೆಡೆಗೆ ಕಾರ್ಯಕ್ರಮದಲ್ಲಿ ಕಲಾವಿದರು ಸಂಗೀತ ಕಾರ್ಯಕ್ರಮ ನೀಡಿದರು. ಇಬ್ಬರು ಅಂಗವಿಕಲ ಮಕ್ಕಳ ಸುಶ್ರಾವ್ಯವಾಗಿ ಹಾಡಿದಾಗ ಭಾರಿ ಕರತಾಡನ ಕೇಳಿಬಂತು. ಮಠದ ವತಿಯಿಂದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸನ್ಮಾನಿಸಿದರು.

ಆಟಿಕೆಗಳ ಲೋಕ: ಮಠದ ಎದುರಿನ ಮೈದಾನದಲ್ಲಿರುವ ತರಹೇವಾರಿ ಆಟಿಕೆಗಳ ಲೋಕ ಮಕ್ಕಳನ್ನು ಕೈ ಬೀಸಿ ಕರೆಯುತ್ತಿತ್ತು. ನಿತ್ಯ ಮಧ್ಯರಾತ್ರಿಯ ತನಕವೂ ಹಿರಿಯರು ಹಾಗೂ ಮಕ್ಕಳು ಆಕರ್ಷಕವಾಗಿ ಹೊಳೆಯುತ್ತಿರುವ ವಿದ್ಯುತ್‌ ದೀಪಗಳ ಬೆಳಕಿನಲ್ಲಿ ಆಟವಾಡುತ್ತಿದ್ದ ಚಿತ್ರಣ ಸಾಮಾನ್ಯವಾಗಿತ್ತು.

ಸ್ವಯಂ ಸೇವಕರ ಪಡೆ: ಜಾತ್ರೆಯ ಮಹಾದಾಸೋಹ ಆರಂಭವಾದ ದಿನದಿಂದಲೂ ಒಂದೊಂದು ದಿನ ಒಂದೊಂದು ಊರಿನ ಜನ ಸರತಿಯ ಮೇಲೆ ಅಡುಗೆ ತಯಾರಿಸಿದರು. ಕೊಪ್ಪರಿಕೆಗಳಲ್ಲಿ ಅಡುಗೆ ತಯಾರಿಸಿದರು. ವಿದ್ಯಾರ್ಥಿಗಳು, ಎನ್‌ಸಿಸಿ ತಂಡದವರು, ಗೆಳೆಯರ ಬಳಗ ಹೀಗೆ ಸಮಾನ ಮನಸ್ಕರೆಲ್ಲರೂ ಸೇರಿಕೊಂಡು ತಂಡ ಮಾಡಿಕೊಂಡು ಭಕ್ತರಿಗೆ ಪ್ರಸಾದ ಬಡಿಸಿದರು.

ಹಗಲಿರುಳು ಎನ್ನದೇ ಬರುತ್ತಿದ್ದ ಭಕ್ತರಿಗೆ ಕಿಂಚಿತ್ತೂ ಕೊರತೆಯಾಗದಂತೆ ಅಡುಗೆ ತಯಾರಿಕೆಗೆ ಕಟ್ಟಿಗೆಯ ಒಲೆಗಳು ಉರಿಯುತ್ತಲೇ ಇದ್ದವು. ವಿದ್ಯಾರ್ಥಿಗಳು, ಮಠದ ಸಿಬ್ಬಂದಿ ಸೇರಿದಂತೆ ಅನೇಕರು ಜಾತ್ರೆಯಲ್ಲಿ ಒಟ್ಟು ಅವಧಿಯಲ್ಲಿ ಲಕ್ಷಾಂತರ ಭಕ್ತರಿಗೆ ಸಮರ್ಪಕವಾಗಿ ದಾಸೋಹದ ವ್ಯವಸ್ಥೆ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು