ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಮೊಬೈಲ್‌ ಹಾವಳಿಯಿಂದ ಜಾನಪದ ನಾಶ’

Published : 2 ಆಗಸ್ಟ್ 2024, 14:26 IST
Last Updated : 2 ಆಗಸ್ಟ್ 2024, 14:26 IST
ಫಾಲೋ ಮಾಡಿ
Comments

ಅಳವಂಡಿ: ‘ಮೊಬೈಲ್ ಹಾವಳಿ ಹೆಚ್ಚಾಗಿ ಜಾನಪದ ನಶಿಸುತ್ತಿದೆ. ಜಾನಪದದ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಹಾಗೂ ಅದನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು. ಜಾನಪದ ಗ್ರಾಮೀಣ ಭಾಗದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದು ಇದರ ಸಾಹಿತ್ಯ ಅರ್ಥ ಗರ್ಭಿತವಾಗಿವೆ’ ಎಂದು ಶಿಕ್ಷಕಿ ಹಂಪಮ್ಮ ಕಲ್ಮಠ ಹೇಳಿದರು.

ಸಮೀಪದ ಹನಕುಂಟಿ ಗ್ರಾಮದ ಹಿಂದುಳಿದ ವರ್ಗಗಳ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು, ಅಳವಂಡಿ ಹೋಬಳಿ ಘಟಕದ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ‘ಕನ್ನಡ ಸಾಹಿತ್ಯದಲ್ಲಿ ಜಾನಪದ ಮತ್ತು ಮಹಿಳೆಯರ ಪಾತ್ರ’ದ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮಕ್ಕೆ ಮಾತನಾಡಿದರು.

‘ಹಿಂದಿನ ಕಾಲದಲ್ಲಿ ಬದುಕಿನ ಎಲ್ಲ ಘಟ್ಟದಲ್ಲೂ ಜಾನಪದ ಇತ್ತು. ಗ್ರಾಮೀಣ ಭಾಗದ ಜನರ ಒಬ್ಬರ ಬಾಯಿಯಿಂದ ಇನ್ನೊಬ್ಬರ ಬಾಯಿಯ ಮೂಲಕ ಹಾಡುಗಳ ಬಂ ಸಾಹಿತ್ಯ ಜಾನಪದ. ಆದರೆ ಇತ್ತೀಚಿನ ವರ್ಷಗಳಲ್ಲಿ ಜಾನಪದವನ್ನು ಅಶ್ಲೀಲ ಸಾಹಿತ್ಯ ಮೂಲಕ ಹಾಡುತ್ತಿದ್ದಾರೆ. ಇದು ನಿಲ್ಲಬೇಕು. ಮಕ್ಕಳು ಜಾನಪದ ಸಾಹಿತ್ಯದತ್ತ ಒಲವು ತೋರಬೇಕು ಇದನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು’ ಎಂದರು.

ಬಳಿಕ ವಿವಿಧ ಜಾನಪದ ಹಾಡುಗಳನ್ನು ಹಾಡಿ ಮಕ್ಕಳನ್ನು ಮನರಂಜಿಸಿದರು.

ಶಿಕ್ಷಕ ನೀಲಪ್ಪ ಹಕ್ಕಂಡಿ ಮಾತನಾಡಿ, ‘ಮಕ್ಕಳು ಓದಿನ ಜತೆ ಇತರ ಸಾಹಿತ್ಯದ ಚಟುವಟಿಕೆ, ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಜಾನಪದ ಸಾಹಿತ್ಯ ಯಾವುದೇ ಲಿಖಿತ ಭಾಷೆಯಿಲ್ಲದೆ ಸಾಂಪ್ರದಾಯಿಕ ಜ್ಞಾನದಿಂದ ಬಾಯಿಯಿಂದ ಬಾಯಿಯ ಮೂಲಕ ಹರಡಿದೆ. ಗದ್ಯಗಳು, ಪದ್ಯಗಳು, ನಿರೂಪಣೆ, ಕವಿತೆಗಳು, ಹಾಡುಗಳು, ಪುರಾಣಗಳು, ನಾಟಕಗಳು, ಗಾದೆಗಳು, ಒಗಟುಗಳನ್ನು ಒಳಗೊಂಡ ಸಾಹಿತ್ಯ ಆಗಿದೆ. ಇಂದಿನ ಪೀಳಿಗೆಗೆ ಇದರ ಬಗ್ಗೆ ಶಿಕ್ಷಕರು ಅರಿವು ಮೂಡಿಸಬೇಕು’ ಎಂದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ ಮಾತನಾಡಿ, ‘ಇಂಗ್ಲೀಷ್ ಮಾದ್ಯಮ ಶಾಲೆಗಳಲ್ಲಿಯೂ  ಕನ್ನಡವನ್ನು ಬೆಳೆಸುವುದು ಕಾರ್ಯಕ್ರಮದ ಉದ್ದೇಶ. ಓದಲು, ಬರೆಯಲು ಬಾರದ ಅನಕ್ಷರಸ್ಥರು ಜಾನಪದ ಸಾಹಿತ್ಯವನ್ನು ರಚಿಸಿದ್ದಾರೆ. ಮಕ್ಕಳು ಕನ್ನಡ ಓದಬೇಕು, ಬೆಳೆಸಬೇಕು’ ಎಂದರು.

ಪ್ರಾಚಾರ್ಯ ನಿಂಗಪ್ಪ ಜಾಧವ, ಅಳವಂಡಿ ಹೋಬಳಿ ಘಟಕದ ಕಸಾಪ ಅಧ್ಯಕ್ಷ ಸುರೇಶ ಸಂಗರಡ್ಡಿ, ಶಿಕ್ಷಕರಾದ ಶರಣಪ್ಪ ಚಿಲವಾಡಗಿ, ಪಂಪಣ್ಣ, ಹನುಮಂತಪ್ಪ, ಜಯಶ್ರೀ, ಸಂಗನಗೌಡ, ಸಿದ್ದಯ್ಯ ಹಿರೇಮಠ, ಅಂಬಿಕಾ, ಅರ್ಜುನ ಭಾವಿಕಟ್ಟಿ, ಮಾರುತಿ, ಪ್ರಮುಖರಾದ ಜುನುಸಾಬ ವಡ್ಡಟ್ಟಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT