ಮಂಗಳವಾರ, ಜನವರಿ 18, 2022
27 °C
ಭೀಮಾ ಕೋರೆಗಾಂವ್ ವಿಜಯೋತ್ಸವ: ಪ.ಪಂ ಸದಸ್ಯ ಶೇಷಪ್ಪ ಪೂಜಾರ ಅಭಿಮತ

ಅಂಬೇಡ್ಕರ್ ಕೇವಲ ಪರಿಶಿಷ್ಟರ ನಾಯಕರಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಗಿರಿ: ‘ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಪರಿಶಿಷ್ಟ ಸಮುದಾಯದ ನಾಯಕ ಎನ್ನುವ ಹಣೆಪಟ್ಟಿ ಕಟ್ಟುತ್ತಿದ್ದು, ಅವರು ಕೇವಲ ಪರಿಶಿಷ್ಟ ಸಮುದಾಯಕ್ಕೆ ಸೀಮಿತರಾದವರಲ್ಲ’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಶೇಷಪ್ಪ ಪೂಜಾರ ತಿಳಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿ ಪರ ಸಂಘಟನೆಗಳು ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಗತ್ತಿನ ಇತಿಹಾಸದಲ್ಲಿಯೇ ಭೀಮಾ ಕೋರೆಗಾಂವ್ ಘಟನೆ ಬಹಳ ಮಹತ್ವ ಪಡೆದುಕೊಂಡಿದೆ. ಶೋಷಿತರು ಮಹಾರಾಷ್ಟ್ರದ ಪೇಶ್ವೆಗಳ ವಿರುದ್ಧ ಸ್ವಾಭಿಮಾನದ ಸಲುವಾಗಿ ಯುದ್ಧ ಮಾಡಿ ಗೆಲುವು ಸಾಧಿಸಿದ ಐತಿಹಾಸಿಕ ದಿನವಾಗಿದೆ ಎಂದು ಅವರು ತಿಳಿಸಿದರು.

ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಮಹರ್‌ ಜನಾಂಗದ 500 ಸೈನಿಕರು ಪೇಶ್ವೆಗಳ 28000 ಸಾವಿರ ಸೈನಿಕರ ವಿರುದ್ಧ ಹೋರಾಟ ನಡೆಸಿ ಜಯಶಾಲಿಯಾದ ಐತಿಹಾಸಿಕ ದಿನವಾಗಿದೆ. ಈ ದಿನದ ಸವಿ ನೆನಪಿನ ಕೊಡುಗೆಯಾಗಿ ಪರಿಶಿಷ್ಟರ ಕೋರಿಕೆ ಮೇರೆಗೆ ಬ್ರಿಟಿಷರು ದೇಶದಲ್ಲಿ ಶಾಲೆಗಳನ್ನು ಸ್ಥಾಪಿಸಿ ಎಲ್ಲ ವರ್ಗದವರು ಶಿಕ್ಷಣ ಪಡೆಯಲು ಅನುಕೂಲ ಮಾಡಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಎಸ್‌.ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಣ್ಣ ಕನಕಪ್ಪ ಮಾತನಾಡಿ,‘ಶಿಕ್ಷಣ, ಸಂಘಟನೆ, ಹೋರಾಟದಿಂದ ಮಾತ್ರ ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರವಿದೆ. ಈ ನಿಟ್ಟಿನಲ್ಲಿ ಪರಿಶಿಷ್ಟರು ಯೋಜಿಸಬೇಕು’ ಎಂದು ಹೇಳಿದರು. ಶೋಷಿತರು ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು. ವೆಂಕಟೇಶ, ಕನಕಪ್ಪ ಮ್ಯಾಗಡೆ, ಕಂಠೆಪ್ಪ ಮ್ಯಾಗಡೆ, ಗಂಗಾಧರ ಗಂಗಾಮತ, ಮೂಕಪ್ಪ ಇತರರು ಇದ್ದರು.

‘ಇತಿಹಾಸ ತಿಳಿಯಿರಿ’

ಯಲಬುರ್ಗಾ: ‘ಪರಿಶಿಷ್ಟ ಜಾತಿಗೆ ಸೇರಿದ ಪ್ರತಿಯೊಬ್ಬರೂ ಭೀಮಾ ಕೋರೆಗಾಂವ್ ವಿಜಯಸ್ತಂಭದ ಇತಿಹಾಸ ತಿಳಿದುಕೊಳ್ಳಬೇಕು’ ಎಂದು ಛಲವಾದಿ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಅಂದಪ್ಪ ಹಾಳಕೇರಿ ಹೇಳಿದರು.

ಪಟ್ಟಣದ ಛಲವಾದಿ ಓಣಿಯಲ್ಲಿ ಶನಿವಾರ ತಾಲ್ಲೂಕು ಛಲವಾದಿ ಮಹಾಸಭಾದ ವತಿಯಿಂದ ನಡೆದ 204ನೇ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೋರೆಗಾಂವ್ ಹೋರಾಟದ ಹಿನ್ನೆಲೆ ತಿಳಿದುಕೊಳ್ಳುವುದರಿಂದ ಹಿಂದುಳಿದ ಸಮಾಜದ ಏಳು–ಬೀಳುಗಳ ಬಗ್ಗೆ ಗೊತ್ತಾಗುತ್ತದೆ. ಸಮುದಾಯದ ಅಭಿವೃದ್ಧಿಯಲ್ಲಿ ಶಿಕ್ಷಕ ಮಹತ್ವದ ಪಾತ್ರ ವಹಿಸುವುದರಿಂದ ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆಯುವಲ್ಲಿ ಆಸಕ್ತಿ ತೋರಬೇಕು ಎಂದರು.

ಮುಖಂಡ ಸಿದ್ದಪ್ಪ ಕಟ್ಟಿಮನಿ ಮಾತನಾಡಿ,‘30 ಸಾವಿರ ಪೇಶ್ವೆಗಳನ್ನು 500 ಮಹಾರ್ ಸೈನಿಕರು ಸೋಲಿಸಿ ವಿಜಯಪತಾಕೆ ಹಾರಿಸಿದ ದಿನವನ್ನು ಕೋರೆಗಾಂವ್ ವಿಜಯೋತ್ಸವವಾಗಿ ದೇಶಾದ್ಯಂತ ಆಚರಣೆ ಮಾಡಲಾಗುತ್ತಿದೆ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲು–ಕೀಳುಗಳ ವಿರುದ್ಧ ಹೋರಾಡಿ ಮಾನವೀಯ ವೌಲ್ಯಗಳನ್ನು ಅಳವಡಿಸಿಕೊಳ್ಳಲು ಹಂಬಲಿಸುತ್ತಿದ್ದ ಮಹಾರ್ ಸೈನಿಕರ ಧೈರ್ಯ ಹಾಗೂ ಸಾಹಸ ಪ್ರವೃತ್ತಿ ಮೆಚ್ಚುವಂತದ್ದು’ ಎಂದು ಅವರು ಹೇಳಿದರು.

ಮುಖಂಡರಾದ ವಿಜಯ ಜಕ್ಕಲಿ, ಗದ್ದೆಪ್ಪ ಕುಡಗುಂಟಿ, ಯಮನೂರಪ್ಪ ಅರಬರ್, ದೇವಪ್ಪ ಕಟ್ಟಿಮನಿ, ಶಂಕರ್ ಜಕ್ಕಲಿ, ಪ್ರಕಾಶ ಛಲವಾದಿ, ವಿಕ್ರಮ್ ಛಲವಾದಿ, ನಾಗರಾಜ್ ಆಲೂರು, ನಾಗರಾಜ್ ಛಲವಾದಿ, ಅರಣುಕುಮಾರ್ ಶರಣದವರ್, ಗಣೇಶ ಕುಡಗುಂಟಿ, ಶ್ರೀಧರ್ ಕಟ್ಟಿಮನಿ, ಮಹೇಶ್, ಶ್ರೀಕಾಂತ್, ಮೋಹನ್, ಕೀರ್ತಿ ಹಾಗೂ ಅಶೋಕ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.