ಭಾನುವಾರ, ಫೆಬ್ರವರಿ 28, 2021
31 °C
ಅವೈಜ್ಞಾನಿಕ ಪಾದಚಾರಿ ರಸ್ತೆ, ತ್ಯಾಜ್ಯ ಸಂಗ್ರಹಕ್ಕೆ ಸಂಸದ ತರಾಟೆ

ಅಮೃತ ನಗರದ ಕಾಮಗಾರಿ, ಪ್ರಗತಿ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ ನಗರಸಭೆಯ ಸಭಾಂಗಣದಲ್ಲಿ ಸೋಮವಾರ ಸಂಸದ ಕರಡಿ ಸಂಗಣ್ಣ ನಡೆಸಿದ ಅಮೃತ ನಗರ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಗಂಗಾವತಿ: ಅಮೃತ ನಗರ ಯೋಜನೆಯಡಿ ನಗರದಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳ, ಅನುಷ್ಠಾನ, ಪ್ರಗತಿ ಪರಿಶೀಲನೆಗೆ ಸೋಮವಾರ ಬಂದಿದ್ದ ಸಂಸದ ಕರಡಿ ಸಂಗಣ್ಣ ಅವರಿಗೆ ಸಾರ್ವಜನಿಕರಿಂದ ದೂರುಗಳ ಸುರಿಮಳೆಯಾಯಿತು.

ಇಲ್ಲಿನ ಮಹಾತ್ಮಗಾಂಧಿ ವೃತ್ತದಿಂದ ಸಿಬಿಎಸ್ ವೃತ್ತವರೆಗೆ ನಿರ್ಮಿಸಿರುವ ₹ 2 ಕೋಟಿ ಮೊತ್ತದ ಪಾದಚಾರಿ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಸಾರ್ವಜನಿಕರ ಓಡಾಟಕ್ಕೆ ಮೀಸಲಿಡಬೇಕಾದ ಪಾದಚಾರಿ ಮಾರ್ಗ, ವಾಣಿಜ್ಯ ಮಳಿಗೆಗಳ ಮಾಲೀಕರ ಅನುಕೂಲಕ್ಕೆ ಮಾಡಲಾಗಿದೆ. ರಸ್ತೆಯಿಂದ ಸುಮಾರು 2 ಅಡಿ ಎತ್ತರಕ್ಕೇರಿಸಿ ಪಾದಚಾರಿ ರಸ್ತೆ ನಿರ್ಮಿಸಿರುವುದು ಜನರ ಓಡಾಟಕ್ಕೆ ಸಾಧ್ಯವಿಲ್ಲ. ಹೀಗಾಗಿ ಎರಡು ಕೋಟಿ ಅನುದಾನ ವ್ಯರ್ಥವಾಗಿದೆ ಎಂದು ಗಾಂಧಿವೃತ್ತದಲ್ಲಿನ ಆಟೋ ಚಾಲಕರು, ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಬಳಿಕ ಎಸ್‌ಬಿಎಚ್ ಬಳಿ ಇರುವ ದುರ್ಗಮ್ಮನ ನಾಲಾದ ವೀಕ್ಷಣೆಗೆ ತೆರಳಿದ ಸಂದರ್ಭದಲ್ಲಿ ಕೋಳಿ, ಕುರಿಗಳ ಚರ್ಮ, ಮಾಂಸದ ತ್ಯಾಜ್ಯ ಮೊದಲಾದ ವ್ಯರ್ಥ ಪದಾರ್ಥಗಳು ಬಿದ್ದಿರುವುದು ಕಂಡು ಬಂತು.

ಇದರಿಂದ ಆಕ್ರೋಶಗೊಂಡ ಸಂಸದರು, ನಗರಸಭೆಯಲ್ಲಿ ನೈರ್ಮಲ್ಯ ವಿಭಾಗದಲ್ಲಿ ಸಿಬ್ಬಂದಿ ಇದ್ದಾರೆಯೇ ಇಲ್ಲವೇ, ಮಾಂಸದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹರಡುತ್ತಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪೌರಾಯುಕ್ತ ಯು.ನಾಗರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು.

ನಗರಸಭೆಯಲ್ಲಿ ಶಾಸಕ ಪರಣ್ಣ ಮುನವಳ್ಳಿ, ಸಾರ್ವಜನಿಕ ಮತ್ತು ಅಧಿಕಾರಗಳೊಂದಿಗೆ ಸಭೆ ನಡೆಸಿದ ಸಂಸದ, ಅಮೃತ ನಗರ ಯೋಜನೆಯಲ್ಲಿ ಇದುವರೆಗೂ ಆದ ಕಾಮಗಾರಿಗಳ ಪ್ರಗತಿ, ಬಾಕಿ ಇರುವ ಕೆಲಸಗಳ ಮಾಹಿತಿ ಪಡೆದರು.

ಆದರೆ ಬಹುತೇಕ ಇಲಾಖೆಯ ಅಧಿಕಾರಗಳು ಸಭೆಗೆ ಗೈರು ಹಾಜರಾಗಿದ್ದರಿಂದ ಅಪೂರ್ಣ ಮಾಹಿತಿಯೊಂದಿಗೆ ಸಭೆ ಮುಗಿಸಿದ ಸಂಸದ, ಆಗಸ್ಟ್ ಎರಡನೇ ವಾರದಲ್ಲಿ ಮತ್ತೊಮ್ಮೆ ಸಭೆ ಕರೆಯಲಿದ್ದು, ಆಗ ಸಂಬಂಧಿತ ಎಲ್ಲ ಇಲಾಖೆಯ ಅಧಿಕಾರಿಗಳು ಹಾಜರಿರಬೇಕು ಎಂದು ತಾಕೀತು ಮಾಡಿದರು.

ಇದೇ ಸಮಯದಲ್ಲಿ ಬಿಜೆಪಿ ಕೆಲ ಯುವಕರು, ನಗರದಲ್ಲಿ ಕೆಲವರು ಮನೆಗಳಿಗೆ ತೆರಳಿ, ನಿವೇಶನ, ಮನೆ ಇಲ್ಲದವರ ಮಾಹಿತಿ ಸಂಗ್ರಹಿಸುವ ನೆಪದಲ್ಲಿ ಜನರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಇದಕ್ಕೆ ಕೆಲ ರಾಜಕಾರಣಿಗಳ ಬೆಂಬಲವೂ ಇದೆ ಎಂದು ವಿಡಿಯೋ ದಾಖಲೆಗಳನ್ನು ಸಂಸದರಿಗೆ ನೀಡಿದರು.

ನಗರಸಭಾ ಅಧ್ಯಕ್ಷೆ ಸಣ್ಣಹುಲಿಗೆಮ್ಮ, ಸದಸ್ಯರಾದ ಶೇಖ್‌ನಭಿ, ಪರಮೇಶಪ್ಪ, ರಾಘವೇಂದ್ರ ಶೆಟ್ಟಿ, ಮೌಸೀನ್, ರಾಚಪ್ಪ, ರಾಮಚಂದ್ರಪ್ಪ, ಪ್ರಮುಖರಾದ ದೇವಪ್ಪ ಕಾಮದೊಡ್ಡಿ, ಕೆ.ಶ್ರೀನಿವಾಸ, ತುಳಾಜಾರಾಮ, ವೀರೇಶ ಬಲ್ಕುಂದಿ, ಕಾಶಿನಾಥ ಚಿತ್ರಗಾರ, ಯಮನೂರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು