ಶುಕ್ರವಾರ, ಜುಲೈ 1, 2022
28 °C
ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್ ಹೇಳಿಕೆ

ಇತಿಹಾಸ ಮೆಲುಕು ಹಾಕುವ ಕೆಲಸ ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ‘ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ಇತಿಹಾಸದ ಕುರಿತು ಮೆಲುಕು ಹಾಕದಿದ್ದರೆ ಮುಂದಿನ ಪೀಳಿಗೆಯವರಿಗೆ ಇತಿಹಾಸ ತಿಳಿಯಲು ಸಾಧ್ಯವಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅಭಿಪ್ರಾಯಪಟ್ಟರು.

ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ನಡೆದ 75ನೇ ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬ್ರಿಟಿಷರ ವಿರುದ್ಧ ಸಾಕಷ್ಟು ಜನರು ಹೋರಾಟ ನಡೆಸಿ ಪ್ರಾಣ ತ್ಯಾಗ ಮಾಡಿ ಸ್ವಾತಂತ್ರ್ಯ ತಂದ ಪರಿಣಾಮವೇ ನಾವೀಗ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ಈ ಹಿಂದೆ ಬ್ರಿಟಿಷರು ಭಾರತದ ಸಂಪತ್ತನ್ನೆಲ್ಲ ಕೊಳ್ಳೆ ಹೊಡೆದರು ಸಹ ನಮ್ಮ ದೇಶ ಸಂಸ್ಕೃತಿ, ಕಲೆ ಹಾಗೂ ಸಾಹಿತ್ಯದ ಸಂಪತ್ತು ಹೊಂದಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ನವೀನ್ ಮಾತನಾಡಿ,‘ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದ ಕಾರಣ ಈ ಕಾರ್ಯ ನಡೆಯುತ್ತಿದ್ದು, ಸ್ವಾತಂತ್ರ್ಯ ಹೋರಾಟಗಾರರ ಆದರ್ಶ, ತತ್ವ, ಸಿದ್ಧಾಂತ ಎಲ್ಲರಿಗೂ ಆದರ್ಶ. ಭಾರತ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ದೇಶದ ಜನ್ಮದಿನದ ಕುರಿತು ನಿಖರವಾದ ದಾಖಲೆ ಇನ್ನೂ ಸಿಕ್ಕಿಲ್ಲ’ ಎಂದರು.

ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವಲ್ಲಿ ಕರ್ನಾಟಕ ರಾಜ್ಯದ ಹೋರಾಟಗಾರರ ಪಾತ್ರ ಸಹ ಬಹುಮುಖ್ಯವಾಗಿದ್ದು, ಬ್ರಿಟಿಷರ ವಿರುದ್ಧ ಸೆಣಸಾಟಕ್ಕೆ ನಿಂತ ಕನ್ನಡದ ಮೊದಲ ಹೋರಾಟಗಾರ್ತಿ ರಾಣಿ ಅಬ್ಬಕ್ಕ ಆಗಿದ್ದಾರೆ. ನಂತರ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ನಂತರದ ಸ್ಥಾನದಲ್ಲಿರುತ್ತಾರೆ ಎಂದು ಹೇಳಿದರು.

ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ,‘ಬ್ರಿಟಿಷರಿಂದ ಭಾರತಕ್ಕೆ 1947ರಲ್ಲಿ ಮುಕ್ತಿ ದೊರೆತಿದ್ದು, ಅದಕ್ಕೆ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವೇ ಕಾರಣ. ಅದರಲ್ಲಿ ವೀರ ಸಾವರ್ಕರ್ ಸಹ ಅವಿರತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ದೇಶಕ್ಕಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು’ ಎಂದರು.

‘ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಕೊಡುಗೆ’ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು. ದೇಶ ರಕ್ಷಣೆಯ ಕುರಿತು ಸಂಕಲ್ಪ ವಿಧಿ ಬೋಧಿಸಲಾಯಿತು. ನಂತರ ಸಾಂಸ್ಕೃತಿಕ ಕಲಾ ತಂಡಗಳಿಂದ ದೇಶಪ್ರೇಮದ ಕುರಿತ ನೃತ್ಯ ಪ್ರದರ್ಶನ ನಡೆಯಿತು.

ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ ಮಾರುತಿ, ತಹಶೀಲ್ದಾರ್ ಯು.ನಾಗರಾಜ, ಬಿಇಒ ಸೋಮಶೇಖರಗೌಡ, ನಗರ ಪ್ರಾಧಿಕಾರದ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ,‌ ನಗರಸಭೆ ಆಯುಕ್ತ ವಿರೂಪಾಕ್ಷ ಮೂರ್ತಿ,ಗ್ರೇಡ್-2 ತಹಶೀಲ್ದಾರ್ ವಿ.ಎಚ್. ಹೊರಪೇಟಿ, ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ ಹಾಗೂ ಶರಣೆಗೌಡ ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.