ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಷ್ಟಗಿ | ಬಿಇಒ ರುಜು ನಕಲು; ನೌಕರ ಅಮಾನತು

ಶಿಕ್ಷಕ ಅಭ್ಯರ್ಥಿಗಳೊಂದಿಗೆ ಒಳ ಒಪ್ಪಂದ; ಬಿಇಒ ಕಚೇರಿಯಲ್ಲಿ ಅಕ್ರಮ ಆರೋಪ
Published 28 ನವೆಂಬರ್ 2023, 6:05 IST
Last Updated 28 ನವೆಂಬರ್ 2023, 6:05 IST
ಅಕ್ಷರ ಗಾತ್ರ

ಕುಷ್ಟಗಿ: ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಬಿಇಒ ಅವರ ಸಹಿಯನ್ನೇ ನಕಲು ಮಾಡಿದ ನೌಕರ ಅಮಾನತುಗೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕಳೆದ ವಾರದ ನಡೆದಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ, ಆಮಿಷಕ್ಕೆ ಒಳಗಾಗಿ ಸಹಿಯನ್ನು ನಕಲು ಮಾಡುವ ಮೂಲಕ ಅಧಿಕಾರಿಗಳಿಗೆ ವಂಚಿಸಿ ಕರ್ತವ್ಯಲೋಪ ಎಸಗಿರುವ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಪ್ರಶಾಂತ ಎಂಬುವವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದರು. ಅದರ ಅನ್ವಯ ಶಾಲಾ ಶಿಕ್ಷಣ ಇಲಾಖೆ ಉಪನಿದೇಶಕ ಶ್ರೀಶೈಲ ಬಿರಾದಾರ, ನೌಕರನನ್ನು ನ.21 ರಂದು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಆಗಿದ್ದೇನು?:

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ನೇಮಕ ಹೊಂದಿರುವ ಅಭ್ಯರ್ಥಿಗಳು ನೇಮಕಾತಿ ಸಂದರ್ಭದಲ್ಲಿ ಗ್ರಾಮೀಣ, ಕನ್ನಡ ಮಾಧ್ಯಮ ಇತರೆ ಪ್ರಮಾಣ ಪತ್ರಗಳ ನೈಜತೆಯನ್ನು ಪರಿಶೀಲಿಸಲು ಉಪನಿರ್ದೇಶಕರ ಕಚೇರಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಕಳುಹಿಸಲಾಗುತ್ತದೆ. ಸಂಬಂಧಿಸಿದ ಪ್ರಮಾಣಪತ್ರಗಳ ನೈಜತೆಯನ್ನು ಸ್ವತಃ ಸಿಬ್ಬಂದಿ ಮೂಲಕ ಪರಿಶೀಲನೆ ನಡೆಸಿ ನಂತರ ಅವುಗಳನ್ನು ಮರು ದೃಢೀಕರಿಸಿ ಪುನಃ ಉಪನಿರ್ದೇಶಕರ ಕಚೇರಿಗೆ ಅಂಚೆ ಮೂಲಕ ಕಳುಹಿಸುವುದು ವಾಡಿಕೆ ನಿಯಮ.

ಅದರಂತೆ ಶಿಕ್ಷಕ ಹುದ್ದೆಗೆ ನೇಮಕಗೊಂಡಿರುವ ತಾಲ್ಲೂಕಿನ ಭಾರತಿ ಮಹಾದೇವಪ್ಪ ಎಂಬುವವರು ಸಲ್ಲಿಸಿದ ಗ್ರಾಮೀಣ, ಕನ್ನಡ ಮಾಧ್ಯಮ ಪ್ರಮಾಣಪತ್ರಗಳನ್ನು ಉಪನಿರ್ದೇಶಕರ ಕಚೇರಿಯಿಂದ ದೃಢೀಕರಣಕ್ಕೆಂದು ಇಲ್ಲಿಯ ಬಿಇಒ ಕಚೇರಿಗೆ ಕಳಿಸಲಾಗಿತ್ತು. ಪ್ರಮಾಣಪತ್ರಗಳು ಹಾಗೂ ಸಿಆರ್‌ಪಿ ನೀಡಿದ ಸಂದರ್ಶನ ವರದಿಯ ಕಡತಗಳನ್ನು ಬಿಇಒ ಅವರಿಗೆ ಮಂಡಿಸದೆ ತಮ್ಮ ಶಾಖೆಗೆ ಸಂಬಂಧಿಸಿರದ ಕಡತವನ್ನು ತಾವೇ ನಿರ್ವಹಿಸಿ ಉಪನಿರ್ದೇಶಕರ ಹೆಸರಿಗೆ ತಾವೇ ಸಿದ್ಧಪಡಿಸಿದ ಪತ್ರದ ಮುಖಪುಟಕ್ಕೆ ಬಿಇಒ ಅವರ ಸಹಿಯನ್ನೂ ಕೂಡ ತಾವೇ ನಕಲು ಮಾಡಿ ನೌಕರ ಪ್ರಶಾಂತ ಅವರು ಅಂಚೆ ಮೂಲಕ ಕಳಿಸುವ ಬದಲು ನೇರವಾಗಿ ಅಭ್ಯರ್ಥಿಯ ಕೈಗೆ ಒಪ್ಪಿಸಿದ್ದರು.

ಆದರೆ ಎಲ್ಲ ಪ್ರಮಾಣಪತ್ರಗಳಿಗೆ ಬಿಇಒ ಅವರ ರಬ್ಬರ್‌ಮುದ್ರೆ ಒತ್ತಿರುವ ನೌಕರ ಅವುಗಳಿಗೆ ಸಹಿ ಮಾಡಲು ಮರೆತು ಕೇವಲ ಮುಖಪುಟಕ್ಕೆ ಮಾತ್ರ ಸಹಿ ಮಾಡಿದ್ದರು. ಪ್ರಮಾಣಪತ್ರಗಳಿಗೆ ಸಹಿ ಮಾಡಿರಲಿಲ್ಲ. ಹಾಗಾಗಿ ಈ ವಿಷಯ ನಂತರ ಬಿಇಒ ಅವರ ಗಮನಕ್ಕೆ ಬಂದಿದ್ದು, ಪರಿಶೀಲಿಸಿದಾಗ ಸಹಿ ನಕಲು ಎಂಬುದು ಗೊತ್ತಾಗಿದೆ. ಈ ಕುರಿತು ಕಾರಣ ಕೇಳಿ ನೀಡಿರುವ ನೋಟಿಸ್‌ಗೆ ಪ್ರಶಾಂತ ಉತ್ತರ ನೀಡಿಲ್ಲ ಎನ್ನಲಾಗಿದೆ.

ವಿಳಂಬ ತಪ್ಪಿಸಲು ವಾಮಮಾರ್ಗ:

ಇಲ್ಲಿಯ ಬಿಇಒ ಕಚೇರಿಯಲ್ಲಿ ಬಹಳಷ್ಟು ಅಕ್ರಮಗಳು ನಡೆಯುತ್ತಿದ್ದು, ಹಣ ಕೊಡದೇ ಯಾವ ಕಡತಗಳೂ ಮುಂದೆ ಹೋಗುವುದಿಲ್ಲ, ಅನಗತ್ಯ ವಿಳಂಬವಾಗುತ್ತಿರುವುದು ನೇಮಕ ಹೊಂದಿರುವ ಮತ್ತು ಸದ್ಯ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಕಚೇರಿಯಲ್ಲಿ ಇಬ್ಬರು ಕ್ಲರ್ಕ್‌ಗಳ ಮೂಲಕ ಎಲ್ಲ ವ್ಯವಹಾರ ನಡೆಯುತ್ತಿದೆ. ಹಾಗಾಗಿ ವಿಳಂಬಕ್ಕೆ ಬೇಸತ್ತಿರುವ ಶಿಕ್ಷಕರ ಹುದ್ದೆಯ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ವಾಮಮಾರ್ಗ ಕಂಡುಕೊಂಡಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಬಿಇಒ ಸಹಿ ಪ್ರಕರಣವೇ ಸಾಕ್ಷಿ ಎಂದು ಹೆಸರು ಬಹಿರಂಗಪಡಿಸದ ಕೆಲ ಶಿಕ್ಷಕರು 'ಪ್ರಜಾವಾಣಿ'ಗೆ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT