ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇವಿನಹಳ್ಳಿ ಆಂಜನೇಯ ಜಾತ್ರೆಗೆ ಸಜ್ಜು

ಏ.9ರಂದು ಲಘು ರಥೋತ್ಸವ, 10ರಂದು ಮಹಾರಥೋತ್ಸವ
Published 8 ಏಪ್ರಿಲ್ 2024, 6:23 IST
Last Updated 8 ಏಪ್ರಿಲ್ 2024, 6:23 IST
ಅಕ್ಷರ ಗಾತ್ರ

ಮುನಿರಾಬಾದ್: ಸಮೀಪದ ಬೇವಿನಹಳ್ಳಿ ಗ್ರಾಮಸ್ಥರ ಆರಾಧ್ಯ ದೈವ ಆಂಜನೇಯ (ಹನುಮಪ್ಪ) ದೇವರ ಜಾತ್ರಾ ಮಹೋತ್ಸವ ಮಂಗಳವಾರ ಯುಗಾದಿ ಪಾಡ್ಯದಿಂದ (ಏ.9) ಮೂರು ದಿನ ನಡೆಯಲಿದೆ.

ಭಾವೈಕ್ಯದ ಈ ಜಾತ್ರೆಗೆ ಹೋಬಳಿ ಕೇಂದ್ರ ಹಿಟ್ನಾಳದಿಂದ ಆಂಜನೇಯ ಉತ್ಸವ ಮೂರ್ತಿ, ಶಹಾಪುರ ಗ್ರಾಮದಿಂದ ತೇರಿನ ವಸ್ತ್ರ, ಲಿಂಗದಹಳ್ಳಿ ಗ್ರಾಮದಿಂದ ತೇರಿನ ಕಳಸ ಮತ್ತು ಗಬ್ಬೂರ ಗ್ರಾಮದಿಂದ ತೇರಿನ ಹಗ್ಗವನ್ನು ಅದ್ದೂರಿ ಮೆರವಣಿಗೆಯಲ್ಲಿ ತಂದು ಐದಾರು ಗ್ರಾಮಗಳ ಜನರು ಸಾಮರಸ್ಯದಿಂದ ತೇರನ್ನು ಎಳೆಯುತ್ತಾರೆ.

ಗ್ರಾಮದಿಂದ ಹೊರಗೆ ಹೋದ ಕುಟುಂಬಗಳು ಮತ್ತು ಇಲ್ಲಿಂದ ಮದುವೆಯಾಗಿ ಹೋದ ಹೆಣ್ಣುಮಕ್ಕಳು ವಾರದ ಮುಂಚೆ ಬರುತ್ತಾರೆ. ಭಕ್ತರು ದೀಡ್‌ ನಮಸ್ಕಾರ ಸೇರಿದಂತೆ ವಿವಿಧ ಹರಕೆ ಹೊತ್ತು ಆಂಜನೇಯನ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಮಂಗಳವಾರ ಭಕ್ತರ ವಿವಿಧ ಹರಕೆ ತೀರುವಳಿ ಮತ್ತು ಸಂಜೆ ಲಘು ರಥೋತ್ಸವ ಜರುಗಲಿದೆ.

ಬುಧವಾರ ದೇವಸ್ಥಾನದಲ್ಲಿ ವಿಶೇಷ ಪೂಜೆ ಅಲಂಕಾರ ನಂತರ ಸಾಮೂಹಿಕ ವಿವಾಹ ನಡೆಯಲಿದೆ. ಸಂಜೆ 5.30ಕ್ಕೆ ಮಹಾರಥೋತ್ಸವ ನಂತರ ನೀರುಗೊಂಡ ಹಾಗೂ ಗಂಗಾ ಪೂಜೆ, ವಿವಿಧ ಮಠಾಧೀಶರ ನೇತೃತ್ವದಲ್ಲಿ ಧಾರ್ಮಿಕ ಹಾಗೂ ಸಂಗೀತ ಸಭೆ ಜರುಗುವುದು. ಗುರುವಾರ ಓಕುಳಿ (ಬಣ್ಣದ ಆಟ) ಸಂಜೆ ಹೂವಿನ ಪಲ್ಲಕ್ಕಿ ಉತ್ಸವ ಮತ್ತು ರಾತ್ರಿ 10 ಗಂಟೆಗೆ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ.

ಪುಣ್ಯಕ್ಷೇತ್ರ: ಆಂಜನೇಯನ ಪವಿತ್ರ ಕ್ಷೇತ್ರ ಇಲ್ಲಿನ ವಿಗ್ರಹವನ್ನು ವ್ಯಾಸರಾಜರು ಪ್ರತಿಷ್ಠಾಪಿಸಿದರು ಎಂಬ ಇತಿಹಾಸ ಇದೆ ಎಂದು ಗಿಣಿಗೇರಿಯ ಎಂ. ಗೋವಿಂದರಾಜು ಅಭಿಪ್ರಾಯ ಪಡುತ್ತಾರೆ.

ವಿವಿಧ ಜಿಲ್ಲೆಗಳಲ್ಲಿ ಕೂಡ ಇಲ್ಲಿಯ ಆಂಜನೇಯನ ಕಾಯಂ ಭಕ್ತರು ಇದ್ದಾರೆ. ಪ್ರತಿ ಅಮಾವಾಸ್ಯೆ ದಿನ ಬರುವ ಭಕ್ತರಿಗೆ ಅನ್ನ ಸಂತರ್ಪಣೆ ಇರುತ್ತದೆ. ದಾನಿಗಳಿಂದ ಮತ್ತು ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಿಸಿ ಸಾಮೂಹಿಕ ಮದುವೆ ಹಮ್ಮಿಕೊಳ್ಳುವ ಮೂಲಕ ಸಾಮಾಜಿಕ ಬದ್ಧತೆಯನ್ನು ತೋರುತ್ತಾರೆ.

ಮದ್ಯದ ಅಂಗಡಿ ಮುಕ್ತ ಗ್ರಾಮ: ಇಲ್ಲಿನ ಆಂಜನೇಯನ ಪವಾಡ ಅದ್ಭುತವಾಗಿದೆ. ಗ್ರಾಮದಲ್ಲಿ ಒಂದೇ ಒಂದು ಮದ್ಯದ ಅಂಗಡಿ ಇಲ್ಲ. ಹನುಮಪ್ಪನ ಶಕ್ತಿ ಅಂತಹದ್ದು ಎನ್ನುತ್ತಾರೆ ಗ್ರಾಮದ ಹಿರಿಯರು.

ಹೋಳಿ ಹುಣ್ಣಿಮೆಗೆ ಇಲ್ಲದ ಓಕುಳಿ: ಬೇವಿನಹಳ್ಳಿ ಗ್ರಾಮದಲ್ಲಿ ಹೋಳಿ ಹುಣ್ಣಿಮೆಗೆ ಬಣ್ಣ ಆಡುವ ಪದ್ಧತಿ ಇಲ್ಲ. ಆದರೆ ಯುಗಾದಿ ಹಬ್ಬದ ಕೊನೆಯ ದಿನ ಇಲ್ಲಿ ಬಣ್ಣದಾಟ ನಡೆಯುತ್ತದೆ. ಯುವಕರು ಮತ್ತು ಮಕ್ಕಳು ಬಣ್ಣದಲ್ಲಿ ಮಿಂದೇಳುತ್ತಾರೆ.

ಉಚಿತ ನಾಟಕ ಪ್ರದರ್ಶನ: ಗುರುವಾರ(ಏ.11) ಸ್ಥಳೀಯ ಮಾರುತೇಶ್ವರ ನಾಟ್ಯ ಸಂಘದಿಂದ ‘ದಿಲ್ಲಿ ಹೊಕ್ಕ ಪುಂಡ ಹುಲಿ’ ಅರ್ಥಾತ್ ‘ಕೆರಳಿದ ಕರ್ಣಾರ್ಜುನರು’ ಉಚಿತ ನಾಟಕ ಪ್ರದರ್ಶನ ಇರುತ್ತದೆ ಎಂದು ಜಾತ್ರಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.

ಮುನಿರಾಬಾದ್ ಸಮೀಪ ಬೇವಿನಹಳ್ಳಿ ಆಂಜನೇಯ ದೇವಸ್ಥಾನ
ಮುನಿರಾಬಾದ್ ಸಮೀಪ ಬೇವಿನಹಳ್ಳಿ ಆಂಜನೇಯ ದೇವಸ್ಥಾನ
ದೇವಸ್ಥಾನದಲ್ಲಿನ ಆಂಜನೇಯ ವಿಗ್ರಹ
ದೇವಸ್ಥಾನದಲ್ಲಿನ ಆಂಜನೇಯ ವಿಗ್ರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT