ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಸಾವಿಗೆ ಬಿಜೆಪಿ ಸರ್ಕಾರ ಕಾರಣ: ಸಿದ್ದರಾಮಯ್ಯ ಆರೋಪ

ಶಾಸಕ ಕೆ.ರಾಘವೇಂದ್ರ ಹಿಟ್ನಾಳರಿಂದ 15 ಸಾವಿರ ಕಿಟ್‌ ವಿತರಣೆ
Last Updated 22 ಜೂನ್ 2021, 2:47 IST
ಅಕ್ಷರ ಗಾತ್ರ

ಕೊಪ್ಪಳ: ‘ಕೊರೊನಾ ಎರಡನೇ ಅಲೆಯನ್ನು ಸಮರ್ಪಕವಾಗಿ ನಿಭಾಯಿಸದ ರಾಜ್ಯ ಸರ್ಕಾರ ಸಾವಿರಾರು ಜನರ ಸಾವಿಗೆ ಕಾರಣವಾಗಿದೆ. ಇಂಥ ಕೆಟ್ಟ ಸರ್ಕಾರ ಆದಷ್ಟು ಬೇಗನೇ ತೊಲಗಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಆಯೋಜಿಸಿದ್ದ ಆಹಾರ ಧಾನ್ಯದ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಚ್ಚೇದಿನ್‌ ಎಂದು ಹೇಳಿ ಅಧಿಕಾರಕ್ಕೆ ಬಂದ ಸರ್ಕಾರ ಬೆಲೆ ಏರಿಕೆ ಮೂಲಕ ಕೆಟ್ಟ ದಿನಗಳನ್ನು ತಂದಿದೆ. ಇನ್ನು ಒಳ್ಳೆಯ ದಿನ ಬರುವುದು ಯಾವಾಗ?. ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಇರಬೇಕು ಎಂದು ಹೇಳಿ ಯಾವ ಅಭಿವೃದ್ಧಿ ಮಾಡಿದ್ದಾರೆ. ಕೊರೊನಾ ಎದುರಿಸಲು ಸಿದ್ಧತೆ ಮಾಡಿಕೊಳ್ಳದೆ ಹಾಸಿಗೆ, ಆಮ್ಲಜನಕ, ರೆಮ್‌ಡಿಸಿವರ್, ಆಂಬುಲೆನ್ಸ್‌ ಇಲ್ಲದೆ ಅನೇಕ ಜನರು ಮರಣಹೊಂದಿದರು. ಇದಕ್ಕೆ ಯಡಿಯೂರಪ್ಪನವರೇ ಕಾರಣ ಎಂದು ಜರಿದರು.

ನೀರಾವರಿ ಯೋಜನೆಗಳಲ್ಲಿ ಅಪ್ಪ, ಮಗ ಲೂಟಿ ಮಾಡುತ್ತಿದ್ದಾರೆ. ಬಡಜನರು ನಿತ್ಯ ಅನ್ನ ಸಂಪಾದಿಸಲು ಕಷ್ಟಪಡುತ್ತಿದ್ದಾರೆ. ಇಂಥ ಸಂಕಷ್ಟದ ಸಮಯದಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ₹10 ಸಾವಿರ, ತಲಾ 10 ಕೆಜಿ ಅಕ್ಕಿ ನೀಡಿದ್ದರೆ ಅವರ ಅಪ್ಪನ ಮನೆಯ ಗಂಟೇನೂ ಹೋಗುತ್ತಿತ್ತು. ನಮ್ಮ ಸರ್ಕಾರವಿದ್ದರೆ ನಾವು ನಮ್ಮಪ್ಪನ ಮನೆಯಿಂದ ಏನೂ ತಂದು ಕೊಡುತ್ತಿದ್ದಿಲ್ಲ. ಜನರ ದುಡ್ಡು, ಜನರಿಗಾಗಿ ಖರ್ಚು ಮಾಡಲು ಇರುವ ಸಮಸ್ಯೆಯಾದರೂ ಇವರಿಗೆ ಏನೂ ಎಂದು ಪ್ರಶ್ನಿಸಿದರು.

ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಅವರದೇ ಪಕ್ಷದ ಸಚಿವರು, ಶಾಸಕರು ಮುಖ್ಯಮಂತ್ರಿ ವಿರುದ್ಧ ಬಹಿರಂಗ ಆರೋಪ ಮಾಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಕೇಳಿದರೆ ಕೊರೊನಾದ ನೆಪ ಹೇಳುತ್ತಾರೆ. ಇಂತಹ ಭ್ರಷ್ಟ, ಕೆಟ್ಟ ಸರ್ಕಾರ ಬೇಕಾ ಎಂದು ಪ್ರಶ್ನಿಸಿದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ,‘ಜನರ ಕಣ್ಣೀರು ಒರೆಸುವ ಮೂಲಕ ರಾಜ್ಯದ ಜನರಿಗೆ ವಿವಿಧ ಭಾಗ್ಯಗಳನ್ನು ಕಲ್ಪಿಸಿದ ಸಿದ್ದರಾಮಯ್ಯನವರು ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ. ಜನರ ಆಸೆಯೂ ಅದೇ ಆಗಿದೆ. ಕ್ಷೇತ್ರದ ಪ್ರತಿ ಬೂತ್‌ನಲ್ಲಿ ಬಡವರನ್ನು ಗುರುತಿಸಿ 15 ಸಾವಿರ ಕಿಟ್‌ಗಳನ್ನು ಹಂಚಲಾಗುತ್ತಿದೆ. ಕೊರೊನಾದಿಂದ ತೊಂದರೆಗೆ ಒಳಗಾದ ಜನರ ನೆರವಿಗೆ ನಾವು, ನಮ್ಮ ‍ಪಕ್ಷ ಬರುತ್ತದೆ’ ಎಂದು ಹೇಳಿದರು.

ವೇದಿಕೆ ಮೇಲೆ ಶಾಸಕ ಜಮೀರ್‌ ಅಹಮ್ಮದ್ ಖಾನ್, ಭೈರತಿ ಸುರೇಶ್‌, ವಿಧಾನ ಪರಿಷತ್‌ ಸದಸ್ಯ ಪ್ರಕಾಶ್‌ ರಾಠೋಡ್‌, ಮಾಜಿ ಸಚಿವ ಬಸವರಾಜ ರಾಯರಡ್ಡಿ, ಮಾಜಿ ಶಾಸಕರಾದ ಅಶೋಕ ಪಟ್ಟಣ, ಎಂ.ಮಲ್ಲಿಕಾರ್ಜುನ, ಮಾಜಿ ಸಂಸದ ಶಿವರಾಮನಗೌಡ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ ತಂಗಡಗಿ, ಕೆ.ರಾಜಶೇಖರ ಹಿಟ್ನಾಳ, ಕಾಟನ್‌ ಪಾಶಾ, ಅಮ್ಜದ್‌ ಪಟೇಲ್, ಎಸ್‌.ಬಿ.ನಾಗರಳ್ಳಿ, ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ಧಪ್ಪ ಚಿನ್ನೂರು, ಮಾಲತಿ ನಾಯಕ ಹಾಗೂ ಮುಂತಾದವರು ಇದ್ದರು.

ಕಿಟ್‌ ಪಡೆಯಲು ಸಾವಿರಾರು ಜನ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾಷಣ ಕೇಳಲು ತಾಲ್ಲೂಕು ಕ್ರೀಡಾಂಗಣದಲ್ಲಿ ಸಾವಿರಾರು ಜನರು ನೆರೆದಿದ್ದರೂ, ಕೊರೊನಾ ಲಾಕ್‌ಡೌನ್‌ ಮಾರ್ಗಸೂಚಿ ಕಾರಣ ವಿಶಾಲವಾದ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಎಲ್ಲರೂ ಮಾಸ್ಕ್ ಧರಿಸುವಂತೆ ಸಿದ್ದರಾಮಯ್ಯ ತಮ್ಮ ಶೈಲಿಯಲ್ಲಿ ಗದರಿಸುತ್ತಿದ್ದರಿಂದ ಮಾಸ್ಕ್‌ ಇಲ್ಲದವರು ನಿಧಾನವಾಗಿ ಆಚೆ ತೆರಳಿದರು. ಕಿಟ್‌ ಪಡೆಯಲು ಸಾವಿರಾರು ಜನರು ಬಂದಿದ್ದರಿಂದ ಕಿಟ್‌ ಇದ್ದ ವಾಹನಕ್ಕೆ ಮುಗಿಬಿದ್ದರು. ಕ್ಷಣ ಮಾತ್ರದಲ್ಲಿ ಕಿಟ್‌ಗಳು ಖಾಲಿಯಾದವು.

ಸಮಾವೇಶ ಉದ್ಘಾಟಿಸಿ ವೇದಿಕೆ ಮೇಲೆ ತುಂಬಿದ್ದ ಜನರನ್ನು ಸ್ವತಃ ಸಿದ್ದರಾಮಯ್ಯನವರೇ ಗದರಿಸಿ ನೇರವಾಗಿ ಭಾಷಣಕ್ಕೆ ಇಳಿದರು. ಜಮೀರ್ ಭಾಷಣ ಕೇಳಲು ಉತ್ಸುಕರಾಗಿದ್ದ ಜನರಿಗೆ ನಿರಾಶೆಯಾಯಿತು.

‘ಸರ್ಕಾರದಿಂದ ರಾಜ್ಯ ಲೂಟಿ’

ಯಲಬುರ್ಗಾ: ‘ಕೋವಿಡ್‍ನಿಂದ ದೇಶದಲ್ಲಿ ಅನೇಕರು ಸಾವನ್ನಪ್ಪುತ್ತಿದ್ದಾರೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಕಾಂಗ್ರೆಸ್‌ ವತಿಯಿಂದ ಪಟ್ಟಣದಲ್ಲಿ ಸೋಮವಾರ ನಡೆದ ಆಹಾರ ಧಾನ್ಯದ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಆರೋಗ್ಯ ಬಿಕ್ಕಟ್ಟು ಎದುರಾಗಿದೆ. ಈ ಸಮಯದಲ್ಲಿ ಜನರ ಆರೋಗ್ಯದ ಕುರಿತು ಕಾಳಜಿ ವಹಿಸುವುದನ್ನು ಬಿಟ್ಟು ಬಿಜೆಪಿಯವರು ಅಧಿಕಾರಕ್ಕೆ ಕಿತ್ತಾಡುತ್ತಿದ್ದಾರೆ. ಯಡಿಯೂರಪ್ಪನವರ ಸರ್ಕಾರ ಕಾಮಗಾರಿಗಳ ಹೆಸರಲ್ಲಿ ರಾಜ್ಯವನ್ನು ಲೂಟಿ ಹೊಡೆಯುತ್ತಿದೆ. ಅನೇಕ ಮಂತ್ರಿಗಳಿಗೆ ಅಧಿಕಾರದ ದಾಹ ಹೆಚ್ಚಾಗಿದ್ದು, ಮುಖ್ಯಮಂತ್ರಿಯಾಗಬೇಕೆಂಬ ಕನಸು ಕಂಡು ಯಡಿಯೂರಪ್ಪನ ಖುರ್ಚಿ ಅಲುಗಾಡಿಸುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

ಬಿಜೆಪಿ ಸರ್ಕಾರದ ಯೋಗ್ಯತೆ ಎರಡೇ ವರ್ಷದಲ್ಲಿ ಗೊತ್ತಾಗಿದೆ. ಈ ಪರಿಸ್ಥಿತಿಗೆ ಯಲಬುರ್ಗಾ ಕ್ಷೇತ್ರವೂ ಹೊರತಾಗಿಲ್ಲ. ಅಭಿವೃದ್ಧಿ ಕೆಲಸಗಳಿಂದಲೇ ಹೆಸರಾಗಿರುವ ರಾಯರಡ್ಡಿಯನ್ನು ಯಾವುದೇ ಕಾರಣಕ್ಕೂ ಸೋಲಿಸಬಾರದು. ಅವರ ಸೋಲಿನಿಂದ ಕ್ಷೇತ್ರಕ್ಕೆ ನಷ್ಟವಾಗಿದೆ ಎಂದು ಅಭಿಪ್ರಾಯಪಟ್ಟರು.

ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ,‘ಕುಕನೂರು ಮತ್ತು ಯಲಬುರ್ಗಾ ತಾಲ್ಲೂಕು ಕೇಂದ್ರಗಳ ವ್ಯಾಪ್ತಿಯ 37 ಗ್ರಾಮ ಪಂಚಾಯಿತಿಗಳಿಗೆ ಒಟ್ಟು 11 ಸಾವಿರ ಕಿಟ್ ವಿತರಣೆಗೆ ಕಾಂಗ್ರೆಸ್ ಸಮಿತಿ ಮುಂದಾಗಿದೆ. ಕಳೆದ ವರ್ಷ ಕೂಡಾ ಇದೇ ರೀತಿ ಗುಣಮಟ್ಟದ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗಿತ್ತು. ಈಗಲೂ ಕೂಡಾ ಅದೇ ಗುಣಮಟ್ಟ ಕಾಯ್ದುಕೊಂಡು ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿ ವಿರುದ್ಧ ಜನಾಂದೋಲನ ಶುರುವಾಗಿದೆ. ಚುನಾವಣೆ ಎದುರು ನೋಡುವ ಸನ್ನಿವೇಶ ನಿರ್ಮಾಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೆ ಕಾಂಗ್ರೆಸ್ ಮುಂಚೂಣಿಯಲ್ಲಿರಲಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಹನಮಂತಪ್ಪ ಚಂಡೂರು, ಶಾಸಕರಾದ ಅಮರೇಗೌಡ ಬಯ್ಯಾಪುರ, ಭೈರತಿ ಸುರೇಶ, ರಾಘವೇಂದ್ರ ಹಿಟ್ನಾಳ, ಮಾಜಿ ಶಾಸಕ ಶ್ರೀನಿವಾಸ, ಅಶೋಕ ಪಠಣನವರ, ಪ್ರಕಾಶ ರಾಠೋಡ, ಮುಖಂಡರಾದ ಬಿ.ಎಂ.ಶಿರೂರು, ಹನಂತಪ್ಪ ಭಜಂತ್ರಿ, ಅಶೋಕ ತೋಟದ, ಬಸವರಾಜ ಪೂಜಾರ, ಬಸವರಾಜ ಕುಡಗುಂಟಿ ಇದ್ದರು.

‘ಬಿಜೆಪಿ ಸುಳ್ಳಿನ ‍ಪಕ್ಷ’

ಕುಕನೂರು: ‘ಹಲವಾರು ಜನಪರ ಯೋಜನೆಗಳನ್ನು ಸ್ಥಗಿತಗೊಳಿಸಿರುವ ಬಿಎಸ್‍ವೈ ದುರಾದುಷ್ಟ ಸಿಎಂ. ಬರೀ ಸುಳ್ಳು ಹೇಳುತ್ತ ಅಧಿಕಾರ ನಡೆಸುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಪಟ್ಟಣದ ಎಪಿಎಂಸಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಆಹಾರ ಧಾನ್ಯದ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಹಲವಾರು ಜನಪರ ಯೋಜನೆಗಳನ್ನು ಸಿಎಂ ಯಡಿಯೂರಪ್ಪ ಸ್ಥಗಿತಗೊಳಿಸಿದ್ದಾರೆ. ಅನೇಕ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದರು.

ಕೇಂದ್ರದ ಮೋದಿ ಸರ್ಕಾರ ಅಚ್ಚೆ ದಿನ್ ಆಯೇಗಾ ಎಂದು ಬಿಲ್ಡಪ್ ಕೊಟ್ತಿದ್ದು, ಅಡುಗೆ ಎಣ್ಣೆ ₹180, ಪೆಟ್ರೋಲ್ ₹100, ಡೀಸೆಲ್ ₹91, ಗ್ಯಾಸ್ ₹950 ಆಗಿದ್ದು, ಇವೆಲ್ಲವುಗಳು ಬಡ ವರ್ಗಕ್ಕೆ ಹೊರೆಯಾಗಿವೆ ಎಂದರು.

ಕಾಂಗ್ರೆಸ್ ಪಕ್ಷ ಸದಾ ಜನರ ಮಧ್ಯ ಇದ್ದು, ಅವರ ಕಷ್ಟಕ್ಕೆ ಮಿಡಿಯುವ ಪಕ್ಷ. ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು 10500 ಆಹಾರ ಧಾನ್ಯದ ಕಿಟ್ ವಿತರಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ, ಶಾಸಕ ಅಮರೇಗೌಡ ಬಯ್ಯಾಪುರ, ಭೈರತಿ ಸುರೇಶ, ಹನುಮಂತಗೌಡ ಚಂಡೂರು, ಬಸವರಾಜ ಉಳ್ಳಾಗಡ್ಡಿ, ಕಾಸೀಂಸಾಬ್ ತಳಕಲ್, ನಾರಾಯಣಪ್ಪ ಹರಪನ್ಹಳ್ಳಿ, ರೆಹಮಾನಸಾಬ್ ಮಕ್ಕಪ್ಪನವರ್ ಹಾಗೂ ಸಂಗಮೇಶ ಗುತ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT