ಸೋಮವಾರ, ನವೆಂಬರ್ 30, 2020
25 °C
ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿಕೆ

‘ಗೆಲುವು ನಿರೀಕ್ಷಿತ: ಕಾಂಗ್ರೆಸ್, ಜೆಡಿಎಸ್‌ ಅಪ್ರಸ್ತುತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ಶಿರಾ ಮತ್ತು ರಾಜರಾಜೇಶ್ವರಿ ನಗರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವು ನಿಶ್ಚಿತವಾಗಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಅಪ್ರಸ್ತುತವಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

ಕುಕನೂರು ತಾಲ್ಲೂಕಿನ ತಳಕಲ್ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಬಿಜೆಪಿ ಅಭ್ಯರ್ಥಿಗಳು ಜನರ ನಿರೀಕ್ಷೆಯಂತೆ ಗೆದ್ದಿದ್ದಾರೆ. ಕಾಂಗ್ರೆಸ್‌ಗೆ ರಾಜ್ಯದಲ್ಲಿ ಎಲ್ಲೂ ಅವಕಾಶ ಇಲ್ಲದಂತೆ ಮತದಾರರು ತೀರ್ಪು ನೀಡಿದ್ದಾರೆ. ಅವರ ಆಸೆಯನ್ನು ಸಾಕಾರಗೊಳಿಸುವಂತೆ ಉತ್ತಮವಾಗಿ ಕೆಲಸ ಮಾಡಿ ಮುಂದಿನ ಎಲ್ಲ ಚುನಾವಣೆಗಳಲ್ಲಿ ಗೆಲ್ಲುತ್ತೇವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಎರಡು ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಆರಂಭಿಸಲಾಗಿದೆ. ಮೂಲಸೌಕರ್ಯ, ಸಿಬ್ಬಂದಿ ಕೊರತೆ ಇದೆ. ಅವುಗಳನ್ನು ಹಂತಹಂತವಾಗಿ ಬಗೆಹರಿಸಲಾಗುವುದು. ಒಳ್ಳೆಯ ಉದ್ದೇಶದಿಂದ ಕಾಲೇಜು ಆರಂಭಿಸಲಾಗಿದೆ. ಇಲ್ಲಿ ಅಷ್ಟೇ ಆ ಸಮಸ್ಯೆ ಇಲ್ಲ. ರಾಜ್ಯದ ಎಲ್ಲ ಕಡೆ ಸಮಸ್ಯೆ ಇದೆ. ಕೋವಿಡ್‌ ಸಂಕಷ್ಟ ಸಮಯದಲ್ಲಿ ಹಣಕಾಸಿನ ಕೊರತೆ ಇದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಿಂದ ₹14 ಕೋಟಿ ಅನುದಾನ ನೀಡಲು ಕುಲಪತಿ ಒಪ್ಪಿದ್ದಾರೆ ಎಂದರು.

ರಾಜ್ಯದಲ್ಲಿ ಮಾದರಿಯಾದ ನೇಮಕಾತಿ ಪ್ರಕ್ರಿಯೆ, ವರ್ಗಾವಣೆ ನಿಯಮ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ಎಲ್ಲ ಕಾಲೇಜುಗಳಲ್ಲಿ 8 ಸಾವಿರ ಸ್ಮಾರ್ಟ್ ಕಾಲೇಜು ಆರಂಭಿಸಲಾಗುತ್ತಿದೆ. ಇದು ದೇಶದಲ್ಲಿಯೇ ಮೊದಲು. ಅಂಕಪಟ್ಟಿ ಡಿಜಟಲೀಕರಣ ಕುರಿತು ಖಾಸಗಿಯವರಿಗೆ ನೀಡುವ ಕುರಿತು ಯಾವ ನಿರ್ಧರವಾಗಿಲ್ಲ. ವಿಶ್ವವಿದ್ಯಾಲಯಗಳು ಸ್ವಾಯತ್ತ ಸಂಸ್ಥೆ ಆಗಿರುವುದರಿಂದ ಆ ಕುರಿತು ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಕೊಪ್ಪಳ ಸ್ನಾತಕೋತ್ತರ ಕೇಂದ್ರಕ್ಕೆ ಕಟ್ಟಡ ನಿರ್ಮಾಣ ಮಾಡುವ ಕುರಿತು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿ ಶೀಘ್ರ ನಿರ್ಮಾಣ ಮಾಡಲಾಗುವುದು. ಸರ್ಕಾರದ ಮಟ್ಟದಲ್ಲಿ ಉನ್ನತ ಶಿಕ್ಷಣಕ್ಕೆ ಏನು ಅವಶ್ಯಕತೆ ಇದೆಯೋ ಅದನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಹೇಳಿದರು.

ಮಾಜಿ ಸಿಎಂ ಸಿದ್ದು ಬದಲಾಗಬೇಕು: ‘ಚುನಾವಣೆ ನಂತರ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಈ ಚುನಾವಣೆ ನಂತರ ಸಿದ್ದರಾಮಯ್ಯನವರೇ ಬದಲಾಗಬೇಕು. ಹಾಗೆ ಮತದಾರರು ತೀರ್ಪು ನೀಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನನ್ನ ಬದಲಾವಣೆ ಅಲ್ಲ ಸ್ವಾಮಿ, ಇನ್ನಾದರೂ ನೀವು ಬದಲಾಗಬೇಕು ಎಂದು ಹೇಳಿದ್ದಾರೆ’ ಈ ಕುರಿತು ನಾವೇನೂ ಹೇಳುವುದಿಲ್ಲ ಎಂದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.