ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಸುವ ಕಲ್ಲಿನಂತೆ ಮನುಷ್ಯನ ಜೀವನ: ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ

ಭೂದೇಶ್ವರ ದೇವಸ್ಥಾನದಲ್ಲಿ ‘ಅರಿವಿನ ಮನೆಯ ಅಮೃತನಿಧಿ’ ಪುಸ್ತಕ ಬಿಡುಗಡೆ
Last Updated 4 ಅಕ್ಟೋಬರ್ 2021, 4:52 IST
ಅಕ್ಷರ ಗಾತ್ರ

ಗಂಗಾವತಿ: ವಿಶ್ವದಲ್ಲಿ ಮಾತನಾಡಲು ಸಾವಿರ ಭಾಷೆಗಳಿದ್ದರೂ, ಅಸ್ತಿತ್ವದಲ್ಲಿ ಇರುವುದು ಎರಡೇ. ಒಂದು ದೇವ ಭಾಷೆ, ಇನ್ನೊಂದು ಭಕ್ತನ ಭಾಷೆ. ಇದು ದೇವತ್ವ ಸಂಕೇತ ಎಂದು ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಕೊಪ್ಪಳ ಜಿಲ್ಲೆಯ ಬೂದಗುಂಪ ಭೂದೇಶ್ವರ ದೇವಸ್ಥಾನದಲ್ಲಿ ಮಾಜಿ ಸಂಸದ ಎಚ್‌.ಜಿ.ರಾಮುಲು ಅವರ 87ನೇ ಜನ್ಮ ದಿನಾಚರಣೆ ಹಾಗೂ ಅವರ ಜೀವನ ಕುರಿತು ಬರೆದ ‘ಅರಿವಿನ ಮನೆಯ ಅಮೃತನಿಧಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ದೇವ ಭಾಷೆಯಲ್ಲಿ ದೈವ ಕಾಡಿಸಿ, ಬೇಡಿಸಿ, ಸುಖ- ದುಃಖಗಳನ್ನು ನೀಡುತ್ತಾನೆ. ಭಕ್ತನ ಭಾಷೆಯಲ್ಲಿ ವ್ಯಕ್ತಿ ಎಷ್ಟೇ ಕಷ್ಟ ಕಾರ್ಪಣ್ಯ ಬಂದರೂ ಸಾಧಿಸುವ ಛಲ ಬಿಡಬಾರದು. ವ್ಯಕ್ತಿಗಳು ದೈವ ಬಲವನ್ನು ನಂಬಿ ಜೀವನ ಸಾಗಿಸಬೇಕು. ವೈದ್ಯರ ಕೈ ಮೀರಿದರೂ, ದೈವ ಕೈ ಹಿಡಿದು ಬದುಕು ನೀಡುತ್ತದೆ. ಮನುಷ್ಯ ಜೀವನ ಬೀಸುವ ಕಲ್ಲಿನ ಹಾಗೇ. ಬೀಸುವ ಕಲ್ಲಿನಲ್ಲಿ ಜೋಳ ಹಾಕಿದರೆ ಎರಡು ಬದಿಯ ಕಲ್ಲುಗಳಿಗೆ ನಲುಗಿ ಹಿಟ್ಟಾಗುತ್ತದೆ. ಅದೇ ರೀತಿ ಮನುಷ್ಯನ ಜೀವನ ಸುಖ, ದುಃಖ, ಪಾಪ, ಪುಣ್ಯ,ಸಾವು- ನೋವುಗಳಿಂದ ಕೂಡಿರುತ್ತದೆ ಎಂದರು.

ಮನುಷ್ಯನ ಜನ್ಮವೇ ಒಂದು ಅದ್ಭುತ. ಜಗತ್ತು ದೇವನ ಜಾತ್ರೆ, ತನ್ನ ಜಾತ್ರೆಯನ್ನು ವೈಭವದಿಂದ ಆಚರಿಸಿಲು ಮನುಷ್ಯನನ್ನು ಸೃಷ್ಟಿಸಿ ಅಮಂತ್ರಣ ನೀಡಿದ್ದಾನೆ. ಇಲ್ಲಿ ನಾವೆಲ್ಲ ಕಲಾವಿದರೂ, ಕೃಷಿ, ವೈದ್ಯಕೀಯ, ರಾಜಕೀಯ, ವ್ಯಾಪಾರ ಸೇರಿ ಇತರೆ ರೂಪದಲ್ಲಿ ಕಾರ್ಯನಿರ್ವಹಿಸಿ ಭೂಮಿ ತೊರಯಬೇಕು ಎಂದರು.

ಸಾಹಿತಿ ಕೊಟ್ರಪ್ಪ ಬ‌.ತೋಟದ ಮಾತನಾಡಿ, ಎಚ್.ಜಿ. ರಾಮುಲು ಅವರ ರಾಜಕೀಯ ಜೀವನ ಇಂದಿನ ಯುವ ರಾಜಕಾರಣಿಗಳಿಗೆ ಆದರ್ಶ. ಗಂಗಾವತಿ ತಾಲ್ಲೂಕಿ‌ನ ರಾಜಕೀಯ ಭೀಷ್ಮ ಎಂದರು ತಪ್ಪಾಗದು. 1980ರಲ್ಲಿ ಮಾಜಿ ಸಂಸದ ಮಲ್ಲಿಕಾರ್ಜುನ ನಾಗಪ್ಪ, ಪರಣ್ಣ ಮುನವಳ್ಳಿ, ಕರಿಯಣ್ಣ ಸಂಗಟಿ ಸೇರಿದಂತೆ ಇತರೆ ರಾಜಕಾರಣಿಗಳ ಜೊತೆ ಸಮಾಲೋಚನೆ ನಡೆಸಿ, ಎಚ್.ಜಿ.ರಾಮುಲು ಅವರ ಜೀವನ ಕುರಿತು ಬರವಣಿಗೆ ಮೂಡಿಸಲು ಆರಂಭಿಸಿದೆ ಎಂದರು.

ಅವರ 40 ರಿಂದ 50 ವರ್ಷಗಳ ರಾಜಕೀಯ ಜೀವನದಲ್ಲಿ ಎಲ್ಲೂ ಭ್ರಷ್ಟಾಚಾರಕ್ಕೆ ಎಡೆಮಾಡಿ ಕೊಟ್ಟಿಲ್ಲ. ಅವರಂತಹ ಧೀರ್ಘಕಾಲಿಕವಾಗಿ ರಾಜಕೀಯ ನಡೆಸುವ ರಾಜಕಾರಣಿ ಇನ್ನೂ ಜಿಲ್ಲೆಯಲ್ಲಿ ಹುಟ್ಟಿಲ್ಲ
ಎಂದರು.

ಇಂತಹ ಸರಳ ಸಜ್ಜನಿಕೆ ರಾಜಕಾರಣಿ ಜೀವನ ಕುರಿತು ಪುಸ್ತಕ ಬರೆದಿರುವುದಕ್ಕೆ ತುಂಬಾ ಸಂತೋಷವಾಗಿದೆ. ಮತ್ತೊಮ್ಮೆ ಬೂದುಗುಂಪ ಭೂದೇವಿ ದೇವಸ್ಥಾನ ಐತಿಹಾಸಿಕತೆ ಕುರಿತು ಬರವಣಿಗೆ ಮೂಡಿಸುವಂತೆ ಅವಕಾಶ ನೀಡಿದ್ದು, ಮುಂದಿನ ದಿನಗಳಲ್ಲಿ ಈ ಕೃತಿ ಹೊರಬರಲಿದೆ ಎಂದರು.

ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ತಮ್ಮದೇ ಆದ ವೈಶಿಷ್ಟ ಶೈಲಿಯಲ್ಲಿ ಈ ಭಾಗದಲ್ಲಿ 50 ವರ್ಷಕ್ಕೂ ಹೆಚ್ಚು ರಾಜಕೀಯ ಆಡಳಿತ ನಡೆಸಿದ, ಏಕೈಕ ವ್ಯಕ್ತಿ ಎಚ್.ಜಿ ರಾಮುಲು ಎಂದರು.

ಈ ವೇಳೆಯಲ್ಲಿ ರಾಜ್ಯ ಮತ್ತು ಜಿಲ್ಲೆಯ ಹಾಲಿ ಮತ್ತು ಮಾಜಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿ.ಪಂ ಅಧ್ಯಕ್ಷರು, ತಾ.ಪಂ ಮತ್ತು ಗ್ರಾ.ಪಂ ಅಧ್ಯಕ್ಷರು ಹಾಗೂ ಎಚ್.ಜಿ.ರಾಮುಲು ಅವರು ಅಭಿಮಾನಿಗಳು ಹೂ ಗುಚ್ಚ ನೀಡುವ ಮೂಲಕ ಜನ್ಮದಿನ ಶುಭಾಶಯಗಳನ್ನು ಕೋರಿದರು.

ಈ ವೇಳೆಯಲ್ಲಿ ಸಂಸದ ಕರಡಿ ಸಂಗಣ್ಣ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪುರ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಜಿ.ಪಂ ಅಧ್ಯಕ್ಷ ರಾಜಶೇಖರ್ ಹಿಟ್ನಾಳ, ಮಾಜಿ ಎಂಎಲ್ಸಿ ಶ್ರೀನಾಥ, ಎಚ್.ಆರ್. ಚನ್ನಕೇಶವ, ಎಚ್.ಎಸ್. ಭರತ್, ಜೋಗದ ನಾರಾಯಣಪ್ಪ, ಸಂತೋಷ್ ಕೆಲೋಜಿ, ನಾಗರಾಜ ಗುತ್ತೇದಾರ ಸೇರಿದಂತೆ ಗಣ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT