ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವರಣಗೋಡೆ ಕಾಮಗಾರಿ ಕಳಪೆ: ದೂರು

Last Updated 1 ಸೆಪ್ಟೆಂಬರ್ 2018, 17:01 IST
ಅಕ್ಷರ ಗಾತ್ರ

ಕುಷ್ಟಗಿ: ತಾಲ್ಲೂಕಿನ ನಿಡಶೇಸಿ ಗ್ರಾಮದ ಬಳಿ ಸರ್ಕಾರಿ ತೋಟಗಾರಿಕೆ ಕ್ಷೇತ್ರದ ಸುತ್ತಲೂ ನಿರ್ಮಿಸಲಾಗುತ್ತಿರುವ ಆವರಣಗೋಡೆ ಕಾಮಗಾರಿಯು ಕಳಪೆಯಿಂದ ಕೂಡಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ರಾಜ್ಯ ತೋಟಗಾರಿಕೆ ಅಭಿವೃದ್ಧಿ ಏಜೆನ್ಸಿ (ಕೆಎಸ್ಎಚ್ ಡಿಎ) ಉಸ್ತುವಾರಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು, ಜನರ ದೂರಿನಿಂದ ಎಚ್ಚೆತ್ತುಕೊಂಡಿರುವ ಇಲಾಖೆ ಅಧಿಕಾರಿಗಳು ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿದ್ದಾರೆ.

ರಾಜ್ಯ ವಲಯಕ್ಕೆ ಸೇರಿದ ಸುಮಾರು 59 ಎಕರೆ ಪ್ರದೇಶದ ವಿಸ್ತೀರ್ಣದಲ್ಲಿರುವ ಈ ತೋಟಗಾರಿಕೆ ಫಾರ್ಮ್ ಸುತ್ತಲೂ ಅಂದಾಜು ₹ 65 ಲಕ್ಷ ಮೊತ್ತದಲ್ಲಿ ಆವರಣಗೋಡೆ ನಿರ್ಮಿಸಲಾಗುತ್ತಿದೆ. ಆದರೆ, ನಿರ್ಮಾಣಕ್ಕೆ ಕಳಪೆ ಸಾಮಗ್ರಿಗಳನ್ನು ಬಳಸಲಾಗುತ್ತಿದೆ. ಕಾಮಗಾರಿ ಇದೇ ರೀತಿ ಮುಂದುವರಿದರೆ ಗೋಡೆ ಬಿಳುತ್ತದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಗೋಡೆಯ ತಳಪಾಯ ಕಾಮಗಾರಿ ತರಾತುರಿಯಲ್ಲಿ ನಡೆದಿದೆ. ಕಲ್ಲುಗಳು ಕಿತ್ತು ಬಂದಿವೆ. ಸಿಮೆಂಟ್‌ ಇಟ್ಟಿಗೆಗಳು ಗುಣಮಟ್ಟವಾಗಿಲ್ಲ. ಕಳಪೆಯಿಂದ ಕೂಡಿವೆ ಎಂದು ನಿಡಶೇಸಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಶರಣಪ್ಪ ಹಾವರಗಿ ದೂರಿದರು.

ಕಾಮಗಾರಿ ಟೆಂಡರ್‌ ಪಡೆದವರ ಬಗ್ಗೆ ಎಲ್ಲಿಯೇ ಮಾಹಿತಿ ಫಲಕಗಳನ್ನು ಅಳವಡಿಸಿಲ್ಲ. ಈ ಹಿಂದೆ ಶಾಸಕ ಅಮರೇಗೌಡ ಬಯ್ಯಾಪುರ ಅವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದಾಗಲೂ ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ಅವರ ಗಮನಕ್ಕೆ ಬಂದಿತ್ತು ಎಂದರು.

ಕಳಪೆ ಕಾಮಗಾರಿ ಬಗ್ಗೆ ಸ್ಥಳೀಯರು ಪ್ರಶ್ನಿಸಿದರೆ ದೌರ್ಜನ್ಯ ಮಾಡಲಾಗುತ್ತಿದೆ ಎಂದು ಅವರು ದೂರಿದರು.

ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಶಾಸಕ ಬಯ್ಯಾಪುರ ಶಿಫಾರಸು ಮಾಡಬೇಕು ಎಂದು ನಿಡಶೇಸಿ ಗ್ರಾಮಸ್ಥರು ಒತ್ತಾಯಿಸಿದರು.

ಈ ಕುರಿತು ಮಾಹಿತಿಗಾಗಿ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಅವರಿಗೆ ಕರೆ ಮಾಡಿದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ.

‘ಜನರ ದೂರಿನ ಹಿನ್ನೆಲೆಯಲ್ಲಿ ಕೆಲಸ ಸ್ಥಗಿತಗೊಳಿಸಲಾಗಿದೆ. ಸ್ಥಳ ಪರಿಶೀಲನೆ ನಡೆಸುವಂತೆ ಇಲಾಖೆಯ ತಾಂತ್ರಿಕ ವಿಭಾಗಕ್ಕೆ ಪತ್ರ ಬರೆಯಲಾಗಿದೆ’ ಎಂದು ಕ್ಷೇತ್ರದ ಅಭಿವೃದ್ಧಿ ಉಸ್ತುವಾರಿ ವಹಿಸಿಕೊಂಡಿರುವ ತೋಟಗಾರಿಕೆ ಸಹಾಯಕ ನಿರ್ದೇಶಕ ದುರ್ಗಾಪ್ರಸಾದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT