ಬುಧವಾರ, ಮಾರ್ಚ್ 29, 2023
25 °C
ಸಾಂಸ್ಕೃತಿಕ ಗಟ್ಟಿತನಕ್ಕೂ ಬಡತನ, ಚುನಾವಣಾ ಮೂಡ್‌ನಲ್ಲಿ ಜಿಲ್ಲೆಯ ಸಂಭ್ರಮವೇ ಮರೆತ ಜನಪ್ರತಿನಿಧಿಗಳು

ಕೊಪ್ಪಳ: ಉತ್ಸವಗಳ ಆಚರಣೆಗೂ ನಿರುತ್ಸಾಹ

ಪ್ರಮೋದ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಈಗ ರಾಜ್ಯದ ಬಹಳಷ್ಟು ಜಿಲ್ಲೆಗಳಲ್ಲಿ ಉತ್ಸವಗಳದ್ದೇ ಭರಾಟೆ. ಆದರೆ, ಕೊಪ್ಪಳ ಜಿಲ್ಲೆಯಲ್ಲಿ ಇವುಗಳ ಯಾವ ಸಂಭ್ರಮವೂ ಇಲ್ಲ.

ಜಿಲ್ಲೆ ರಚನೆಯಾಗಿ 15 ವರ್ಷಗಳಾದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಉತ್ಸವವನ್ನು ರಾಜ್ಯದ ಜನ ಬೆರಗು ಕಣ್ಣಿನಿಂದ ನೋಡುವಂತೆ ಆಚರಿಸಲಾಯಿತು. ಬಳ್ಳಾರಿ ಜಿಲ್ಲೆಯ ಉತ್ಸವವೂ ಜರುಗಿತು. ನೆರೆಯ ವಿಜಯನಗರ ಜಿಲ್ಲೆಯಲ್ಲಿ ಜ. 27ರಿಂದ ಮೂರು ದಿನ ಹಂಪಿ ಉತ್ಸವ ನಡೆಯಲಿದೆ. ಹಂಪಿ ಉತ್ಸವದ ಭಾಗವೇ ಆಗಿರುವ ಆನೆಗೊಂದಿ ಉತ್ಸವ ಮಾತ್ರ ಆಚರಣೆ ಮಾಡಲು ಜಿಲ್ಲಾಡಳಿತಕ್ಕೆ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಕೊಪ್ಪಳ ಜಿಲ್ಲೆ ರಾಯಚೂರಿನಿಂದ ಬೇರ್ಪಟ್ಟು 25 ವರ್ಷಗಳಾಗಿವೆ. ಬೆಳ್ಳಿಹಬ್ಬದ ಸಂಭ್ರಮ ದಾಖಲೆಗಳಲ್ಲಿ ಇದೆಯಾದರೂ ಆಚರಣೆಯಲ್ಲಿ ಎಲ್ಲಿಯೂ ಕಂಡುಬಂದಿಲ್ಲ. ಹೈದರಾಬಾದ್‌ ನಿಜಾಮರ ಆಡಳಿತದಿಂದ ಮುಕ್ತಿಹೊಂದಿ ‘ಅಮೃತ’ ಗಳಿಗೆ ಬಂದಿದೆ. ಇದಕ್ಕೂ ಈಗ 75 ವರ್ಷಗಳ ವಸಂತ. ಈ ಎಲ್ಲಾ ಸವಿ ನೆನಪುಗಳ ಸಲುವಾಗಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡುವ ಗೋಜಿಗೆ ಹೋಗಿಲ್ಲ.

ಜನಪ್ರತಿನಿಧಿಗಳು ಮುಂಬರುವ ಚುನಾವಣೆಯ ಮತಬೇಟೆ, ವೋಟ್‌ ಬ್ಯಾಂಕ್‌ ಲೆಕ್ಕಾಚಾರ, ನಿರಂತರ ಸುತ್ತಾಟ, ಹಳ್ಳಿಗಳಲ್ಲಿ ಸಭೆ, ಪೈಪೋಟಿಗೆ ಇಳಿದವರಂತೆ ರಾಜಕೀಯ ಯಾತ್ರೆ ಹಾಗೂ ಸಮಾವೇಶಗಳನ್ನು ಮಾಡುತ್ತಿದ್ದಾರೆ. ಆದರೆ, ಜಿಲ್ಲೆಯ ಯಾವ ಜನಪ್ರತಿನಿಧಿಗಳಿಗೂ ಬೆಳ್ಳಿ ಮಹೋತ್ಸವ, ಅಮೃತ ಸಂಭ್ರಮ ಮತ್ತು ಆನೆಗೊಂದಿ ಉತ್ಸವ ಹೀಗೆ ಯಾವ ಅವಕಾಶಗಳನ್ನು ದೊಡ್ಡ ಸಂಭ್ರಮವನ್ನಾಗಿ ಮಾಡಲಿಲ್ಲ.

ಕೊಪ್ಪಳ ಜಿಲ್ಲೆಯಾಗಿ 25 ವರ್ಷಗಳಾದರೂ ಅಭಿವೃದ್ಧಿಯಲ್ಲಿ ಆಗಬೇಕಾದ ಕೆಲಸಗಳು ಸಾಕಷ್ಟಿವೆ. ಎರಡೂವರೆ ದಶಕಗಳ ಅವಧಿಯಲ್ಲಿ ಆದ ಕೆಲಸಗಳೂ ಇವೆ. ಅವುಗಳ ಪುನರ್‌ಮನನ, ಭವಿಷ್ಯದ ಕೆಲಸಗಳು, ಅಭಿವೃದ್ಧಿ ಯೋಜನೆಗಳು, ಹೊಸ ಜಿಲ್ಲೆಯ ಅಸ್ತಿತ್ವಕ್ಕಾಗಿ ಹೋರಾಡಿದವರಿಗೆ ಗೌರವ ಸಮರ್ಪಣೆ ಮಾಡುವ ಜವಾಬ್ದಾರಿ ಜಿಲ್ಲೆಯ ಜನಪ್ರತಿನಿಧಿಗಳ ಮೇಲಿದೆ.

ಪೂರ್ಣ ಸಮಾರಂಭವನ್ನು ಇತಿಹಾಸದ ಪುಟಗಳಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ರೀತಿಯಲ್ಲಿ ಆಯೋಜನೆ ಮಾಡಬೇಕಿತ್ತು. ಜಿಲ್ಲೆಯ ಅಭಿವೃದ್ಧಿಗೆ ಮುಂದಿನ 10 ವರ್ಷ, 25 ವರ್ಷಗಳ ಸಮಗ್ರ ಯೋಜನೆಯ ನೀಲನಕ್ಷೆ ರೂಪಿಸಬೇಕಿತ್ತು. ಜಿಲ್ಲಾಡಳಿತ, ಜನಪ್ರತಿನಿಧಿಗಳು, ಜನ, ಸಂಘ– ಸಂಸ್ಥೆಗಳು ಒಗ್ಗಟ್ಟಾಗಿ ಸಮಗ್ರ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಬೇಕಾಗಿತ್ತು. ಇವು ಯಾವ ಕೆಲಸಗಳು ಕೂಡ ಆಗಲಿಲ್ಲ. ಜನಪ್ರತಿನಿಧಿಗಳಂತೆಯೇ ಜನ ಕೂಡ ನಿರುತ್ಸಾಹಕ್ಕೆ ಜಾರಿದರು.

ಜವಾಬ್ದಾರಿ ಮರೆತವರನ್ನು ಎಚ್ಚರಿಸುವ ಕೆಲಸವನ್ನು ಜಿಲ್ಲೆಯ ಹೋರಾಟ ಗಾರರು, ಸಂಘಟನೆಯವರು, ಸಂಘ– ಸಂಸ್ಥೆಗಳು ಮಾಡಬೇಕಿತ್ತು. ಸಾಂಸ್ಕೃತಿಕ ಲೋಕದ ಪ್ರತಿನಿಧಿಗಳೇ ಆದ ಸಾಹಿತಿಗಳು, ಕಲಾವಿದರು ಮತ್ತು ಹೋರಾಟಗಾರರ ವಲಯ
ಕೂಡ ಉತ್ಸವ ಆಚರಣೆ
ಮಾಡದಿರುವ ಬಗ್ಗೆ ಗಟ್ಟಿಧ್ವನಿ ಎತ್ತಬೇಕಿತ್ತು. ಈಗ ಚಕಾರ ಎತ್ತದಿರುವುದು ಕೂಡ ಸಾಂಸ್ಕೃತಿಕ ದಿವಾಳಿತನಕ್ಕೆ ಸಾಕ್ಷಿಯಂತಿದೆ.

ಹಂಪಿಗೆ ಸಿಗುವ ಆದ್ಯತೆ ಆನೆಗೊಂದಿಗೆ ಏಕಿಲ್ಲ?

ಗಂಗಾವತಿ: ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಉದ್ದೇಶದಿಂದ ಆರಂಭಿಸಿದ ಆನೆಗೊಂದಿ ಉತ್ಸವ ದಿನಾಂಕ ನಿಗದಿ ಮಾಡದೇ ಇರುವುದು ಜಿಲ್ಲೆಯ ಜನರಲ್ಲಿ ಬೇಸರ ಮೂಡಿಸಿದೆ.

ರಾಜಮನೆತನದ ಇತಿಹಾಸ ಹೊಂದಿರುವ ಆನೆಗೊಂದಿ ಸಮೀಪದಲ್ಲಿ ಹನುಮ ಜನಿಸಿದ ನಾಡು ಅಂಜನಾದ್ರಿ, ಪಂಪಾ ಸರೋವರ, ನವವೃಂದಾವನ ಗಡ್ಡಿ, ಚಿಂತಾಮಣೆ, ದುರ್ಗಾದೇವಿ ದೇವಸ್ಥಾನ ಸೇರಿದಂತೆ ಅನೇಕ ಪ್ರದೇಶಗಳಿವೆ. ಆದ್ಯತೆ ನೀಡಿ ಅಭಿವೃದ್ಧಿ ಮಾಡಿದ್ದರೆ ಆನೆಗೊಂದಿ ಕೂಡ ವಿಶ್ವಪ್ರಸಿದ್ಧ ತಾಣವಾಗಿ ಮಾರ್ಪಾಡು ಆಗಬೇಕಿತ್ತು.

1998ರಲ್ಲಿ ಎಂ.ಪಿ. ಪ್ರಕಾಶ ಆನೆಗೊಂದಿ ಉತ್ಸವ ಆರಂಭಿಸಿದ್ದರು. ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗುತ್ತಿತ್ತು. ಆನಂತರ ಸ್ಥಳೀಯರ ಸಹಕಾರದಿಂದ ಕೆಲ ವರ್ಷ ಉತ್ಸವ ಆಚರಿಸಲಾಯಿತು. ಆಗ ಸರ್ಕಾರ ಬಜೆಟ್‌ನಲ್ಲಿ ಆನೆಗೊಂದಿ ಉತ್ಸವಕ್ಕೆ ಪ್ರತ್ಯೇಕ ಅನುದಾನ ಘೋಷಣೆ ಮಾಡಿತು. ಈಗ ಉತ್ಸವ ಆಚರಣೆಗೆ ಅನುದಾನದ ಕೊರತೆ ಎನ್ನುವ ಮಾತು ಸರ್ಕಾರದ ವತಿಯಿಂದಲೇ ಬರುತ್ತದೆ. ಆನೆಗೊಂದಿ ಭಾಗದಲ್ಲಿ ದೇವಾಲಯಗಳು, ಶಾಸನಗಳು, ಮಂಟಪಗಳು, ಶಿಲ್ಪಕಲೆ, ಗುಹೆ ಸೇರಿ ವಿಜಯನಗರ ಕಾಲಕ್ಕೆ ಸಂಬಂಧಪಟ್ಟ ಕುರುಹುಗಳು ಸಾಕಷ್ಟಿದ್ದು, ಇಲ್ಲಿನ ಕಲೆ ಸಂಸ್ಕೃತಿ, ಸಂಪ್ರದಾಯ ಉಳಿಸಲು, ದೇಶ-ವಿದೇಶ, ಅನ್ಯ ರಾಜ್ಯಗಳಿಗೆ ಸಾರಲು ಉತ್ಸವ ನಡೆಸಲಾಗುತ್ತಿತ್ತು. ಉತ್ಸವದಲ್ಲಿ ಹಗ್ಗಜಗ್ಗಾಟ, ಬ್ಯಾಡ್ಮಿಂಟನ್, ಹ್ಯಾಂಡ್ ಬಾಲ್, ಸೈಕ್ಲಿಂಗ್, ವಾಲಿಬಾಲ್, ಕುಸ್ತಿ, ರಂಗೋಲಿ ಸ್ಪರ್ಧೆ, ನೃತ್ಯ, ಕೋಲಾಟ, ಚಿತ್ರನಟರಿಂದ ಸಂಗೀತ, ಬೋಟಿಂಗ್, ಕ್ಲೈಮಿಂ ಗ್, ಚಿತ್ರಕಲೆ, ಫೋಟೋಗ್ರಫಿ ಸ್ಟಂಟ್ಸ್, ಸ್ಥಳೀಯ ಕಲಾವಿದರಿಂದ ನೃತ್ಯ, ಕಾರ್ಯಕ್ರಮಗಳು ಆಯೋಜಿಸಿ ಸಾಂಸ್ಕೃತಿಕ ಲೋಕ ಅನಾವರಣ ಆಗುತ್ತಿತ್ತು.

ಕಲೆ, ಪರಂಪರೆ, ಸಾಹಿತ್ಯ, ಸಂಸ್ಕೃತಿ ಉಳಿಸಿ, ಬೆಳೆಸುವ ಮಹತ್ವದ ಜವಾಬ್ದಾರಿ ಹೊತ್ತ ಪ್ರವಾಸೋದ್ಯಮ ಇಲಾಖೆಯ ಸಚಿವ ಆನಂದ್‌ ಸಿಂಗ್‌ ಅವರೇ ಜಿಲ್ಲೆಗೆ ಉಸ್ತುವಾರಿ ಆಗಿದ್ದಾರೆ. ತಮ್ಮ ಜಿಲ್ಲೆ ವ್ಯಾಪ್ತಿಯ ಹಂಪಿಯಲ್ಲಿ ಉತ್ಸವ ಆಯೋಜಿಸಿ, ಆನೆಗೊಂದಿಯನ್ನು ಮರೆತೇ ಬಿಟ್ಟಿದ್ದು ಮಾತ್ರ ಸೋಜಿಗ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು