ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾದಡಿ ಶಾಲೆಗಳನ್ನು ಉತ್ತಮವಾಗಿ ರೂಪಿಸಿ: ಜಿ.ಪಂ ಸಿಇಒ ಫೌಜಿಯಾ ತರುನ್ನುಮ್‌

ನರೇಗಾದಡಿ ಶಾಲೆಗಳನ್ನು ಉತ್ತಮವಾಗಿ ರೂಪಿಸುವ ಯೋಜನೆ
Last Updated 15 ನವೆಂಬರ್ 2021, 3:00 IST
ಅಕ್ಷರ ಗಾತ್ರ

ಗಂಗಾವತಿ: ‘ಪ್ರತಿಯೊಬ್ಬರೂ ಜೀವನದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಳ್ಳಬೇಕು. ನಂತರ ಆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಬೇಕು’ ಎಂದು ಮಕ್ಕಳಿಗೆ ಜಿ.ಪಂ ಸಿಇಒ ಫೌಜಿಯಾ ತರುನ್ನುಮ್ ಅವರು ಕಿವಿಮಾತು ಹೇಳಿದರು.

ತಾಲ್ಲೂಕಿನ ವಡ್ಡರಹಟ್ಟಿ ಗ್ರಾ.ಪಂ ವ್ಯಾಪ್ತಿಯ ಆರ್ಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನರೇಗಾದಡಿ ನಿರ್ಮಾಣಗೊಂಡ ಶಾಲಾ ಆಟದ ಮೈದಾನ ಉದ್ಘಾಟನೆ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನರೇಗಾ ಯೋಜನೆಯಡಿ ಜಿಲ್ಲೆಯ ಪ್ರತಿಯೊಂದು ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲಾಗುತ್ತಿದೆ. ಆರ್ಹಾಳ ಶಾಲೆಯಲ್ಲಿ ನರೇಗಾ ಯೋಜನೆಯಡಿ ಅಟದ ಮೈದಾನಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.

ಮಕ್ಕಳು ಓದಿನ ಜತೆಗೆ ಆಟದಲ್ಲಿ ಭಾಗವಹಿಸುವ ಮೂಲಕ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಈ ಮೈದಾನಗಳು ಸಹಕಾರಿಯಾಗಲಿವೆ. ಜತೆಗೆ ಗ್ರಾಮೀಣ ಭಾಗದಲ್ಲಿ ಎಲೆ ಮರೆಕಾಯಿಯಂತೆ ಇರುವ ಪ್ರತಿಭೆಗಳನ್ನು ಹೊರ ತರುವ ವೇದಿಕೆಯಾಗಿದೆ ಎಂದರು.

ಮಕ್ಕಳಲ್ಲಿನ ಆಸಕ್ತಿಯನ್ನು ಶಾಲಾ ಶಿಕ್ಷಕರು ಹಾಗೂ ಪೋಷಕರ ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ನರೇಗಾದಡಿ ನಿರ್ಮಾಣ ಮಾಡಿರುವ ಈ ಆಟದ ಮೈದಾನಗಳು ಸದ್ಭಳಕೆಯಾಗಲಿ ಎಂದು ಹೇಳಿದರು.

ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಮೈದಾನವನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು ಎಂದರು.

ನಂತರ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಮಾತನಾಡಿ,‘ಮಕ್ಕಳು ಏನು ಮಾಡುತ್ತಿರೋ ಅದನ್ನು ಶೇ 100 ರಷ್ಟು ಮಾಡಿ, ಆಟವಾಡುವಾಗ ಆಟವಾಡಿ, ಅಭ್ಯಾಸ ಮಾಡುವಾಗ ಅಭ್ಯಾಸ ಮಾಡಿ. ಜತೆಗೆ ನಿಮಗೆ ಯಾವ ಕ್ರೀಡೆಯಲ್ಲಿ ಆಸಕ್ತಿ ಇದೆಯೋ ಆ ಕ್ರೀಡೆಯಲ್ಲಿ ಹೆಚ್ಚುತೊಡಗಿಸಿಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಿ ರಾಜ್ಯ, ರಾಷ್ಟ್ರಕ್ಕೆ ಕೀರ್ತಿಯನ್ನು ತರುವಂತಾವರಾಗಬೇಕು’ ಎಂದು ಹೇಳಿದರು.

ಆಟವಾಡಿದ ಡಿಸಿ, ಸಿಇಒ: ಕೇಕ್ ಕತ್ತರಿಸಿ ಮಕ್ಕಳ ದಿನಾಚರಣೆ ಆಚರಿಸಿದ ಬಳಿಕ ಖುದ್ದು, ಡಿಸಿ, ಸಿಇಒ ಅವರು ನರೇಗಾದಡಿ ನಿರ್ಮಾಣವಾಗಿರುವ ಆಟದ ಮೈದಾನಗಳನ್ನು ಮಕ್ಕಳ ಜತೆ ಕೊಕ್ಕೊ, ಕಬ್ಬಡಿ, ಬ್ಯಾಡ್ಮಿಂಟನ್, ವಾಲಿಬಾಲ್ ಆಡುವ ಮೂಲಕ ಉದ್ಘಾಟಿಸಿದರು.

ತಾ.ಪಂ ಇಒ ಡಾ.ಡಿ.ಮೋಹನ್, ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ, ಪಿಡಿಒ ಮಂಜುನಾಥ ಅಂಗಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ, ಸಿಡಿಪಿಒ ಗಂಗಪ್ಪ ಸೇರಿದಂತೆ ಶಾಲಾ ಶಿಕ್ಷಕರು, ಮಕ್ಕಳು, ಗ್ರಾ.ಪಂ ಸಿಬ್ಬಂದಿ ಇದ್ದರು.

‘ದೇಶಕ್ಕೆ ನೆಹರೂ ಕೊಡುಗೆ ಅಪಾರ’

ಕನಕಗಿರಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಶಾಲೆಗಳಲ್ಲಿ ಭಾನುವಾರ ಮಕ್ಕಳ ದಿನವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಇಲ್ಲಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜವಾಹರಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಉಪ ಪ್ರಾಂಶುಪಾಲ ಜಗದೀಶ ಹಾದಿಮನಿ ಮಾತನಾಡಿ,‘ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ನೆಹರೂ ಅವರು ಸಕ್ರಿಯರಾಗಿದ್ದರು. ಪ್ರಥಮ ಪ್ರಧಾನ ಮಂತ್ರಿಯಾದ ಅವರು ಶಿಕ್ಷಣ, ನಿರುದ್ಯೋಗ, ನಿರಾಶ್ರಿತರ ಸಮಸ್ಯೆ ಸೇರಿ ಹಲವು ಸವಾಲುಗಳನ್ನು ಎದುರಿಸಿ ಸಮರ್ಥವಾಗಿ ಅಧಿಕಾರ ನಡೆಸಿದರು’ ಎಂದು ಸ್ಮರಿಸಿದರು.

ಶಿಕ್ಷಕರಾದ ಟಿ.ಎಚ್.ಸೈಫುಲ್, ಶರಣಬಸವನಗೌಡ ಪಾಟೀಲ, ಕನಕಾಚಲ ಕಿನ್ನಾಳ ಹಾಗೂ ಪ್ರಭುಲಿಂಗ ವಸ್ತ್ರದ ಮಾತನಾಡಿದರು.

ಶಿಕ್ಷಕರಾದ ವಿಜೇಂದ್ರ, ಮಂಜುಳಾ ಮೇಟಿ, ಶಾಮೀದಸಾಬ ಲೈನದಾರ, ಶಂಕ್ರಪ್ಪ ಸೋಮನಕಟ್ಟಿ ಹಾಗೂ ಶಿಕ್ಷಕರು ಹಾಗೂ ಸಿಬ್ಬಂದಿ ಇದ್ದರು.

ಸಮೀಪದ ಕೆ. ಮಲ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ವಿದ್ಯಾರ್ಥಿಗಳಾದ ಮೀನಾಕ್ಷಿ, ಮಂಜುಳಾ, ಉಮಾದೇವಿ, ಮುತ್ತಣ್ಣ, ಹನುಮೇಶ, ಭೀಮಮ್ಮ, ಹುಲಿಗೆಮ್ಮ, ಕೃಷ್ಣೆಗೌಡ ಅವರು ವಿವಿಧ ವಿಜ್ಞಾನದ ಪ್ರಯೋಗಗಳನ್ನು ಮಾಡಿದರು.

ಪ್ರಭಾರ ಮುಖ್ಯಶಿಕ್ಷಕ ಗುರುಶಾಂತಯ್ಯ ಹಿರೇಮಠ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೋಶಾಧ್ಯಕ್ಷ ಚೇತನಕುಮಾರ ಹಾಗೂ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇಲ್ಲಿನ ದ್ಯಾಮವ್ವನಗುಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಶಂಶಾದಬೇಗ್ಂ, ಮುಖ್ಯಶಿಕ್ಷಕಿ ನಾಗರತ್ನ ಮಾತನಾಡಿದರು.

ಶಿಕ್ಷಕರಾದ ಶಿವಕುಮಾರ ಹಾಗೂ ಅಕ್ಕಮಹಾದೇವಿ ಕಲಾದಗಿ ಇದ್ದರು.

‘ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ’

ಕುಕನೂರು: ‘ಮಕ್ಕಳು ದೇಶದ ಆಸ್ತಿ. ಪಾಲಕರು ಅವರಿಗೆ ಉತ್ತಮ ಸಂಸ್ಕಾರ ಹಾಗೂ ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು’ ಎಂದು ಅನ್ನದಾನೇಶ್ವರ ಶಾಖಾಮಠದ ಸೇವಾ ಸಮಿತಿ ಅಧ್ಯಕ್ಷ ಶಂಬಣ್ಣ ಜೋಳದ ಸಲಹೆ ನೀಡಿದರು.

ಇಲ್ಲಿನ ಅನ್ನದಾನೇಶ್ವರ ಶಾಖಾಮಠದಲ್ಲಿ ಕನ್ನಡ ಜಾನಪದ ಪರಿಷತ್ತಿನ ತಾಲ್ಲೂಕು ಘಟಕ ಹಾಗೂ ಜಗದ್ಗುರು ಅನ್ನದಾನೇಶ್ವರ ಕಲಾ ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ಭಾನುವಾರ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ಪಾಲಕರು ಮಕ್ಕಳಿಗೆ ಒತ್ತಡ ಹಾಕದೆ ಸ್ವಇಚ್ಛೆಯಿಂದ ಇರಲು ಬಿಡಬೇಕು ಎಂದರು.

ಕನ್ನಡ ಜಾನಪದ ಪರಿಷತ್ ಉತ್ತಮವಾದ ಕಾರ್ಯ ಚಟುವಟಿಕೆಗಳಿಂದ ಅರ್ಥಪೂರ್ಣವಾಗಿ ಮಕ್ಕಳ ದಿನಾಚರಣೆ ಹಮ್ಮಿಕೊಂಡಿದ್ದು ಸಂತಸ ತಂದಿದೆ ಎಂದರು.

ಡಾ.ಮಹಾದೇವ ದೇವರು ಕಾರ್ಯಕ್ರಮದ ಸಾನ್ನುಧ್ಯ ವಹಿಸಿದ್ದರು.

ಕನ್ನಡ ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಮುರಾರಿ ಭಜಂತ್ರಿ, ಉದ್ಯಮಿ ಹನುಮಂತಪ್ಪ ಹಂಪನಾಳ, ಹಿರಿಯ ಕಲಾವಿದ ಬಾಬಣ್ಣ ಕಲ್ಮನಿ, ಗದಿಗೆಪ್ಪ ಪವಾಡಶೆಟ್ಟಿ, ಖಾಸಿಂಸಾಬ್ ಸಂಗಟಿ, ಲಿಂಗರಾಜ, ಈಶ್ವರಯ್ಯ, ವೀರಭದ್ರಯ್ಯ ಸುಂಕದ್, ಖಾನ್‍ಸಾಬ ಕಲ್ಲೂರು, ಮೇಘರಾಜ್ ಹಾಗೂ ಜಿ.ಎಸ್.ಶಿಂಧೆ ಇದ್ದರು.

‘ಮಕ್ಕಳೇ ರಾಷ್ಟ್ರದ ಸಂಪತ್ತು’

ಯಲಬುರ್ಗಾ: ಇಲ್ಲಿನ ಮಂಜುನಾಥ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಭಾನುವಾರ ಮಕ್ಕಳ ದಿನಾಚರಣೆ ಪ್ರಯುಕ್ತ ನೆಹರೂ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು. ಮಕ್ಕಳಿಗೆ ಸಿಹಿ ತಿನ್ನಿಸಿ ಸಂಭ್ರಮಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಮಾತನಾಡಿ,‘ದೇಶದ ಸಂಪತ್ತಾಗಿರುವ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪರಿಶ್ರಮ ಅಗತ್ಯ. ಕುಟುಂಬದಲ್ಲಿ ಪಾಲಕರು, ಶಾಲೆಗಳಲ್ಲಿ ಶಿಕ್ಷಕರು ಹಾಗೂ ಸಾರ್ವಜನಿಕರು ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ವಿಕಾಸಕ್ಕಾಗಿ ಶ್ರಮಿಸಬೇಕು’ ಎಂದರು.

ಮಕ್ಕಳ ಮಹತ್ವ ಅರಿತು ಚಾಚಾ ನೆಹರೂ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಪ್ರಾಚಾರ್ಯ ಗಂಗಾಧರ ದಫೇದ ಮಾತನಾಡಿದರು.

ಮಕ್ಕಳ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಮಲ್ಲಪ್ಪ ಸತ್ತೂರ, ಮಲ್ಲಿಕಾರ್ಜುನ, ಮಂಜುನಾಥ ಅಕ್ಕಸಾಲಿಗರ, ಸುಮಂಗಲಾ, ಉಮಾ, ಆಸ್ಪಿಯಾ ಹಾಗೂ ವಿಶಾಲಾಕ್ಷಿ ಇದ್ದರು. ಶಿಕ್ಷಕ ಎಸ್.ಕೆ.ಪಾಟೀಲ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT