ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಶಾಲೆ ಕಾಣದ ಮಕ್ಕಳು, ಆಧಾರ್‌ ಗಗನ ಕುಸುಮ!

ಹೇಮಗುಡ್ಡದಲ್ಲಿ ನೆಲೆಗೊಂಡ ಕುಟುಂಬ, ಸರ್ಕಾರದ ಯೋಜನೆಯಿಂದ ದೂರ
Last Updated 17 ಸೆಪ್ಟೆಂಬರ್ 2022, 5:33 IST
ಅಕ್ಷರ ಗಾತ್ರ

ಕೊಪ್ಪಳ: ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಉತ್ಸವ ಆಚರಣೆಯ ಸಂಭ್ರಮದಲ್ಲಿವೆ. ಆದರೆ, ಗಂಗಾವತಿ ತಾಲ್ಲೂಕಿನ ಹೇಮಗುಡ್ಡ ಗ್ರಾಮದ ರಸ್ತೆಬದಿಯಲ್ಲಿ ಆ ಕುಟುಂಬದ ಸದಸ್ಯರು ಸೀತಾಫಲ ಹಣ್ಣುಗಳನ್ನು ಮಾರಾಟ ಮಾಡುತ್ತಾರೆ. ಇನ್ನೂ ಕೆಲವರು ಕಟ್ಟಿಗೆ ಮಾರಾಟ ಸೇರಿದಂತೆ ಬೇರೆ ಬೇರೆ ಕೆಲಸದಿಂದ ಬರುವ ಆದಾಯದಿಂದ ಬದುಕು ಕಟ್ಟಿಕೊಂಡಿದ್ದಾರೆ. ಅವರಲ್ಲಿ ಕೆಲ ಮಕ್ಕಳು ಈಗಲೂ ಶಾಲೆಯ ಮುಖ ನೋಡಿಲ್ಲ. ಮನೆಯವರಿಗೆ ಆಧಾರ್‌ ಕಾರ್ಡ್‌ ಇಲ್ಲ!

ಹಲವಾರು ವರ್ಷಗಳಿಂದ ಹೇಮಗುಡ್ಡದಲ್ಲಿ ವಾಸವಾಗಿದ್ದರೂ ಈ ಕುಟುಂಬದವರು ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗದವರು. ಕುಟುಂಬಸ್ಥರಿಗೆ ಆಧಾರ್‌ ಕಾರ್ಡ್‌ ಇಲ್ಲದ ಕಾರಣ ನರೇಗಾ ಸೇರಿದಂತೆ ಎಲ್ಲಿಯೂ ಕೆಲಸ ಸಿಗುತ್ತಿಲ್ಲ. ಪರಿಶಿಷ್ಟ ಪಂಗಡದ ಬೇರೆ, ಬೇರೆ ಕುಟುಂಬಗಳ 11 ಮತ್ತು 12 ವರ್ಷದ ಇಬ್ಬರು ಬಾಲಕಿಯರಿಗೆ ಶಾಲೆ ಗಗನ ಕುಸುಮವಾಗಿದೆ.

ಅದರಲ್ಲಿ ಒಬ್ಬ ಬಾಲಕಿಯ ತಾಯಿ ಮೂಕಿಯಾಗಿದ್ದು ಕೂಲಿ ಕೆಲಸ ಮಾಡುತ್ತಿದ್ದಾರೆ. ಶರಣಪ್ಪ ಎಂಬ ವ್ಯಕ್ತಿಗೆ ಇಲ್ಲಿಯವರೆಗೂ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಮನೆ ಸಹ ಇಲ್ಲದಿರುವುದು ಗೊತ್ತಾಗಿದೆ. ಹೇಮಗುಡ್ಡ ಗಂಗಾವತಿ ಸಮೀಪದಲ್ಲಿಯೇ ಇದ್ದರೂ ಆ ಕುಟುಂಬದವರು ಸಮಾಜದ ಜನರೊಂದಿಗೆ ದೂರವೇ ಉಳಿದಿದ್ದಾರೆ.

ಇದನ್ನು ತಿಳಿದ ಗಂಗಾವತಿ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗ್ಯಾನನಗೌಡ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಹಕಾರದಿಂದ ಮಕ್ಕಳನ್ನು ಶಾಲೆಗೆ ಸೇರಿಸಲು ಪ್ರಯತ್ನಿಸಿದ್ದರೂ, ದಾಖಲೆಗಳ ಕೊರತೆ ಸಮಸ್ಯೆಯಾಗಿ ಪರಿಣಮಿಸಿದೆ.ಹೇಮಗುಡ್ಡ ಸಮೀಪದ ಚಿಕ್ಕಬೆಣಕಲ್‌ ಗ್ರಾಮದ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಶಿಕ್ಷಣ ಕೊಡಿಸಲು ಕ್ರಮ ಕೈಗೊಂಡಿದ್ದಾರೆ.

ಹೇಮಗುಡ್ಡ ಗ್ರಾಮದ ಹನುಮಂತಪ್ಪ ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿ ’ಗುಡ್ಡದಲ್ಲಿ ವಾಸವಿರುವ ಶರಣಪ್ಪ ಹಾಗೂ ಕುಟುಂಬದ ಸದಸ್ಯರಿಗೆ ಆಧಾರ್ ಕಾರ್ಡ್ ಇಲ್ಲ. ಹೀಗಾಗಿ ಎಲ್ಲಿಯೂ ಕೆಲಸ ಸಿಗುತ್ತಿಲ್ಲ. ಗುಡ್ಡದಲ್ಲಿ ಕಟ್ಟಿಗೆ ಕಡಿದು, ಸೀತಾಫಲ ಮಾರಾಟ ಮಾಡಿ ಬದುಕು ನಡೆಸುತ್ತಿದ್ದಾರೆ. ಅವರನ್ನು ಸಮಾಜಕ್ಕೆ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕಾಗಿದೆ’ ಎಂದರು.

ಬಿಇಒಗೆ ಪತ್ರ ಬರೆಯುವೆ: ಗ್ಯಾನನಗೌಡ

ಕೊಪ್ಪಳ: ಶಾಲೆಯ ಮುಖವನ್ನೇ ನೋಡದ ಮಕ್ಕಳ ಇಂಥ ವಿಶೇಷ ಪ್ರಕರಣಗಳಲ್ಲಿ ಏನು ಮಾಡಬೇಕು ಎಂದು ಮಾಹಿತಿ ಪಡೆಯಲು ಬಿಇಒಗೆ ಹಾಗೂ ಆಧಾರ್‌ ಕಾರ್ಡ್ ಪ್ರಾಧಿಕಾರಕ್ಕೆ ಪತ್ರ ಬರೆಯುವೆ ಎಂದುಗಂಗಾವತಿ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗ್ಯಾನನಗೌಡ ಹೇಳಿದರು.

‘ಮಕ್ಕಳಿಗೆ ಮೊದಲು ಪ್ರಾಥಮಿಕ ಅಕ್ಷರ ಅಭ್ಯಾಸ ಮಾಡಿಸಬೇಕು. ವಸತಿ ಶಾಲೆಯಲ್ಲಿ ಇದಕ್ಕೆ ಕ್ರಮ ಕೈಗೊಳ್ಳಲಾಗುವುದು. ಇಲಾಖೆಯ ಸೌಲಭ್ಯಗಳನ್ನು ಒದಗಿಸಲು ಆಧಾರ್‌ ಅಗತ್ಯವಾಗಿದೆ. ಆಧಾರ್‌ ಕೊಡಿಸಿ ಸೌಲಭ್ಯ ಒದಗಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT