ಅನಿಷ್ಟ ಸಂಪ್ರದಾಯ ಟೀಕಿಸಿದ್ದ ಚೌಡಯ್ಯ: ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಕಡಿ

ಕೊಪ್ಪಳ: ‘ಸಮಾಜದಲ್ಲಿ ಮನೆಮಾಡಿದ್ದ ಅನಿಷ್ಟ ಸಂಪ್ರದಾಯಗಳನ್ನು ನಿಷ್ಠುರವಾಗಿ ಟೀಕಿಸಿದ್ದು ಶರಣ ಅಂಬಿಗರ ಚೌಡಯ್ಯನವರು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಸಾಹಿತ್ಯ ಭವನದಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ವಚನ ಸಾಹಿತ್ಯ ಸಮಾಜಕ್ಕೆ ಅಪೂರ್ವ ಕೊಡುಗೆಯಾಗಿದೆ. 12ನೇ ಶತಮಾನವು ಕ್ರಾಂತಿಯ ಯುಗವಾಗಿದ್ದು, ಇಂದಿಗೂ ಸಮಾಜದಲ್ಲಿ ಅದರ ಆದರ್ಶ ಬಿಂಬಿಸುವ ಕಲ್ಯಾಣ ಕ್ರಾಂತಿಯಾಗಿದೆ’ ಎಂದರು.
‘ಬಸವಣ್ಣನವರು ಹಾಗೂ ಇತರ ಶರಣರೆಲ್ಲರೂ ಸೇರಿ ಅಂದು ಸಮಾನತೆಯನ್ನು ಸಾರಿ ಅದರ ಬೀಜ ಬಿತ್ತಿದರು. ಜಾತಿ, ವರ್ಣ, ಕುಲಗಳು ಯಾವುದು ಮುಖ್ಯವಲ್ಲ, ಬದಲಿಗೆ ವ್ಯಕ್ತಿ ಮುಖ್ಯವಾಗಿದ್ದಾನೆ ಎನ್ನುವುದನ್ನು 12ನೇ ಶತಮಾನದಲ್ಲಿ ಅನೇಕ ಶರಣರು ತಮ್ಮ ವಚನಗಳು ಮೂಲಕ ಸಾರಿದರು. ಅಂತಹ ವಚನಕಾರರಲ್ಲಿ ನ್ಯಾಯ, ನಿಷ್ಠುರಿಯಾದಂತಹ, ದಿಟ್ಟ ನಿಲುವು ಅಂಬಿಗರ ಚೌಡಯ್ಯ’ ಎಂದರು.
ಗದಗ ಸನ್ಮಾರ್ಗ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ಉಪನ್ಯಾಸಕ ಹೇಮಂತ ದಳವಾಯಿ ಉಪನ್ಯಾಸ ನೀಡಿ ‘ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳಬಹುದಾದ ಸರಳ ಪದಗಳಿಂದ ವಚನಗಳನ್ನು ರಚಿಸಿ, ದೇವವಾಣಿಯನ್ನು ಜನವಾಣಿಯನ್ನಾಗಿಸಿದ್ದು ಶರಣರ ಸಾಹಿತ್ಯ. ಮನುಕುಲದ ಕಲ್ಯಾಣಕ್ಕಾಗಿ ದುಡಿಯುವವರೇ ಮಹಾತ್ಮರು. ಜಗತ್ತಿನ ಎಲ್ಲ ಸಮುದಾಯದ ಕಾಯಕ ಪವಿತ್ರವಾದುದು ಎಂದು ಸಾರಿ, ಸಮಾಜದ ಅಂಕುಡೊಂಕುಗಳನ್ನು ವಚನಗಳಿಂದ ಜಾಗೃತಿ ಮೂಡಿಸಿದ್ದಾರೆ’ ಎಂದರು.
ನಗರಸಭೆ ಸದಸ್ಯ ವಿರೂಪಾಕ್ಷಪ್ಪ ಮೊರನಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ಸಮಾಜದ ಮುಖಂಡರಾದ ಯಮನಪ್ಪ ಕಬ್ಬೇರ, ಸೋಮಣ್ಣ ಬಾರಕೇರ, ಶಂಕರಗೌಡ ಮಾಲಿಪಾಟೀಲ್, ಯಂಕಪ್ಪ ಬಾರಕೇರ, ರಮೇಶ ಕಬ್ಬೇರ, ಹುಲಗಪ್ಪ ಬಾರಕೇರ, ರಾಜು ಕಲೆಗಾರ, ಗಂಗಾಧರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ನಿವೃತ್ತ ಪ್ರಾಚಾರ್ಯರಾದ ಸಿ.ವಿ. ಜಡಿಯವರ್ ವಂದಿಸಿದರು.
ನಿಜಶರಣ ಅಂಬಿಗರ ಚೌಡಯ್ಯ ಅವರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ನಗರದ ಸಿರಸಪ್ಪಯ್ಯನ ಮಠದಿಂದ ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ ಮೂಲಕ ಸಾಹಿತ್ಯ ಭವನದವರೆಗೆ ಸಾಗಿ ಬಂದಿತು. ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ವಿವಿಧ ಕಲಾ ತಂಡಗಳು ಪಾಲ್ಗೊಂಡಿದ್ದವು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.