ಗುರುವಾರ , ಜುಲೈ 29, 2021
24 °C
ಕೇಂದ್ರ ಸರ್ಕಾರದ ಪ್ರತ್ಯೇಕ ಸಹಕಾರ ಇಲಾಖೆಯಿಂದ ಅನುಕೂಲ: ರಮೇಶ ವೈದ್ಯ

‘ರೈತರ ಸಬಲೀಕರಣಕ್ಕೆ ಸಹಕಾರ ಸಂಘ ಅವಶ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಕೃಷಿ ಇಲಾಖೆ ಅಧೀನದಲ್ಲಿ ಇದ್ದ ಸಹಕಾರ ಇಲಾಖೆಯನ್ನು ಪ್ರತ್ಯೇಕ ಸಹಕಾರ-ಸಮೃದ್ಧಿ ಇಲಾಖೆ ಎಂದು ಘೋಷಣೆ ಮಾಡಿರುವುದು ಶ್ಲಾಘನೀಯ ಎಂದು ಸಹಕಾರಿ ಭಾರತಿ ಅಧ್ಯಕ್ಷ ರಮೇಶ ವೈದ್ಯ ಹುಲಿಗಿ ತಿಳಿಸಿದರು.

ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತ್ಯೇಕ ಸಹಕಾರ ಇಲಾಖೆಯನ್ನು ಆರಂಭಿಸಬೇಕು ಎಂದು ನಾಲ್ಕು ದಶಕಗಳ ನಮ್ಮ ಬೇಡಿಕೆಗೆ ಈಗ ಮನ್ನಣೆ ದೊರೆತಿದೆ. ಈ ಕುರಿತು ಸಹಕಾರ ಭಾರತಿಯ ನಿರಂತರ ಪ್ರಯತ್ನಕ್ಕೆ ಯಶಸ್ಸು ಲಭಿಸಿದೆ ಎಂದು ಅವರು ತಿಳಿಸಿದರು.

ಸಹಕಾರ ಸಂಘಕ್ಕೆ 100 ವರ್ಷಗಳ ಇತಿಹಾಸವಿದೆ. ಗಾಂಧೀಜಿಯವರು ಸಹಕಾರ ತತ್ವಕ್ಕೆ ಅಪಾರ ಗೌರವ ನೀಡುತ್ತಿದ್ದರು. ದೇಶದ 8 ಲಕ್ಷ ಸಹಕಾರ ಸಂಘಗಳು, ಇದ್ದು 35 ಕೋಟಿ ಸದಸ್ಯರು ಇದ್ದಾರೆ. 3,84,000 ಬಿಲಿಯನ್ ಬಂಡವಾಳ ಇದೆ. 6.30 ಲಕ್ಷ ಗ್ರಾಮಗಳಿಗೆ ಇದರ ವ್ಯಾಪ್ತಿ ಹರಡಿದೆ. 1,255 ಬಹುರಾಜ್ಯ ಸಹಕಾರ ಸಂಸ್ಥೆಗಳು, 1,500 ಪಟ್ಟಣ ಸಹಕಾರ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. ಇದನ್ನು ಸಹಕಾರ ಭಾರತಿ ಕಾರ್ಯಕಾರಿ ಸಮಿತಿ 2 ವರ್ಷದ ಹಿಂದೆ ಸಭೆ ಸೇರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರತ್ಯೇಕ ಇಲಾಖೆ ಆರಂಭಿಸಬೇಕು ಎಂದು ಒತ್ತಾಯಿಸಿದ್ದೆವು ಎಂದರು.

ಗುಜರಾತ್‌ನಲ್ಲಿ ಸಹಕಾರ ಇಲಾಖೆ ಸಚಿವರಾಗಿ ಅಮಿತ್‌ ಶಾ ಸೇವೆ ಸಲ್ಲಿಸಿದ್ದಾರೆ. ಕೇಂದ್ರದಲ್ಲಿಯೂ ಅವರು ತಮ್ಮ ಬಳಿ ಸಹಕಾರ ಖಾತೆಯನ್ನು ಇಟ್ಟುಕೊಂಡಿರುವುದರಿಂದ ಈ ಕ್ಷೇತ್ರಕ್ಕೆ ಹೆಚ್ಚಿನ ಲಾಭ ದೊರೆಯಲಿದೆ ಎಂದು ಅವರು ತಿಳಿಸಿದರು.

ಸಹಕಾರ ಭಾರತಿ ಉತ್ತಮ ಸಂಸ್ಕಾರ, ಪಾರದರ್ಶಕ ಆಡಳಿತದ ಮೂಲಕ ಸಹಕಾರ ಸಂಘಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಉನ್ನತ ತರಬೇತಿಯನ್ನು ನೀಡಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕು ಎಂಬ ಬೇಡಿಕೆ ಕೂಡಾ ಇದೆ. ಹಾಲು ಉತ್ಪಾದನಾ ಸಂಸ್ಥೆಗಳು, ಗೊಬ್ಬರ ವಿತರಣೆಯ ಸಂಘಗಗಳು ರಾಷ್ಟ್ರದಲ್ಲಿ ಸಹಕಾರ ತತ್ವದ ಮೇಲೆ ಬಹಳ ದೊಡ್ಡ ಸಾಧನೆ ಮಾಡಿವೆ ಎಂದು ಹೇಳಿದರು.

ಕೇಂದ್ರ ಸರ್ಕಾರದಲ್ಲಿ ತನ್ನದೇ ಆದ ಸಹಕಾರ ಸಚಿವಾಲಯ ಇಲ್ಲದೇ ಇರುವುದರಿಂದ ಬಹುತೇಕ ಮಂಜೂರಾತಿಗಳು ನೆನೆಗುದಿಗೆ ಬೀಳುತ್ತಿದ್ದವು. ಸಹಕಾರ ಭಾರತಿ ನಿರಂತರ ಸಭೆ ಮಾಡಿ ನಿರ್ಣಯ ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ ನಂತರ ಈಗ ಸಹಕಾರ-ಸಮೃದ್ಧಿ ಇಲಾಖೆ ಆರಂಭವಾಗುತ್ತಿರುವುದು ಸಂತಸ ತಂದಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದು ಸಂತಸದ ವಿಚಾರ ಎಂದು ಅವರು ಹೇಳಿದರು.

ಸಹಕಾರ ಭಾರತಿ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಹ್ಯಾಟಿ, ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ ನಾಗಲಿಂಗಪ್ಪ ಪತ್ತಾರ, ಸೌಹಾರ್ದ ಸಹಕಾರಿ ನಿರ್ದೇಶಕ ಜಿ.ಶ್ರೀಧರ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.