ಗುರುವಾರ , ಜೂನ್ 24, 2021
27 °C
ಗವಿಮಠದಲ್ಲಿ 100 ಹಾಸಿಗೆಯ ಆರೈಕೆ ಕೇಂದ್ರ: ಸಂಸದ ಸಂಗಣ್ಣ ಕರಡಿ ಭೇಟಿ

ಗವಿಸಿದ್ಧನ ಸನ್ನಿಧಿ: ಆಶಾಕಿರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಗವಿಮಠದ ವೃದ್ಧಾಶ್ರಮದಲ್ಲಿ ಆರಂಭವಾಗಲಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ಸಂಸದ ಸಂಗಣ್ಣ ಕರಡಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಜಿಲ್ಲಾಡಳಿತ ಮತ್ತು ಗವಿಮಠದ ಸಹಯೋಗದಲ್ಲಿ ತಾತ್ಕಾಲಿಕವಾಗಿ 100 ಹಾಸಿಗೆ ಸಾಮರ್ಥ್ಯದ ಕೋವಿಡ್‌ ಆರೈಕೆ ಕೇಂದ್ರ ಆರಂಭವಾಗಲಿದೆ. ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಇದು ಕಾರ್ಯ ನಿರ್ವಹಿಸಲಿದೆ. ಆಮ್ಲಜನಕ ಹೊಂದಿದ ವ್ಯವಸ್ಥಿತ ಹಾಸಿಗೆ, ಆಹ್ಲಾದಕರ ಪರಿಸರ ಸೋಂಕಿತರ ರೋಗ ನಿರ್ಮೂಲನೆಗೆ ಸಹಕಾರಿ ಆಗಲಿದೆ’ ಎಂದು ಸಂಸದರು ಭರವಸೆ ವ್ಯಕ್ತಪಡಿಸಿದರು.

ಈಚೆಗೆ ಶ್ರೀಮಠಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಮತ್ತು ಸಂಸದ ಸಂಗಣ್ಣ ಕರಡಿ ಭೇಟಿ ನೀಡಿದಾಗ ಮಠದ ಕಟ್ಟಡಗಳನ್ನು ಬಳಸಿಕೊಳ್ಳುವಂತೆ ಸ್ವಾಮೀಜಿ ಸಲಹೆ ನೀಡಿದ್ದರು.

ಸ್ವಾಮೀಜಿ ಅವರ ಸಾಮಾಜಿಕ ಕಾಳಜಿಗೆ ಸ್ಪಂದಿಸಿದ ಸರ್ಕಾರ ಒಂದು ವಾರದಲ್ಲಿಯೇ ಆರೈಕೆ ಕೇಂದ್ರ ನಿರ್ಮಾಣ ಮಾಡಿ, ಸಾರ್ವಜನಿಕರ ಸೇವೆಗೆ ಅಣಿಗೊಳಿಸಿದೆ.

ಶುದ್ಧ ಕುಡಿಯುವ ನೀರು, ವಿದ್ಯುತ್, ಮಠದ ವತಿಯಿಂದ ಪ್ರಸಾದದ ವ್ಯವ್ಯಸ್ಥೆ ಮಾಡಲಾಗುತ್ತಿದೆ. ಮಠದ ಜೀವಪರ ಕಾಳಜಿಯನ್ನು ಶ್ಲಾಘಿಸಿರುವ ಸಂಸದರು. ವೈದ್ಯರು ರೋಗಿಗಳಿಗೆ ಸೇವಾ ಮನೋಭಾವದಿಂದ ಉಚಿತ ಚಿಕಿತ್ಸೆ ನೀಡುವ ಮೂಲಕ ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ನಾಗರಿಕರು ಸಹಕಾರ ನೀಡಬೇಕು. ಸರ್ಕಾರದೊಂದಿಗೆ ಕೈಜೋಡಿಸಿ ಮಾರ್ಗಸೂಚಿ ಪಾಲಿಸಬೇಕು. ಅನವಶ್ಯಕವಾಗಿ ಸಂಚರಿಸದೇ ಮನೆಯಲ್ಲಿಯೇ ಇರಬೇಕು. ಮಾಸ್ಕ್‌, ಸ್ಯಾನಿಟೈಸರ್‌ ಬಳಸಬೇಕು. ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಸುನೀಲ್ ಹೆಸರೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ ಮೈನಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಟಿ.ಲಿಂಗರಾಜು, ನಿರ್ಮಿತ ಕೇಂದ್ರದ ಎಂಜಿನಿಯರ್ ಶಶಿಧರ್ ಪಾಟೀಲ ಹಾಗೂ ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಸವರಾಜ ಕುಂಬಾರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.