ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಆರೈಕೆ ಕೇಂದ್ರ: ಕಾಳಜಿ ಮಾಡುವವರು ಯಾರೂ ಇಲ್ಲ

ನಗರದಿಂದ ದೂರ ಇರುವ ಹಾಸ್ಟೆಲ್‌ಗಳಲ್ಲಿ ಕೋವಿಡ್ ಕೇಂದ್ರ; ಕಾಡುವ ಒಂಟಿತನ
Last Updated 31 ಮೇ 2021, 21:30 IST
ಅಕ್ಷರ ಗಾತ್ರ

ಕೊಪ್ಪಳ: ‘ಕೋವಿಡ್‌ ಆರೈಕೆ ಕೇಂದ್ರಕ್ಕೆ ಬಂದು ಐದು ದಿನ ಆಯಿತು. ಇಲ್ಲಿ ಕಾಳಜಿ ಮಾಡುವವರು ಯಾರೂ ಇಲ್ಲ. ಕುಡಿಯಲು ನೀರು ಸಹ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ನಮ್ಮನ್ನು ಕರೆದುಕೊಂಡು ಬಂದು ಇಲ್ಲಿ ಕೂಡಿಹಾಕಲಾಗಿದೆ' ಎಂದು ಕುಕನೂರು ತಾಲ್ಲೂಕಿನ ಗುದ್ನೇಶ್ವರ ಕ್ಯಾಂಪಿನ ಕೋವಿಡ್‌ ಆರೈಕೆ ಕೇಂದ್ರದಲ್ಲಿ ದಾಖಲಾಗಿರುವ ಚಂದ್ರಪ್ಪ ಅಸಮಾಧಾನದಿಂದಲೇ ಹೇಳಿದರು.

‘ಇಲ್ಲಿ ಕಾಳಜಿ ಮಾಡುವವರು ಇಲ್ಲ. ಆರೈಕೆಯ ಕೊರತೆಯ ಮಧ್ಯೆಯೇ ಬೇಗ ಗುಣಮುಖಳಾಗುವ ಆಶಾಭಾವ ಹೊಂದಿದ್ದೇನೆ’ ಎಂದರು ಗಂಗಾವತಿ ತಾಲ್ಲೂಕಿನ ಆನೆಗೊಂದಿ ಆರೈಕೆ ಕೇಂದ್ರದಲ್ಲಿದ್ದ ಮಹಿಳೆ ಶಾಂತಮ್ಮ.

‘ಪ್ರಜಾವಾಣಿ’ ತಂಡ ಜಿಲ್ಲೆಯ ಹಲವು ಕೋವಿಡ್‌ ಆರೈಕೆ ಕೇಂದ್ರಗಳಿಗೆ ಭೇಟಿ ನೀಡಿದಾಗ ಅಲ್ಲಿ ‘ಆರೈಕೆ ಕೊರತೆ’ ಎದ್ದುಕಂಡಿತು.

ಕುಕನೂರು ತಾಲ್ಲೂಕಿನ ತಳಕಲ್‌ ಗ್ರಾಮದ ಲಕ್ಷ್ಮಿ ಎಂಬುವರು ತನ್ನ ಎರಡು ವರ್ಷದ ಕಂದಮ್ಮನೊಂದಿಗೆ ಕೊಪ್ಪಳ ತಾಲ್ಲೂಕಿನ ತಣಕನಕಲ್‌ ಕೋವಿಡ್‌ ಆರೈಕೆ ಕೇಂದ್ರದಲ್ಲಿ ದಾಖಲಾಗಿದ್ದಾರೆ. ನಾಲ್ಕಾರು ಮಹಿಳೆಯರು ಮಾತ್ರ ಇಲ್ಲಿ ಇದ್ದಾರೆ. ‘ಮಗು ಆಗಾಗ ಬಿಸ್ಕೆಟ್‌, ಬ್ರೆಡ್‌, ತಿಂಡಿ ಕೊಡು ಎಂದು ಹಟ ಮಾಡುತ್ತಿದೆ. ಆರೈಕೆ ಕೇಂದ್ರ ಜನವಸತಿಯಿಂದ ದೂರ ಇರುವುದರಿಂದ ತಂದು ಕೊಡುವವರು ಯಾರು’ ಎಂದು ಆಕೆ ನೋವು ತೋಡಿಕೊಂಡರು.

‘ಆರೋಗ್ಯ ಕಾರ್ಯಕರ್ತೆಯರು ವಾಹನದಲ್ಲಿ ನಮ್ಮನ್ನು ಇಲ್ಲಿಗೆ ತಂದು ಬಿಟ್ಟು ಹೋಗಿದ್ದಾರೆ. ಕೂಲಿ ಮಾಡಿ ಜೀವನ ಸಾಗಿಸುವ ಪತಿ ಒಬ್ಬಂಟಿ ಆಗಿದ್ದಾರೆ. ಅನಾಥ ಪ್ರಜ್ಞೆ ಕಾಡುತ್ತಿದೆ. ಊಟ, ಉಪಾಹಾರ ನೀಡುತ್ತಿದ್ದರೂ ಅದು ರುಚಿಸುತ್ತಿಲ್ಲ’ ಎಂದು ದೈನ್ಯದಿಂದ ಹೇಳುತ್ತಿರುವಾಗ ಅಲ್ಲಿದ್ದ ಇತರ ಸೋಂಕಿತರು ‘ಏನೂ ಆಗೋಲ್ಲ, ಧೈರ್ಯದಿಂದ ಇರು’ ಎಂದು ಸಂತೈಸಿದರು.

ಕುಕನೂರು ತಾಲ್ಲೂಕಿನ ಗುದ್ನೇಶ್ವರಮಠ ಕ್ಯಾಂಪ್‌ನ ವಸತಿ ನಿಲಯದಲ್ಲಿಯ ಆರೈಕೆ ಕೇಂದ್ರದಲ್ಲಿ ವೈದ್ಯರೇ ಇಲ್ಲ. ಶೌಚಾಲಯಗಳಲ್ಲಿ ಸ್ವಚ್ಛತೆ ಇಲ್ಲ. ಸಮಯಕ್ಕೆ ಸರಿಯಾಗಿ ನೀರು ಬರುತ್ತಿಲ್ಲ ಎಂದು ಸೋಂಕಿತರು ಹೇಳಿಕೊಂಡರು.

'ಅಲ್ಲಿ ಏನೂ ವ್ಯವಸ್ಥೆ ಇಲ್ಲ. ಸುಖಾಸುಮ್ಮನೆ ಜನರನ್ನು ಇರಿಸಿ ಮಂದಿ– ಮಕ್ಕಳಿಂದ ದೂರ ಮಾಡುತ್ತಾರೆ' ಎಂದು ಕುಷ್ಟಗಿಯ ಕೋವಿಡ್‌ ಆಸ್ಪತ್ರೆಗೆಪರೀಕ್ಷೆಗೆ ಬಂದಿದ್ದ ಲಲಿತಾ ಹರಿಹಾಯ್ದರು.

ಜಿಲ್ಲೆಯ ಒಂದು ಸಾವಿರಕ್ಕೂ ಹೆಚ್ಚು ಸೋಂಕಿತರು ಹೋಂ ಐಸೋಲೇಷನ್‌ನಲ್ಲಿದ್ದರು. ಸೋಂಕು ತಡೆಗೆ ಹೋಂ ಐಸೋಲೇಷನ್‌ ರದ್ದು ಮಾಡಿ, 159 ಕೋವಿಡ್ಆರೈಕೆ ಕೇಂದ್ರಗಳನ್ನು ತೆರೆದು ಅವರನ್ನು ಸ್ಥಳಾಂತರಿಸಲಾಗಿದೆ.

‘ಬಹುತೇಕ ಕೇಂದ್ರಗಳನ್ನು ಹಾಸ್ಟೆಲ್‌ಗಳಲ್ಲಿ ಆರಂಭಿಸಲಾಗಿದೆ. ಅವುಮೂಲಸೌಕರ್ಯದ ಕೊರತೆಯಿಂದ ಬಳಲುತ್ತಿವೆ. ಶುದ್ಧ ಕುಡಿಯುವ ನೀರು, ಬಿಸಿ–ಶುಚಿ ಮತ್ತು ರುಚಿಯಾದ ಊಟವೂ ಸೋಂಕಿತರಿಗೆ ಸಿಗುತ್ತಿಲ್ಲ’ ಎಂದು ಕುಷ್ಟಗಿ ತಾಲ್ಲೂಕಿನಹಿರೇಮನ್ನಾಪುರ ಗ್ರಾಮದ ಮುಖಂಡ ದೊಡ್ಡಯ್ಯ ದೂರಿದರು.

‘ಆರೈಕೆ ಕೇಂದ್ರಗಳನ್ನು ಸ್ಥಳೀಯ ಪಂಚಾಯಿತಿಗಳು ನಿರ್ವಹಣೆ ಮಾಡುತ್ತಿವೆ. ಪಂಚಾಯಿತಿ ಸಿಬ್ಬಂದಿ ರೋಗಿ
ಗಳ ಬಳಿ ಹೋಗಲು ಆತಂಕ ಪಡುತ್ತಾರೆ’ ಎಂದು ಕನಕಗಿರಿ ತಾಲ್ಲೂಕಿ ಹಿರೇಮ್ಯಾದನೇರಿ ಗ್ರಾಮದ ಪಿಡಿಒ ನಾಗೇಶ ಪೂಜಾರ ಅಸಹಾಯಕತೆ ವ್ಯಕ್ತಪಡಿಸಿದರು.

‘ಸ್ವಚ್ಛತೆ ಸೇರಿದಂತೆ ಸೋಂಕಿತರ ಕೋಣೆಗಳಿಗೆ ತೆರಳಿ ಸೇವೆ ಮಾಡುವಂತೆ ನಮಗೆ ಯಾರೂ ಹೇಳಿಲ್ಲ. ಹೊರಗಡೆ ಮಾತ್ರ ವ್ಯವಸ್ಥೆ ನೋಡಿಕೊಳ್ಳುತ್ತೇವೆ. ನಮಗೆ ಸೋಂಕು ಬಂದರೆ ಯಾರು ಹೊಣೆ’ ಎಂದು ತಾವರಗೇರಾ ಆರೈಕೆ ಕೇಂದ್ರದ ಸಿಬ್ಬಂದಿ ಶರಣಬಸವ ಪ್ರಶ್ನಿಸಿದರು.

ಇನ್ನು ಜಿಲ್ಲೆಯಲ್ಲಿ 59 ವೆಂಟಿಲೇಟರ್‌ಗಳು ಇದ್ದು, 14 ವೆಂಟಿಲೇಟರ್‌ಗಳು ಬಳಕೆಗೆ ಬಾರದೇ ಹಾಳಾಗಿವೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ ನಿರ್ವಹಣೆ ಮಾಡುವ ತಂತ್ರಜ್ಞರು ಇಲ್ಲ. ಸಾವಿನ ಸಂಖ್ಯೆ ಹೆಚ್ಚಲು ಇದೂ ಕಾರಣ ಎಂದು ಗಂಗಾವತಿಯ ಸಮಾಜ ಸೇವಕದೊಡ್ಡಪ್ಪ ದೇಸಾಯಿ ದೂರಿದರು.

ಪರೀಕ್ಷೆಗೂ ಪರದಾಟ

ಆರ್‌ಟಿಪಿಎಸ್ ಪರೀಕ್ಷೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾದರಿ ಸಂಗ್ರಹಿಸುತ್ತಿಲ್ಲ. ದೂರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾಗಿದೆ ಎಂದು ಗ್ರಾಮೀಣ ಜನ ಅಳಲು ತೋಡಿಕೊಂಡರು.

‘ನಿತ್ಯ ಸಾವಿರ ಜನರಿಗೆ ಕೋವಿಡ್‌ ಪರೀಕ್ಷೆ ಮಾಡುತ್ತಿದ್ದು, ಪಾಸಿಟಿವ್‌ ಬಂದವರಿಗೆ 24 ಗಂಟೆಗಳಲ್ಲಿ ವರದಿ ನೀಡುತ್ತೇವೆ. ಸಿಬ್ಬಂದಿ ಕೊರತೆಯಿಂದಾಗಿ ನೆಗಟಿವ್‌ ವರದಿ ನೀಡಿಕೆ ವಿಳಂಬವಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಡಾ.ಟಿ.ಲಿಂಗರಾಜು ಹೇಳಿದರು.

ಆಸ್ಪತ್ರೆ ಆರಂಭಿಸಲು ಒತ್ತಾಯ

‘ಕನಕಗಿರಿ ತಾಲ್ಲೂಕು ಕೇಂದ್ರವಾಗಿದ್ದರೂ ಕೋವಿಡ್‌ ಆಸ್ಪತ್ರೆ ಇಲ್ಲ. ತಕ್ಷಣವೇ ಕೋವಿಡ್‌ ಆಸ್ಪತ್ರೆ ಆರಂಭಿಸಬೇಕು’ ಎಂದು ಕನಕಗಿರಿ ತಾಲ್ಲೂಕು ಚಿಕ್ಕಮ್ಯಾದಿನೇರಿಯ ಮಹೇಶ ಪಾಟೀಲ ಒತ್ತಾಯಿಸಿದರು.

'ಕುಷ್ಟಗಿ ಮತ್ತು ಯಲಬುರ್ಗಾದ ತಾಲ್ಲೂಕು ಆಸ್ಪತ್ರೆಗಳಲ್ಲಿ ನಿತ್ಯ ಇಬ್ಬರಾದರೂ ಸಾವಿಗೀಡಾಗುತ್ತಿದ್ದಾರೆ. ಗ್ರಾಮೀಣ ಭಾಗದ ಜನರಲ್ಲಿ ಕಾಳಜಿ, ಭರವಸೆ ಮೂಡಿಸುವ ಕೆಲಸ ಆಗುತ್ತಿಲ್ಲ. ಬರೀ ಸಾವಿನ ಸುದ್ದಿ ಕೇಳುತ್ತಿರುವುದರಿಂದ ರೋಗಿಗಳಲ್ಲಿಪ್ರಾಣಭಯ ಮೂಡುತ್ತಿದೆ’ ಎಂದುಮೆಣೆದಾಳ ಗ್ರಾಮದಪ್ರಕಾಶ್ ಕಟ್ಟಿಮನಿವಿಷಾದಿಸಿದರು.

***

ತಣಕನಕಲ್‌ ಆರೈಕೆ ಕೇಂದ್ರಕ್ಕೆ ಕರೆತಂದು ಹಾಕಿದ್ದಾರೆ. ಇಲ್ಲಿಸೇವಾ ಮನೋಭಾವ, ಕಾಳಜಿಯ ಕೊರತೆ ಇದೆ. ಇದು ನನ್ನಲ್ಲಿ ಭಯ ಹೆಚ್ಚಿಸಿದೆ

-ಗುರು ಹೊಸಳ್ಳಿ, ಹೊಸಳ್ಳಿ ಗ್ರಾಮಸ್ಥ

***

ಕೋವಿಡ್‌ ಆರೈಕೆ ಕೇಂದ್ರಗಳಲ್ಲಿಸ್ವಚ್ಛತೆ, ಕುಡಿಯುವ ನೀರು ಪೂರೈಕೆ ಸೇರಿದಂತೆ ವಿವಿಧ ಕೆಲಸ ನಿರ್ವಹಿಸುತ್ತಿದ್ದೇವೆಇಲ್ಲಿ ಕೆಲಸ ಮಾಡುವಾಗ ನಮಗೂ ಆತಂಕ ಕಾಡುತ್ತದೆ. ನಮ್ಮನ್ನೂ ಕೊರೊನಾ ಸೇನಾನಿಗಳೆಂದು ಪರಿಗಣಿಸಿ ಲಸಿಕೆ ಹಾಗೂ ಸೌಲಭ್ಯ ನೀಡಬೇಕು

-ಶಿವು, ವಸತಿ ನಿಲಯದ ಕೆಲಸಗಾರ

***

ಕೋವಿಡ್‌ ಆರೈಕೆ ಕೇಂದ್ರಗ‌‌ಳ ಮೇಲುಸ್ತುವಾರಿಗೆಜಿಲ್ಲಾಮಟ್ಟದ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಊಟ, ವಸತಿ ಸೇರಿದಂತೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಅವರಿಗೆ ಸೂಚನೆ ನೀಡಲಾಗಿದೆ

-ರಘುನಂದನಮೂರ್ತಿ, ಸಿಒಒ, ಜಿಲ್ಲಾ ಪಂಚಾಯಿತಿ, ಕೊಪ್ಪಳ

***

ಅಂಕಿಅಂಶ

3

ತಾಲ್ಲೂಕು ಆಸ್ಪತ್ರೆ

3

ಸಮುದಾಯ ಆರೋಗ್ಯ ಕೇಂದ್ರ

20

ಪ್ರಾಥಮಿಕ ಆರೋಗ್ಯ ಕೇಂದ್ರ

2

ನಗರ ಆರೋಗ್ಯ ಕೇಂದ್ರ

2

ಕೋವಿಡ್‌ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT