ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ: ವ್ಯಾಪಾರಿಗಳಿಗೆ ಸಂಕಷ್ಟ ತಂದ ನಿರ್ಬಂಧ

Last Updated 10 ಜನವರಿ 2022, 5:35 IST
ಅಕ್ಷರ ಗಾತ್ರ

ಗಂಗಾವತಿ: ವಾರಾಂತ್ಯದ ಕರ್ಫ್ಯೂಗೆ ಎರಡನೆ ದಿನ ಭಾನುವಾರ ನಗರದಲ್ಲಿ ಜನ ಸಂಚಾರ ವಿರಳವಾಗಿತ್ತು. ನಗರದಲ್ಲಿ ಶನಿವಾರ ಕರ್ಫ್ಯೂಗೆ ಕೆಲ ಅಂಗಡಿಗಳು ತೆರದಿದ್ದರೇ, ಭಾನುವಾರ ಮಾತ್ರ ಶೇ 80ರಷ್ಟು ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿತ್ತು.

ಎಲ್ಲ ವೃತ್ತಗಳಲ್ಲಿ ಜನ ಸಂಚಾರ ಸಹಜವಾಗಿಯೇ ಇತ್ತು. ಕೆಲ ಯುವಕರು ಮನೆಯಲ್ಲಿರಲು ಆಗದೆ, ಬಲವಂತವಾಗಿ, ಹೊರಗಡೆ ಬಂದಂತೆ ಕಾಣುತ್ತಿತ್ತು. ಇನ್ನೂ ಶಾಲೆ ರಜೆ ಇರುವ ಕಾರಣ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುವ ದೃಶ್ಯಗಳು ಕಂಡು ಬಂದವು.

ಬೆಳಿಗ್ಗೆ 10 ರಿಂದ 1 ಗಂಟೆಯ ವರೆಗೆ ಗುಂಡಮ್ಮ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ಪರವಾಗಿಲ್ಲ ಅನ್ನುವಂತಿತ್ತು. ಮೊದಲ ದಿನ ವ್ಯಾಪಾರ ಆಗದ ಕಾರಣ ಕಿರಾಣಿ ಅಂಗಡಿ, ಹೊಟೇಲ್ ಮುಚ್ಚಲಾಗಿತ್ತು. ಇನ್ನೂ ತಳ್ಳುಗಾಡಿ ವ್ಯಾಪಾರಸ್ಥರು ವ್ಯಾಪಾರ ಮಾಡಲು ರಸ್ತೆಗೆ ಇಳಿಯಲಿಲ್ಲ‌.

ನಗರದ ಗಾಂಧಿ ವೃತ್ತ, ಮಹಾವೀರ ವೃತ್ತ, ಚನ್ನಬಸವ ಸರ್ಕಲ್, ಲತಿಫಿಯಾ ವೃತ್ತಗಳಲ್ಲಿನ ವಾಣಿಜ್ಯ ಮಳಿಗೆಗಳು ಎಲ್ಲವು ಸಂಪೂರ್ಣ ಬಂದ್ ಮಾಡಲಾಗಿತ್ತು. ಹಣ್ಣು, ಹೂವಿನ ವ್ಯಾಪಾರಿಗಳು ಅಂಗಡಿ ಮಳಿಗೆಗಳನ್ನು ತೆರೆದರೂ ಗ್ರಾಹಕರಿಲ್ಲದೆ ವ್ಯಾಪಾರ ನೀರಸವಾಗಿತ್ತು.

ಎರಡನೇ ದಿನವೂ ಸಹ ಪ್ರಯಾಣಿಕರಿಲ್ಲದೆ ದೂರದ ಮಾರ್ಗಗಳ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತ ಮಾಡಲಾಗಿತ್ತು. ಸ್ಥಳೀಯವಾಗಿ ಹೊಸಪೇಟೆ, ಕನಕಗಿರಿ, ಕಾರಟಗಿ, ಸಿಂಧನೂರ,‌ಕೊಪ್ಪಳ, ಗದಗ, ಹುಬ್ಬಳ್ಳಿ ಮಾರ್ಗಗಳ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿದರು. ಪ್ರಯಾಣಿಕರ ಕೊರತೆ ಕಂಡು ಬಂದಿತು.

ತುರ್ತು ಸೇವೆ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಲ ಆಟೋಗಳು ನಗರದಲ್ಲಿ ಸಂಚಾರ ಮಾಡಿದರೆ, ದ್ವಿಚಕ್ರ ವಾಹನಗಳು, ಕಾರುಗಳು ಸಂಚಾರ ನಡೆಸಿದರು. ಕೆಲ ಸ್ಥಳಗಳಲ್ಲಿ ಪೋಲಿಸ್ ಸಿಬ್ಬಂದಿ ವಾಹನ ಸವಾರರನ್ನು ತಡೆ ತಪಾಸಣೆ ಮಾಡಿದರು. ಕೆಲವರಿಗೆ ದಂಡ ಸಹ ಹಾಕಲಾಯಿತು.

ಎರಡನೇ‌ ದಿನವು ಸಹ ಅಂಜನಾದ್ರಿ, ಪಂಪಾಸರೋವರ, ದುರ್ಗಾದೇವಿ, ನವವೃಂದಾವನ ದೇವಸ್ಥಾನಗಳು ಬಂದ್ ಮಾಡಲಾಗಿತ್ತು. ಗ್ರಾಮೀಣ ಭಾಗದಲ್ಲಿ ಕರ್ಫ್ಯೂ ಪರಿಣಾಮ ಅಷ್ಟೇನೂ ಕಂಡು ಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT