ಗುರುವಾರ , ಸೆಪ್ಟೆಂಬರ್ 23, 2021
21 °C
ಗಂಗಾವತಿ: ಸಿಪಿಎಂ ಪಕ್ಷದ ಕಾರ್ಯಕರ್ತರಿಂದ ಪ್ರತಿಭಟನೆ; ತಪ್ಪಿತಸ್ಥರ ಬಂಧನಕ್ಕೆ ಆಗ್ರಹ

ಸಿಪಿಎಂ ಕಚೇರಿ ಮೇಲಿನ ದಾಳಿಗೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ತ್ರಿಪುರಾ ರಾಜ್ಯದ ಸಿಪಿಐ(ಎಂ) ಕಚೇರಿಗಳ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿ ನಗರದ ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಭಾರತ ಕಮೂನಿಸ್ಟ್ ಪಕ್ಷದ(ಮಾರ್ಕ್ಸ್‌ವಾದಿ) ಮುಖಂಡರು ಪ್ರತಿಭಟನೆ ನಡೆಸಿದರು.

ಸಂಘಟನೆ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಮಾತನಾಡಿ, ಪೂರ್ವ-ನಿಯೋಜಿತ ರೀತಿಯಲ್ಲಿ ಸಿಪಿಐ(ಎಂ)ನ ರಾಜ್ಯಸಮಿತಿ ಕಚೇರಿ ಸೇರಿದಂತೆ ವಿವಿಧ ಕಚೇರಿಗಳ ಮೇಲೆ ಬಿಜೆಪಿಯ ಮಂದಿ ದೊಂಬಿ, ಹಲ್ಲೆ ನಡೆಸಿದ್ದಾರೆ. ಉದಯಪುರ ಸಬ್ ಡಿವಿಜನಲ್ ಸಮಿತಿ, ಗೋಮತಿ ಜಿಲ್ಲಾ ಸಮಿತಿ, ಸೆಪಾಹಿಜಾಲ ಜಿಲ್ಲಾ ಸಮಿತಿ, ಬಿಶಾಲ್‌ಗಡ್ ಸಬ್ ಡಿವಿಜನಲ್ ಸಮಿತಿ, ಪಶ್ಚಿಮ ತ್ರಿಪುರಾ ಜಿಲ್ಲಾ ಸಮಿತಿ ಕಚೇರಿ ಸೇರಿದಂತೆ ಇತರೆ ಕಚೇರಿಗಳು ಸುಟ್ಟು ಕರಕಲಾಗಿವೆ. ಜೊತೆಗೆ ಅಗರ್ತಲಾದಲ್ಲಿನ ರಾಜ್ಯ ಸಮಿತಿ ಕಚೇರಿ ನೆಲಮಹಡಿ ಮತ್ತು ಮೊದಲನೇ ಮಹಡಿಯನ್ನು ಲೂಟಿ ಮಾಡಿ, ಎರಡು ಕಾರುಗಳನ್ನು ಸುಟ್ಟು, ತ್ರಿಪುರಾ ಜನತೆಯ ಅತ್ಯಂತ ಗೌರವಪಾತ್ರ ನೇತಾರ ದಶರಥ್ ದೇಬ್ ಅವರ ಪ್ರತಿಮೆ ಒಡೆಯಲಾಗಿದೆ ಎಂದು ದೂರಿದರು.

ಮಾಧ್ಯಮ ಪ್ರತಿನಿಧಿಗಳ ಮೇಲೆಯೂ ದಾಳಿ ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಪೋಲೀಸ್ ಇಲಾಖೆ ಇದ್ದರೂ ಹಲ್ಲೆಗಳನ್ನು ತಡೆಯಲು ಮುಂದಾಗಿಲ್ಲ. ಇದು ವ್ಯವಸ್ಥೆಗೆ ನಾಚಿಕೆಗೇಡುತನ, ಇಂತಹ ಹೇಯ ಕೃತ್ಯಗಳನ್ನು ತೀವ್ರವಾಗಿ ಖಂಡಿಸಲಾಗುತ್ತದೆ ಎಂದರು.

ಬಿಜೆಪಿ ಗ್ಯಾಂಗ್‌ಗಳು ನಡೆಸಿದ ಹಲ್ಲೆ ಮತ್ತು ದುಷ್ಕೃತ್ಯವನ್ನು ನೋಡುತ್ತಿದ್ದರೆ, ರಾಜ್ಯ ಸರ್ಕಾರವೇ ನಡೆಸಿದಂತಿದೆ. ರಾಜ್ಯದಲ್ಲಿನ ಪ್ರಮುಖ ಪ್ರತಿಪಕ್ಷದ ಚಟುವಟಿಕೆ ತಡೆಯಲು ಬಿಜೆಪಿ ಪಕ್ಷ ವಿಫಲವಾಗಿದ್ದರಿಂದ ಈ ಹಲ್ಲೆಗಳು‌ ನಡೆದಿವೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವ ಮತ್ತು ಪ್ರತಿಪಕ್ಷದ ಮೇಲೆ ನಡೆದ ದಾಳಿಯನ್ನು ಪ್ರತಿಯೊಬ್ಬರು ಖಂಡಿಸಬೇಕು. ಕೇಂದ್ರ ಸರ್ಕಾರ, ಗೃಹ ಮಂತ್ರಾಲಯ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಂಡು ಸಿಪಿಐ(ಎಂ) ಮೇಲಿನ ದಾಳಿಗಳು ತಡೆಯಬೇಕು. ಈಗಾಗಲೇ ದಾಳಿಗಳ ತಡೆಗೆ ಪ್ರಧಾನ ಮಂತ್ರಿಗಳಿಗೆ ಯೆಚುರಿಯವರು ಪತ್ರ ಬರೆದಿದ್ದು, ಈ ಹಿಂಸಾತ್ಮಕ ದಾಳಿ ನಿಲ್ಲಿಸುವಲ್ಲಿ ವಿಳಂಬ ಮಾಡದಂತೆ ಸರ್ಕಾರಕ್ಕೆ ಆಗ್ರಹಿಸಿದರು.

ಎಸ್ಎಫ್ಐ ರಾಜ್ಯ ಅಧ್ಯಕ್ಷ ಅಮರೇಶ ಕಡಗದ, ಮಂಜುನಾಥ ಡಗ್ಗಿ, ಸೋಮನಾಥ, ವಿರೇಶ, ಹುಸೇನಪ್ಪ, ನಾಗೇಶ ನಾಯ್ಕ, ಶ್ರೀನಿವಾಸ ಹೊಸಹಳ್ಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು