ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಬರದಲ್ಲೂ ಬೆಳಕಿನ ಹಬ್ಬದ ಸಂಭ್ರಮ

Published 13 ನವೆಂಬರ್ 2023, 5:57 IST
Last Updated 13 ನವೆಂಬರ್ 2023, 5:57 IST
ಅಕ್ಷರ ಗಾತ್ರ

ಕಾರಟಗಿ: ಬರದ ನಡುವೆಯೂ ಬೆಳಕಿನ ಹಬ್ಬದ ಸಂಭ್ರಮದ ಕಳೆ ಎಲ್ಲೆಡೆ ಮನೆಮಾಡಿದೆ. ಹೂವು, ಹಣ್ಣು, ಆಲಂಕಾರಿಕ ಹೂವಿನ ಗಿಡಗಳು, ಬಾಳೆಯ ಗೊನೆ, ದಿಂಡು, ಹಣತೆ ಸಹಿತ ಇತರ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು. ಬೆಲೆ ಏರಿಕೆಯ ಮಧ್ಯೆಯೂ ಪಟ್ಟಣದ ರಸ್ತೆಗಳೆಲ್ಲ ಖರೀದಿಸುವ ವಾಹನ, ಜನರಿಂದ ತುಂಬಿ ತುಳುಕಿದವು.

ಮಹಾಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ಪೂಜಿಸುವವರು ವಾರದಿಂದಲೇ ಅಂಗಡಿ, ಮನೆಗಳನ್ನು ಸ್ವಚ್ಛಗೊಳಿಸುವುದು, ಬಣ್ಣ ಹಚ್ಚಿಸುವುದುದರಲ್ಲೇ ಮಗ್ನರಾಗಿದ್ದರು. ಭಾನುವಾರ ಬೆಳಗಿನಿಂದಲೇ ಲಕ್ಷ್ಮೀ ಪೂಜೆಗೆಂದು ಖರೀದಿಯಲ್ಲಿ ನಾಗರಿಕರು, ಮಹಿಳೆಯರು ತೊಡಗಿದ್ದರು. ಪಟ್ಟಣದ ಹಳೆಯ ಬಸ್‌ ನಿಲ್ದಾಣ, ಗ್ರಾಮೀಣ ಸಂತೆ ಮೈದಾನದ ರಸ್ತೆ, ವಿವಿಧ ಗ್ರಾಮಗಳ ಸಂಪರ್ಕದ ಕೊಂಡಿಯಾಗಿರುವ ಕನಕದಾಸ ವೃತ್ತದಲ್ಲಿ ಜನಜಂಗುಳಿಯಿತ್ತು.

ಥರಾವರಿ ಹಣ್ಣು, ಹೂವು, ಹಣತೆ, ಆಲಂಕಾರಿಕ ದೀಪಗಳು, ಆಕಾಶಬುಟ್ಟಿ ಇವೆಲ್ಲದರ ಮಧ್ಯೆ ಬಾಣಗಳ ಖರೀದಿಯ ಭರಾಟೆ ಜೋರಾಗಿತ್ತು. ಬೆಲೆಯನ್ನೂ ಲೆಕ್ಕಿಸದೇ ಸಹಜವೆನ್ನುವಂತೆ ಚೌಕಾಸಿ ಮಾಡುವುದು, ಕೊನೆಗೆ ಖರೀದಿಸುವುದು ಎಲ್ಲೆಡೆ ನಡೆದ ಪ್ರಕ್ರಿಯೆಯಾಗಿತ್ತು.

ಬೆಲೆ ಏರಿಕೆಯಾದರೆ ಸಾಂಪ್ರದಾಯಕ ಹಬ್ಬದ ಆಚರಣೆ ಬಿಡಲಾಗುವುದಿಲ್ಲ. ಹಬ್ಬದ ಸಂಭ್ರಮಕ್ಕೆ ಹಣ, ಶ್ರಮ ಲೆಕ್ಕಿಸದೇ ಬೇಕಾದ ಎಲ್ಲ ವಸ್ತುಗಳನ್ನು ಖರೀದಿಸುತ್ತಿದ್ದೇವೆ ಎಂದು ಬೂದಗುಂಪಾದ ಪರಸಪ್ಪ ಪ್ರತಿಕ್ರಿಯಿಸಿದರು.

ರಸ್ತೆ ಬದಿಗಳಲ್ಲಿ ರಾಶಿಗಟ್ಟಲೆ ಹಾಕಿದ್ದ ತರಹೇವಾರಿ ವಿನ್ಯಾಸದ ಹಣತೆಗಳನ್ನು ಗ್ರಾಹಕರು ಖರೀದಿಸಿದರು. ಚೆಂಡು ಹೂವುಗಳ ರಾಶಿಯೇ ಆಕರ್ಷಕವಾಗಿತ್ತು. ಕಟ್ಟಿದ ಹಾಗೂ ಬಿಡಿಬಿಡಿಯಾದ ಹೂವು ಖರೀದಿಸುವುದು ಸಾಮಾನ್ಯವಾಗಿತ್ತು. ಮಲ್ಲಿಗೆ, ಕನಕಾಂಬರಿ, ಸೇವಂತಿಗೆ ಒಂದು ಮೊಳಕ್ಕೆ ₹50ರ ದರದಲ್ಲಿದ್ದರೂ ಮಾರಾಟ ಜೋರಾಗಿತ್ತು. ವರಮಹಾಲಕ್ಷ್ಮಿ ಮತ್ತು ದಸರಾ ಹಬ್ಬಗಳ ಕಳೆ ಮೀರಿಸುವಂತೆ ದೀಪಾವಳಿಯ ವ್ಯಾಪಾರ ನಡೆಯುತ್ತಿದೆ ಎಂದು ವ್ಯಾಪಾರಿ ಪರಶುರಾಮ ಹೇಳಿದರು.

ಭಾನುವಾರದ ಮಹಾಲಕ್ಷ್ಮೀ ಪೂಜೆಯೊಂದಿಗೆ ದೀಪಾವಳಿ ಆರಂಭವಾಗುವುದು. ನಾಲ್ಕು ದಿನಗಳವರೆಗೆ ದಿನದ ಎರಡು ಸಮಯ ಪೂಜೆ, ಲಕ್ಷ್ಮೀಯನ್ನು ಸುರಕ್ಷತೆಯನ್ನು ಕಾಪಾಡುವುದು ಅನಿವಾರ್ಯ ಎಂದು ವರ್ತಕ ರಾಜಶೇಖರ ಸಿರಿಗೇರಿ ಹೇಳಿದರು.

ಪಟಾಕಿಗಳ ಬಗ್ಗೆ ಪುರಸಭೆ, ಜೂಜಾಟ, ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಜನರನ್ನು ಜಾಗೃತಿಗೊಳಿಸಲು ಪೊಲೀಸ್‌ ಇಲಾಖೆ ಧ್ವನಿವರ್ದಕದಲ್ಲಿ ಎಚ್ಚರಿಕೆಯ ಸೂಚನೆ ಬಿತ್ತರಿಸಿದರು. ಲಕ್ಷ್ಮೀಯನ್ನು ಕೂಡಿಸಿದವರು ಪೂಜೆ ಬಳಿಕ ಮಹಿಳೆಯರಿಗೆ, ಹಣ್ಣು, ಎಲೆ, ಅಡಿಕೆ, ಅರಿಸಿನ–ಕುಂಕುಮದ ವಿನಿಮಯ ನಡೆಯಿತು.

ಕಾರಟಗಿಯಲ್ಲಿ ದೀಪಾವಳಿ ಹಬ್ಬದ ನಿಮಿತ್ತ ವಿವಿಧೆಡೆ ಜನರು ಖರೀದಿಯ ಭರಾಟೆಯಲ್ಲಿ ನಿರತರಾಗಿರುವುದು ಭಾನುವಾರ ಕಂಡುಬಂತು
ಕಾರಟಗಿಯಲ್ಲಿ ದೀಪಾವಳಿ ಹಬ್ಬದ ನಿಮಿತ್ತ ವಿವಿಧೆಡೆ ಜನರು ಖರೀದಿಯ ಭರಾಟೆಯಲ್ಲಿ ನಿರತರಾಗಿರುವುದು ಭಾನುವಾರ ಕಂಡುಬಂತು
ಕಾರಟಗಿಯಲ್ಲಿ ದೀಪಾವಳಿ ಹಬ್ಬದ ನಿಮಿತ್ತ ವಿವಿಧೆಡೆ ಜನರು ಖರೀದಿಯ ಭರಾಟೆಯಲ್ಲಿ ನಿರತರಾಗಿರುವುದು ಭಾನುವಾರ ಕಂಡುಬಂತು
ಕಾರಟಗಿಯಲ್ಲಿ ದೀಪಾವಳಿ ಹಬ್ಬದ ನಿಮಿತ್ತ ವಿವಿಧೆಡೆ ಜನರು ಖರೀದಿಯ ಭರಾಟೆಯಲ್ಲಿ ನಿರತರಾಗಿರುವುದು ಭಾನುವಾರ ಕಂಡುಬಂತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT