ನದಾಫ್-ಪಿಂಜಾರ್ ನಿಗಮ ಮಂಡಳಿ ರಚನೆಗೆ ಮನವಿ

ಕೊಪ್ಪಳ: ನದಾಫ್, ಪಿಂಜಾರ್ ಸಮುದಾಯದ ಅಭಿವೃದ್ದಿಗಾಗಿ ನಿಗಮ ಮಂಡಳಿ ರಚನೆ ಮಾಡಬೇಕು ಎಂದು ಆಗ್ರಹಿಸಿ ಸಮಾಜದ ಮುಖಂಡರು ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ವಾಸಿಸುವ ನದಾಫ್/ಪಿಂಜಾರ ಜನಾಂಗವು ಶೋಷಿತ ಹಾಗೂ ಕಡು ಬಡತನದ ನೆರಳಲ್ಲಿ ಕಷ್ಟಕರ ಜೀವನ ನಡೆಸುತ್ತಿರುವ ಅತಿ ಹಿಂದುಳಿದ ಜನಾಂಗವಾಗಿದ್ದೇವೆ. ಬಡತನದ ಸರಳತೆಯಲ್ಲಿ ಎಲ್ಲ ವರ್ಗದ ಜನತೆಯೊಂದಿಗೆ ಅರಿತು-ಬೆರೆತು ಜೀವನ ನೆಡೆಸುತ್ತಿರುವ ಈ ಜನಾಂಗ ಕೋಮು ಸೌಹಾರ್ದದ ಸಂಕೇತವಾಗಿದೆ ಎಂದು ಮುಖಂಡರು ಹೇಳಿದರು.
'ನಮ್ಮ ಜನಾಂಗ ನಗರ ಹಾಗೂ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದು ನಮ್ಮ ಮೂಲ ವೃತ್ತಿ ಗಾದಿ, ಹಗ್ಗ, ಕಣಿ ತಯಾರಿಕೆ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೊಸ, ಹೊಸ ತಾಂತ್ರಿಕತೆಯಿಂದ ನಮ್ಮ ವಸ್ತುಗಳಿಗೆ ಬೇಡಿಕೆ ಇಲ್ಲದಂತಾಗಿ ಕಸಬು ಸಂಪೂರ್ಣ ನಿಂತು ಹೋಗಿದೆ. ಹೀಗಾಗಿ ದುಡಿಮೆಗಾಗಿ ಗೌಂಡಿ, ಕೂಲಿ ಕೆಲಸ, ಬೀದಿಗಳಲ್ಲಿ ಹಣ್ಣು, ತರಕಾರಿ ವ್ಯಾಪಾರ, ವಾಹನ ದುರಸ್ತಿಯಂತಹ ಸಣ್ಣ ಪುಟ್ಟ ಕೆಲಸದಲ್ಲಿಯೇ ತೊಡಗಿದ್ದೇವೆ' ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ನಮ್ಮ ಸಮಾಜ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದೆ. ರಾಜ್ಯದಲ್ಲಿ ಸುಮಾರು 25 ರಿಂದ 30 ಲಕ್ಷ ಜನಸಂಖ್ಯೆ ಇದ್ದು ಇದರಲ್ಲಿ ಶೇ90 ಕ್ಕೂ ಅಧಿಕ ಬಡವರಿದ್ದು, ಮಕ್ಕಳಿಗೆ ಶಿಕ್ಷಣ ಕೊಡಿಸುವ ಆರ್ಥಿಕ ಶಕ್ತಿ ಇಲ್ಲದೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೋರಾಟ ನಡೆಸುವ ಶಕ್ತಿ ಇಲ್ಲವಾಗಿದೆ. ಈಗಾಗಲೇ ಎರಡು ಸಾರಿ ಮುಖ್ಯಮಂತ್ರಿಗಳನ್ನು ನೇರವಾಗಿ ಭೇಟಿ ಮಾಡಿ ನಮ್ಮ ಅಹವಾಲು ಸಲ್ಲಿಸಿದ್ದೇವೆ ಎಂದು ಮುಖಂಡರು ವಿವರಿಸಿದರು.
ಸಮಾಜದ ಮುಖಂಡರಾದ ಶಹಾಬುದ್ದೀನ್ಸಾಬ್ ನೂರಭಾಷಾ, ಜಿಲ್ಲಾ ಘಟಕದ ಅಧ್ಯಕ್ಷ ಕಾಶೀಂ ಅಲಿ ಮುದ್ದಾಬಳ್ಳಿ, ಅಲ್ಲಾಸಾಬ್ ಗೊಂದಿಹೊಸಳ್ಳಿ, ಹೊನ್ನೂರಸಾಬ್ ಭೈರಾಪುರ, ಯಾಸೀನಸಾಬ್ ಗಂಗಾವತಿ, ಜಾಕೀರ್ ಹುಸೇನ್ ತಳಕಲ್, ಸಲೀಂಸಾಬ್ ಭಾಗ್ಯನಗರ, ಕಾಶೀಂಸಾಬ್ ಸಂಕನೂರ, ಷೇಕ್‌ಷಾವಲಿ ಗಂಗಾವತಿ, ಮಾಬುಸಾಬ ಬಿಕನಳ್ಳಿ, ಮುಸ್ತಫಾ ಕುದರಿಮೋತಿ ಇದ್ದರು.
ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿಗೆ ಸಲ್ಲಸಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.