ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಕನೂರು: ಲೋಕಸಭಾ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Published 13 ಮಾರ್ಚ್ 2024, 14:35 IST
Last Updated 13 ಮಾರ್ಚ್ 2024, 14:35 IST
ಅಕ್ಷರ ಗಾತ್ರ

ಕುಕನೂರು: ಇಟಗಿ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಇಟಗಿ ಹೋಬಳಿ ಹೋರಾಟ ಸಮಿತಿ ನೇತೃತ್ವದಲ್ಲಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ಬಸವರಾಜ ಎಂ.ಹಳ್ಳಿ,‘ಇಟಗಿ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಿಸಬೇಕು. ಇಲ್ಲದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕರಿಸಲಾಗುವುದು’ ಎಂದು ಎಚ್ಚರಿಸಿದರು.

ಇಟಗಿ ಗ್ರಾಮ ಹೋಬಳಿ ಕೇಂದ್ರಕ್ಕೆ ಬೇಕಾದ ಎಲ್ಲ ಮೂಲ ಸೌಕರ್ಯಗಳನ್ನು ಹೊಂದಿದೆ. ಹೋಬಳಿ ಕೇಂದ್ರ ಮಾಡಬೇಕು ಎಂದು ಒತ್ತಾಯಿಸಿ ಆರು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಸ್ಪಂದಿಸಿಲ್ಲ. ಶಾಸಕ ಬಸವರಾಜ ರಾಯರಡ್ಡಿ, ತಹಶೀಲ್ದಾರ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ತಹಶೀಲ್ದಾರ್ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮತ್ತು ರಸ್ತೆಯಲ್ಲಿ ಸಂಚಾರ ತಡೆ ಚಳವಳಿ ನಡೆಸಲಾಗುವುದು ಎಂದು ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ಬಸ್ ನಿಲ್ದಾಣ, ವೀರಭದ್ರಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಘೋಷಣೆಗಳನ್ನು ಕೂಗಿದರು. ಇಟಗಿ, ಮಂಡಲಗೇರಿ, ಮನ್ನಾಪುರ, ಬನ್ನಿಕೊಪ್ಪ, ಯರೇಹಂಚಿನಾಳ, ಚಿಕೇನಕೊಪ್ಪ, ನಿಂಗಾಪುರ ಗ್ರಾಮದ ಮುಖಂಡರು ಟ್ರ್ಯಾಕ್ಟರ್‌ಗಳಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮನವಿ ಸ್ವೀಕರಿಸಿ ಮಾತನಾಡಿದ ಗ್ರೇಡ್-2 ತಹಶೀಲ್ದಾರ್ ಮುರುಳಿಧರ್ ಕುಲಕರ್ಣಿ,‘ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಕಚೇರಿಗೆ ಕಳುಹಿಸಲಾಗುವುದು’ ಎಂದು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉಪಾಧ್ಯಕ್ಷ ಅಂದಪ್ಪ ಹುರುಳಿ, ಇಟಗಿ ಹೋಬಳಿ ಕೇಂದ್ರ ಹೋರಾಟ ಸಮಿತಿ ಅಧ್ಯಕ್ಷ ಬಸನಗೌಡ್ರ ಪೊಲೀಸ್ ಪಾಟೀಲ, ಪ್ರಧಾನ ಕಾರ್ಯದರ್ಶಿ ವಜೀರ್ ಸಾಬ್ ತಳಕಲ್ಲ, ಗೌರವಾಧ್ಯಕ್ಷ ಶಿವಪ್ಪ ಗುಳಗಣ್ಣವರ್, ಮಹಾದೇವಪ್ಪ ಹಳ್ಯಾಳ, ಉಮೇಶ ವೀರಾಪುರ, ಮರ್ತುಜಸಾಬ್ ತಳಕಲ್ಲ, ವೀರಣ್ಣ ಸಜ್ಜನ್, ಗವಿಸಿದ್ದಪ್ಪ ಗುಳಗಣ್ಣವರ್, ಗವಿಸಿದ್ದಪ್ಪ ಮುದ್ದಾಬಳ್ಳಿ, ರಾಮು ಕೌದಿ ಹಾಗೂ ಕಳಕಪ್ಪ ಕ್ಯಾದಗುಂಪಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT