ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: ರಾಜ್ಯ ಹೆದ್ದಾರಿ ದುರಸ್ತಿಗೆ ಆಗ್ರಹ

ರಸ್ತೆ ಅಭಿವೃದ್ಧಿ ಹೆಸರಲ್ಲಿ ಕೋಟ್ಯಂತರ ಹಣ ಲೂಟಿ; ಆರೋಪ
Last Updated 10 ಸೆಪ್ಟೆಂಬರ್ 2021, 5:42 IST
ಅಕ್ಷರ ಗಾತ್ರ

ಕುಷ್ಟಗಿ: ತಾಲ್ಲೂಕಿನ ವಿವಿಧ ರಸ್ತೆ ನಿರ್ವಹಣೆಯಲ್ಲಿ ಕಳಪೆ ಕಾಮಗಾರಿ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದವು.

ಬಸವೇಶ್ವರ ವೃತ್ತದ ಬಳಿ ನ್ಯಾಯಾಲಯದ ಮುಂದಿನ ರಾಜ್ಯ ಹೆದ್ದಾರಿಯಲ್ಲಿ ಬೃಹತ್‌ ಗುಂಡಿ ನಿರ್ಮಾಣವಾಗಿ ನೀರು ನಿಂತಿರುವ ಸ್ಥಳದಲ್ಲಿ ಇಲಾಖೆಯ ಎಂಜಿನಿಯರ್‌ಗಳ ವಿರುದ್ಧ ಪ್ರತಿಭಟನಾರ್ಥವಾಗಿ ಸಸಿಗಳನ್ನು ನಾಟಿ ಮಾಡಿದರು.

ಹೈದರಾಬಾದ್‌ ಕರ್ನಾಟಕ ಯುವಶಕ್ತಿ, ರಾಜ್ಯ ರೈತ ಸಂಘ ಮತ್ತಿತರೆ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಘೋಷಣೆ ನಂತರ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗೆ ಪ್ರತಿಭಟನಾ ಪತ್ರ ಸಲ್ಲಿಸಿದರು.

ಪಟ್ಟಣದ ವ್ಯಾಪ್ತಿಯಲ್ಲಿ ಮತ್ತು ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿಗಳು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುತ್ತಿದ್ದು ಪ್ರತಿವರ್ಷ ಕೋಟಿಗಟ್ಟಲೇ ಹಣ ಖರ್ಚಾಗುತ್ತಿದೆ. ಆದರೆ ರಸ್ತೆಗಳ ಸ್ಥಿತಿ ಮಾತ್ರ ಬದಲಾಗದೆ ಕಾಗದದಲ್ಲೇ ಪ್ರಗತಿ ಹೊಂದುತ್ತಿವೆ. ಪಟ್ಟಣದಲ್ಲಿನ ರಸ್ತೆಗಳ ನಿರ್ವಹಣೆಗೆ ಪುರಸಭೆಗೆ ಹಸ್ತಾಂತರಿಸುವಂತೆ ಸರ್ಕಾರ ಸೂಚನೆ ನೀಡಿದ್ದರೂ ಅಭಿವೃದ್ಧಿ ಹೆಸರಿನಲ್ಲಿ ಹಣ ಕೊಳ್ಳೆ ಹೊಡೆಯುವ ದುರುದ್ದೇಶದಿಂದ ಇಲಾಖೆಯಲ್ಲಿಯೇ ಉಳಿಸಿಕೊಳ್ಳಲಾಗಿದೆ ಎಂದು ದೂರಿದರು.

ಕುಷ್ಟಗಿ ಪಟ್ಟದಕಲ್‌, ಸಿಂಧನೂರು ಹೆಮ್ಮಡಗಾ, ಚಿಕ್ಕಹೆಸರೂರು ಮುಂಡರಗಿ ಮತ್ತಿತರೆ ರಸ್ತೆಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಅದರೆ ಹಣ ಖರ್ಚಾಗುವುದು ಮಾತ್ರ ತಪ್ಪಿಲ್ಲ. ಶಾಖಾಪುರ, ಯಲಬುರ್ತಿ, ನೆರೆಬೆಂಚಿ ಗ್ರಾಮಗಳಿಗೆ ಸಂಚರಿಸುವ ವಾಹನಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. 6 ಕಿಮೀ ರಸ್ತೆ ಅಭಿವೃದ್ಧಿಗೆ ₹ 4 ಕೋಟಿ ಅನುದಾನ ಗುತ್ತಿಗೆದಾರರಿಗೆ ಪಾವತಿಸಿ ಮೂರು ವರ್ಷ ಕಳೆದರೂ ಕೆಲಸ ಇನ್ನೂ ಅಪೂರ್ಣಸ್ಥಿತಿಯಲ್ಲಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಕೈಗೊಳ್ಳಲಾದ ಬಸವೇಶ್ವರ ವೃತ್ತದಿಂದ ಜಾಮಿಯಾ ಮಸೀದಿವರೆಗಿನ ಸಿಸಿ ರಸ್ತೆ ಮುಗಿದು ಎರಡು ವರ್ಷದ ಒಳಗಾಗಿಯೇ ಹಾಳಾಗಿ ಹೋಗಿದೆ.

ಅದೇ ರೀತಿ ಹಳೆ ಬಚಾರದಲ್ಲಿ ನಿರ್ಮಿಸಲಾಗಿದ್ದ ಸಿಸಿ ರಸ್ತೆಯೂ ಕಳಪೆ ಕಾಮಗಾರಿಯಿಂದ ಹದಗೆಟ್ಟು ಹೋಗಿದೆ. ಪಟ್ಟಣದ ವ್ಯಾಪ್ತಿಯ ಸಿಸಿ ರಸ್ತೆ, ಡಾಂಬರೀಕರಣ, ಚರಂಡಿ ಕಾಮಗಾರಿಗಳು ಕಳಪೆ ಯಾಗಿದ್ದು ಅವುಗಳ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ. ಅಷ್ಟೇ ಅಲ್ಲದೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿವೆ, ದೂಳಿನಿಂದ ಜನರ ಆರೋಗ್ಯ ಹದಗೆಡುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆ ಪ್ರಮುಖರಾದ ಬಸವರಾಜ ಗಾಣಿಗೇರ, ನಜೀರಸಾಬ್ ಮೂಲಿಮನಿ ಸೇರಿದಂತೆ ರೈತ ಸಂಘಟನೆ, ಹೈದರಾಬಾದ್‌ ಕರ್ನಾಟಕ ಯುವ ಶಕ್ತಿ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT