ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರತಮ್ಯದಿಂದ ಕೂಡಿದ ಬಜೆಟ್: ಜಿಲ್ಲೆಗೆ ದೊರಕದ ಆದ್ಯತೆ

ಕೃಷ್ಣಾ ಬಿ ಸ್ಕೀಂ ಮೌನತಾಳಿದ ರಾಜ್ಯ ಸರ್ಕಾರ
Last Updated 5 ಜುಲೈ 2018, 17:42 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಗೆ ಪ್ರಸ್ತುತ ಸಾಲಿನ ರಾಜ್ಯ ಬಜೆಟ್ ಹೊಸ ಘೋಷನೆ ಇಲ್ಲದೆಈ ಭಾಗದ ಜನರಲ್ಲಿ ನಿರಾಶೆ ಮೂಡಿಸಿದೆ.

ಕುಷ್ಟಗಿ, ಯಲಬುರ್ಗಾ, ಕೊಪ್ಪಳ ತಾಲ್ಲೂಕಿನ ಜಮೀನುಗಳಿಗೆ ನೀರಾವರಿ ಕಲ್ಪಿಸುವ ಮಹತ್ವಾಕಾಂಕ್ಷೆಯ ಕೃಷ್ಣಾ ಬಿಸ್ಕೀಂ ಯೋಜನೆ ಜಾರಿಗೆಯಾವುದೇ ಘೋಷಣೆ ಮಾಡದ ರಾಜ್ಯ ಸರ್ಕಾರದ ವಿರುದ್ಧರೈತ ಹಾಗೂ ಹೋರಾಟಗಾರರ ಆಕ್ರೋಶ ವ್ಯಕ್ತವಾಗಿದೆ.

ಇಸ್ರೇಲ್ ಮಾದರಿ ಕೃಷಿ, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಹಾಗೂ ಆಟಿಕೆ ತಯಾರಿಕೆ ಘಟಕ ಸ್ಥಾಪನೆಗೆ ಸ್ಪಂದಿಸಿರುವುದು ಮಾತ್ರ ಆಶಾದಾಯಕ ಬೆಳವಣಿಗೆ. ಆದರೂ ಜಿಲ್ಲೆಯ ಹಲವು ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಬಜೆಟ್ ಪೂರಕವಾಗಿ ಸ್ಪಂದಿಸಿಲ್ಲ ಎಂಬ ಅಸಮಾಧಾನ ಎಲ್ಲೆಡೆ ಮೂಡಿದೆ.

ಈಗಿರುವ ಕೊಪ್ಪಳ ಮೆಡಿಕಲ್ ಕಾಲೇಜು ಸ್ಥಾಪನೆಯಾಗಿ ಐದು ವರ್ಷ ಕಳೆದರೂ ನಿರೀಕ್ಷಿತ ಸಾಧನೆ ಮಾಡಿಲ್ಲ. ತಜ್ಞ ವೈದ್ಯರ ಕೊರತೆ, ಕೇಂದ್ರ ವೈದ್ಯಕೀಯ ಮಂಡಳಿ ಮಾನದಂಡ ಅನುಸರಿಸದೇ ವಿದ್ಯಾರ್ಥಿಗಳ ಪ್ರವೇಶಕ್ಕೆ ತೊಂದರೆ ಉಂಟಾಗಿದ್ದು, ಅನುಮತಿ ರದ್ದುಗೊಳ್ಳುವ ಭೀತಿ ಎದುರಾಗಿದೆ. 150 ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ಕೂಡಾ ನೀಡುತ್ತಿಲ್ಲ.ಅಲ್ಲದೆ ಜಿಲ್ಲಾ ಸರ್ಕಾರಿ ಆಸ್ಪತ್ರೆ ಈಗಾಗಲೇ ಸ್ಪೇಷಲ್ ಆಸ್ಪತ್ರೆ ಆಗಿದ್ದು, 350 ಹಾಸಿಗೆಗಳ ಸಾಮರ್ಥ್ಯ ಇದೆ. ಅಲ್ಲಿಯೂ ವೈದ್ಯರ ಕೊರತೆ ಇದೆ. ಅವುಗಳ ಪುನಶ್ಚೇತನಕ್ಕೆ ಯಾವುದೇ ಘೋಷಣೆಯಾಗಿಲ್ಲ. ಇದ್ದವುಗಳನ್ನೇ ನಿರ್ವಹಿಸದೇ ಮೂಗಿಗೆ ತುಪ್ಪ ಸವರುವಂತೆ ಯೋಜನೆ ಅನುಷ್ಠಾನಗೊಳಿಸಿರುವುದು ಇಲ್ಲಿಯ ಹೋರಾಟಗಾರರನ್ನು ಕೆರಳಿಸಿದೆ.

ಆರೋಗ್ಯ ಕ್ಷೇತ್ರಕ್ಕೆ ಬಂಪರ್: ಈ ಭಾಗದ ಜನತೆ ಹೆಚ್ಚಿನ ಹಾಗೂ ಅತ್ಯಾಧುನಿಕ ಚಿಕಿತ್ಸೆಗೆ ಬೆಂಗಳೂರು, ಹುಬ್ಬಳ್ಳಿ, ಬಾಗಲಕೋಟೆಗೆ ತೆರಳುತ್ತಿದ್ದು, ಈಗ 450 ಹಾಸಿಗೆ ಸಾಮರ್ಥ್ಯದ ವೈದ್ಯಕೀಯ ಕಾಲೇಜಿನಲ್ಲಿ ಆಸ್ಪತ್ರೆ ತೆರೆಯುವ ಘೋಷಣೆ ಮಾಡಿದ್ದು, ಅದಕ್ಕಾಗಿ ₹ 200 ಕೋಟಿ ಅನುದಾನವನ್ನು ಮೀಸಲಾಗಿಡಲು ನಿರ್ಧರಿಸಿದ್ದು, ಆಶಾದಾಯಕ ಬೆಳವಣಿಗೆ. ಅಲ್ಲದೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಕ್ಕೆ ನಿರ್ಧರಿಸುವುದು ಜಿಲ್ಲೆಯ ಬಡ ಹಾಗೂ ಮಧ್ಯಮ ವರ್ಗದ ಜನರಲ್ಲಿ ಸಂತಸ ಮೂಡಿಸಿದೆ.

ಈ ಘೋಷಣೆ ಹೊಸದಾದ ಘೋಷಣೆ ಏನೂ ಅಲ್ಲ. ಈ ಹಿಂದೆ ಕಾಂಗ್ರೆಸ್ ನೀಡಿದ್ದ ಭರವಸೆಯನ್ನೇ ಮರು ಘೋಷಣೆ ಮಾಡಿದ್ದಾರೆ ಎಂದು ಇಲ್ಲಿನ ಮುಖಂಡರ ಅಭಿಪ್ರಾಯವಾಗಿದೆ. ಆಟಿಕೆ ಸಾಮಗ್ರಿ ತಯಾರಿಕೆ ಘಟಕ: ಆಟಿಕೆ ಸಾಮಗ್ರಿಗಳ ತಯಾರಿಕೆ ಉದ್ಯಮವನ್ನು ಈ ಭಾಗದಲ್ಲಿ ಸ್ಥಾಪನೆಗೆ ನಿರ್ಧರಿಸಿದ್ದು, ಸಂತಸ ತಂದಿದೆ.ಪ್ರಸ್ತುತ ದೇಸಿ ಆಟಿಕೆಗಳನ್ನು ಸಣ್ಣ, ಸಣ್ಣ ಉದ್ಯಮಗಳು ತಯಾರಿಸುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಬ್ಯಾಟರಿ ಮತ್ತು ವಿದ್ಯುತ್ ಚಾಲಿತ ಆಟಿಕೆಗಳು ಮಾರುಕಟ್ಟೆಗೆ ಬಂದಿದ್ದು, ಅವುಗಳಲ್ಲಿ ಐಸಿವಿ, ಚಿಪ್, ಮೈಕ್ರೋ ಡಿಸಿ ಮೋಟಾರ್‌ಗಳನ್ನು ಅಳವಡಿಸಿರುತ್ತಾರೆ. ಇಂತಹ ಆಟಿಕೆಗಳಿಗೆ ಜಾಗತಿಕವಾಗಿ ಮಾರುಕಟ್ಟೆ ಇದೆ. ಚೀನಾ ದೇಶದಲ್ಲಿ ಯಾಂತ್ರಿಕ ಆಟಿಕೆಗಳು ತಯಾರಾಗಿ ಇಡೀ ಪ್ರಪಂಚಕ್ಕೆ ಸರಬರಾಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚೀನಾ ಆಟಿಕೆಗಳಿಗೆ ಸವಾಲೊಡ್ಡುವಂತೆ ಕೊಪ್ಪಳ ಜಿಲ್ಲೆಯಲ್ಲಿ, ಆಟಿಕೆ ತಯಾರಿಕಾ ಕ್ಲಸ್ಟರ್ ಹುಟ್ಟುಹಾಕಲು ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿದೆ.

ಕೃಷಿ: ಬರದ ನಾಡು ಎಂದೇ ಹೆಸರಾದ ಕೊಪ್ಪಳ ಜಿಲ್ಲೆಯನ್ನು ಇಸ್ರೇಲ್ ಮಾದರಿಯಲ್ಲಿ ಕೃಷಿ ಮಾಡಲು 5000 ಸಾವಿರ ಹೆಕ್ಟರ್ ಪ್ರದೇಶವನ್ನು ಗುರುತಿಸಲಾಗಿದ್ದು, ₹ 150 ಕೋಟಿ ಅನುದಾನ ನೀಡಲು ಉದ್ದೇಶಿಸಲಾಗಿದೆ. ಈಗಾಗಲೇ ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಪರಿಣಾಮ ಸಿಂಗಟಾಲೂರ ಹಾಗೂ ಕೊಪ್ಪಳ ಏತ ನೀರಾವರಿ ಯೋಜನೆಯಿಂದ ಜನತೆಗೆ ಹನಿ ನೀರು ದೊರೆತಿಲ್ಲ. ಕಾಲುವೆ ನಿರ್ಮಾಣಕ್ಕೆ ಅನುದಾನ ಕೂಡಾ ನಿಗದಿ ಪಡಿಸಿಲ್ಲ. ಹಿರೇಹಳ್ಳ ಜಲಾಶಯ ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ತುಂತುರು ಹನಿ ನೀರಾವರಿ ಕೂಡಾ ಮಾಡುತ್ತೀವೆ ಎಂದು ಹೇಳಿದರೂ ಒಂದು ಬಿಡಿಗಾಸು ಹಣ ನೀಡಿಲ್ಲ. ಈ ಮಧ್ಯೆ ಇಸ್ರೇಲ್ ಮಾದರಿ ಕೃಷಿ ಹೇಗೆ ಅನುಷ್ಠಾನಗೊಳಿಸುತ್ತಾರೆ ಎಂಬುವುದೇ ಚಿಂತೆಯಾಗಿದೆ.

ಈಡೇರದ ಭರವಸೆ: ಜಿಲ್ಲೆಯಲ್ಲಿ 150ಕ್ಕಿಂತ ಹೆಚ್ಚು ಬೃಹತ್ ಉದ್ಯಮಗಳು ಕಾರ್ಯ ನಿರ್ವಹಿಸುತ್ತಿದ್ದು, ಮೂಲಸೌಕರ್ಯಗಳ ಕೊರತೆ, ಸ್ಥಳೀಯರಿಗೆ ಉದ್ಯೋಗವಕಾಶ ದೊರೆಯದೇ ಇರುವುದು, ಹೊಸ ಸರ್ಕಾರಿ ಉದ್ಯಮ ಸ್ಥಾಪನೆ, ಸಮರ್ಪಕವಾಗಿ ಬಳಕೆಯಾಗದ ಮಾನವ ಸಂಪನ್ಮೂಲದ ಕುರಿತು ಜಿಲ್ಲೆಯ ಆರ್ಥಿಕ ತಜ್ಞರಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ.

ಹಿಂದಿನ ಸರ್ಕಾರವನ್ನು ಓಲೈಸುವ ನಿಟ್ಟಿನಲ್ಲಿ ಎಲ್ಲ ಭಾಗ್ಯಗಳಿಗೆ ಅನುಮೋದನೆ ನೀಡುವುದರ ಜೊತೆಗೆ, ಬಿಜೆಪಿ ಸರ್ಕಾರ ಪ್ರಾರಂಭಿಸಿದ್ದ ಮಠಗಳಿಗೆ ಅನುದಾನ ನೀಡುವ ಜನಪ್ರಿಯ ಯೋಜನೆಗೆ ಜೋತು ಬಿದ್ದಿರುವ ಕುಮಾರಸ್ವಾಮಿ ಹಳೆಯ ಬಜೆಟ್‌ಗೆ ಸ್ವಲ್ಪ ತುಂಬಿ, ಹೊಸ ಬಜೆಟ್ ಮಂಡಿಸಿರುವುದು ಅವರ ಸ್ವಂತಿಕೆ ಹಾಗೂ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುವಲ್ಲಿ ಹಿಂದೆ ಬಿದ್ದಿದ್ದಾರೆ ಜಿಲ್ಲೆಯ ಬಹುತೇಕರ ಅಭಿಪ್ರಾಯವಾಗಿದೆ. ವಿದ್ಯಾರ್ಥಿಗಳು, ಯುವಕರು ಹಾಗೂ, ಮಧ್ಯಮ ಹಾಗೂ ಬಡವರ್ಗದ ಜನರು ಬಸ್ ಪ್ರಯಾಣ ದರ, ತೈಲ, ವಿದ್ಯುತ್ ದರ ಏರಿಕೆಯಿಂದ ಅಸಮಾಧಾನಗೊಂಡಿದ್ದಾರೆ.

ಕೊಪ್ಪಳ ಜಿಲ್ಲೆಗೆ ಏನು

ರಾಜ್ಯದ ಸಮ್ಮಿಶ್ರ ಸರ್ಕಾರದ ಈ ಸಾಲಿನ ಬಜೆಟ್ ಜನಪ್ರಿಯ ಯೋಜನೆಗಳ ಘೋಷಣೆಯ ಭಾರದಿಂದ ಉತ್ತರ ಕರ್ನಾಟಕಕ್ಕೆ ಸೂಕ್ತ ನ್ಯಾಯ ಒದಗಿಸಿಲ್ಲ ಎನ್ನುವುದೇ ಇಲ್ಲಿನ ಹೋರಾಟಗಾರರ ಆಕ್ಷೇಪ ಅದರ ಮಧ್ಯೆ ಜಿಲ್ಲೆಗೆ ನೀಡಿದ ಕೊಡುಗೆ ವಿವರ ಇಲ್ಲಿದೆ.

ಇಸ್ರೇಲ್ ಕೃಷಿ ಮಾದರಿ ಹಾಗೂ ಶೂನ್ಯ ಬಂಡವಾಳದಲ್ಲಿ ಸಾಧನೆ ಮಾಡುವ ಉದ್ದೇಶದಿಂದ 5000 ಹೆಕ್ಟೆರ್ ಕ್ಷೇತ್ರವನ್ನು ಅಲ್ಪ ನೀರಿನಿಂದ ತೋಟಗಾರಿಕೆ ಬೆಳೆ ಬೆಳೆಯಲು₹ 200 ಕೋಟಿ ಅನುದಾನವನ್ನು ಮೀಸಲಾಗಿಡಲಾಗಿದೆ. ಕೊಪ್ಪಳ ಮೆಡಿಕಲ್ ಕಾಲೇಜಿನಲ್ಲಿ 450 ಹಾಸಿಗೆ ಸಾಮರ್ಥ್ಯಗಳ ಆಸ್ಪತ್ರೆ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ನಿರ್ಧಾರ ಆಟಿಕೆ ತಯಾರಿಸುವ ಘಟಕಗಳನ್ನು ತಯಾರಿಸುವ ಉದ್ಯಮ ಸ್ಥಾಪನೆಗೆ ಒತ್ತು ನೀಡಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಈ ಭಾಗದ ಅನೇಕರಿಗೆ ಉದ್ಯೋಗ ದೊರೆಯಲಿದೆ.

ಇದು ಸಂಪೂರ್ಣ ಬಜೆಟ್ ಅಲ್ಲ. ಕೇವಲ ದಕ್ಷಿಣ ಕರ್ನಾಟಕ ಕೇಂದ್ರೀತ ಬಜೆಟ್ ಮಂಡಿಸುವ ಮೂಲಕ ಜನತೆಗೆ ಕುಮಾರಸ್ವಾಮಿ ಮೋಸ ಮಾಡಿದ್ದಾರೆ. ಕಾಂಗ್ರೆಸ್ ಬಜೆಟ್‌ನ ನಕಲಿ ರೂಪವಾಗಿದೆ. ಇದರಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ
- ಸಂಗಣ್ಣ ಕರಡಿ,ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT