ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊರೆಬಾಳ; ಕುಡಿಯುವ ನೀರಿನ ಸಮಸ್ಯೆ ತೀವ್ರ

ಖಾಸಗಿ ಕೊಳವೆಬಾವಿ ನೀರು ಪಡೆಯಲು ಗ್ರಾಮಸ್ಥರ ಒತ್ತಾಯ
Last Updated 11 ಫೆಬ್ರುವರಿ 2022, 4:37 IST
ಅಕ್ಷರ ಗಾತ್ರ

ಹನುಮಸಾಗರ: ಕ್ಷೀಣಿಸಿದ ಅಂತರ್ಜಲ ಸಮಸ್ಯೆಯಿಂದಾಗಿ ಸಮೀಪದ ತುಮರಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗೊರೆಬಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ತೀವ್ರ ತೊಂದರೆ ಎದುರಾಗಿದ್ದು ಗ್ರಾಮಸ್ಥರು ಏಣಿ ಬಳಸಿ ಟ್ಯಾಂಕ್ ಏರಿ ನೀರು ಹಿಡಿಯಯುವ ಹರಸಾಹಸ ಮಾಡುತ್ತಿದ್ದಾರೆ.

ಗ್ರಾಮದಲ್ಲಿ 1,500 ಜನಸಂಖ್ಯೆ ಇದ್ದು, ಈ ಗ್ರಾಮದ ಜನರಿಗೆ ನೀರು ಪೂರೈಸುವುದು ಖಾಸಗಿಯಾಗಿ ಪಡೆದಿರುವ ಒಂದು ಕೊಳವೆಬಾವಿ ನೀರು ಮಾತ್ರ. ಅಂತರ್ಜಲ ಕ್ಷೀಣಿಸಿದ ಕಾರಣ ಆ ಕೊಳವೆಬಾವಿಯಲ್ಲೂ ನೀರು ಕಡಿಮೆಯಾಗಿದ್ದು ನಿಲ್ಲುವ ಹಂತಕ್ಕೆ ಬಂದಿದೆ. ಎರಡು ತಿಂಗಳಿನಿಂದ ಜನರು ಹಗಲು ರಾತ್ರಿ ಎನ್ನದೆ ಎರಡು ಕೊಡ ನೀರಿಗಾಗಿ ಟ್ಯಾಂಕಿನ ಮುಂದೆ ಕಾಯುತ್ತಾ ನಿಲ್ಲುವಂತಾಗಿದೆ.

ಗ್ರಾಮದ ಮುಖ್ಯ ರಸ್ತೆಯ ಕ್ರಾಸ್ ಬಳಿ, ಶಾಲಾ ಆವರಣದಲ್ಲಿ ಹಾಗೂ ಬಸವಣ್ಣನ ಪಾಗಟ್ಟಿಯ ಬಳಿ ಹೀಗೆ ಮೂರು ಮಿನಿವಾಟರ್ ಟ್ಯಾಂಕ್‍ಗೆ ಒಂದೇ ಕೊಳವೆಬಾವಿಯಿಂದ ನೀರು ಪೂರೈಕೆ ಮಾಡಲು ವ್ಯವಸ್ಥೆ ಮಾಡಲಾಗಿದೆಯಾದರೂ, ಬಸವಣ್ಣನ ಪಾದಗಟ್ಟಿಯ ಬಳಿ ಇರುವ ಒಂದು ಟ್ಯಾಂಕಿಗೆ ಮಾತ್ರ ನೀರು ಸಣ್ಣ ಪ್ರಮಾಣದಲ್ಲಿ ಸರಬುರಾಜು ಆಗುತ್ತದೆ.

ಜನರು ನೀರು ಪಡೆಯುವ ಧಾವಂತದಲ್ಲಿ ಏಣಿ ಬಳಸಿ ಟ್ಯಾಂಕ್ ಏರಿ ಅಲ್ಲಿಂದಲೇ ನೇರವಾಗಿ ನೀರು ಹಿಡಿಯುವುದರಿಂದ ಟ್ಯಾಂಕ್ ಅಡಿಯಲ್ಲಿ ನಿಂತಿರುವ ಮಹಿಳೆಯರಿಗೆ, ಮಕ್ಕಳಿಗೆ, ವೃದ್ಧರಿಗೆ ನೀರು ದೊರಕದಂತಾಗಿ ಜನರ ಮಧ್ಯೆ ಜಗಳ
ನಡೆಯುತ್ತವೆ.

‘ಜಮೀನಿನಲ್ಲಿ ರಾಶಿ ಬಂದಿವೆ, ಮನೆಯಲ್ಲಿನ ಎಲ್ಲ ಕೆಲಸ ಬಿಟ್ಟು, ನೀರಿಗಾಗಿ ದಿನವಿಡೀ ಟ್ಯಾಂಕಿನ ಮುಂದೆ ನಿಲ್ಲುವ ಶಿಕ್ಷೆ ನಮಗೆ ಬಂದಿದೆ, ಎರಡು ಕೊಡ ನೀರು ಸಿಕ್ಕರೆ ಸಾಕು ಎಂದು ಶಾಲೆಗೆ ಹೋಗುವ ಮಕ್ಕಳನ್ನು ಶಾಲೆ ಬಿಡಿಸಿ ಸರತಿಯಲ್ಲಿ ನಿಲ್ಲಿಸುತ್ತಿದ್ದೇವೆ, ಏನಾದರೂ ಮಾಡಿ ನಮಗೆ ಕುಡಿಯುವ ನೀರಿನ ಅನುಕೂಲ ಮಾಡಿಕೊಡಲಿ’ ಎಂದು ಗ್ರಾಮದ ಶಾಂತಮ್ಮ, ಪಾರಮ್ಮ, ಲಕ್ಷ್ಮೀದೇವಿ ಹೇಳುತ್ತಾರೆ.

‘ಈ ಹಿಂದೆ ಗ್ರಾಮ ಪಂಚಾಯಿತಿ ಖಾಸಗಿ ಕೊಳವೆಬಾವಿಯಿಂದ ನೀರು ಪಡೆದುಕೊಂಡು ಪೂರೈಸುತ್ತಿತ್ತು, ಸದ್ಯ ಆ ಕೊಳವೆಬಾವಿಯಲ್ಲಿ ನೀರು ಸಂಪೂರ್ಣ ಕಮ್ಮಿಯಾಗಿದೆ, ಈಚೆಗೆ ಹೊಸದಾಗಿ ಕೊಳವೆಬಾವಿ ಕೊರೆಸಿದರೂ ನೀರು ಬರಲಿಲ್ಲ, ಅನವಶ್ಯಕವಾಗಿ ಕೊಳವೆಬಾವಿ ಕೊರೆಯಿಸಿ ಹಣ ವ್ಯರ್ಥ ಮಾಡುವುದರ ಬದಲು ಗ್ರಾಮದ ಸಮೀಪದಲ್ಲಿರುವ ಖಾಸಗಿ ಕೊಳವೆಬಾವಿಯಿಂದ ನೀರು ಪಡೆದುಕೊಳ್ಳಿ ಎಂದು ಮನವಿ ಮಾಡಿದರೂ, ಗ್ರಾಮ ಪಂಚಾಯಿತಿ ಕಿವಿಗೆ ಹಾಕಿಕೊಳ್ಳುತ್ತಿಲ್ಲ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಪಾರಪ್ಪ ಬಸಪ್ಪ ಮುಡಿಯಪ್ಪನವರ, ವಿರೂಪಾಕ್ಷಗೌಡ ಗೌಡ್ರ, ಮುಖಂಡ ವೀರಯ್ಯ ಅವತಾರಿ ಹೇಳಿದರು.

ತುಮರಿಕೊಪ್ಪ ಗ್ರಾಮ ಪಂಚಾಯಿತಿಗೆ ಸದಾ ಪ್ರಭಾರ ಹೊಂದಿದ ಅಭಿವೃದ್ಧಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿರುವುದರಿಂದ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯದಂತಾಗಿವೆ ಎಂದು ಜನ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT