ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳವಂಡಿ: ಬೆಟಗೇರಿ ದುರ್ಗಾದೇವಿ ರಥೋತ್ಸವ ಸಂಭ್ರಮ

ಗ್ರಾಮದಲ್ಲಿ ಜನರಲ್ಲಿ ಖುಷಿ, ಕಲಾ ತಂಡಗಳ ಪ್ರದರ್ಶನ
Published 3 ಏಪ್ರಿಲ್ 2024, 16:08 IST
Last Updated 3 ಏಪ್ರಿಲ್ 2024, 16:08 IST
ಅಕ್ಷರ ಗಾತ್ರ

ಅಳವಂಡಿ: ಸಮೀಪದ ಬೆಟಗೇರಿ ಗ್ರಾಮದ ಆರಾಧ್ಯ ದೈವವಾದ ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಸಂಜೆ ಸಾವಿರಾರು ಭಕ್ತರ ನಡುವೆ ಮಹಾರಥೋತ್ಸವ ಜರುಗಿತು.

ಜಾತ್ರಾ ಮಹೋತ್ಸವ ನಿಮಿತ್ಯ ಬೆಳಿಗ್ಗೆಯಿಂದಲೇ ದೇವಿಗೆ ವಿಶೇಷ ಪೂಜೆ ನಡೆದವು. ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆ ಗ್ರಾಮದ ಹಳ್ಳದಿಂದ ಕುಂಬಾರ ತಯಾರಿಸಿ ಗಡಿಗೆಯ ಮೂಲಕ ನೀರನ್ನು ಮೆರವಣಿಗೆ ಮೂಲಕ ತಂದು ದೇವಸ್ಥಾನಕ್ಕೆ ತರಲಾಯಿತು. ನಂತರ ಪಾಯಸ ತಯಾರಿಸುವ ಕಾರ್ಯಕ್ರಮ ನಡೆಯಿತು. ತದ ನಂತರ ಭಕ್ತರಿಂದ ಆಗ್ನಿ ಕಾರ್ಯಕ್ರಮ ಜರುಗಿತು.

ಭಕ್ತರು ದೇವಿಗೆ ಪೂಜೆ, ನೈವೇದ್ಯ ಸಲ್ಲಿಸಿದರು. ಹರಕೆ ಹೊತ್ತ ಭಕ್ತರು ದೀಡ್ ನಮಸ್ಕಾರ ಹಾಕಿದ ಚಿತ್ರಣ ಕಂಡು ಬಂದಿತು. ಭಕ್ತರು ಮನೆಯಿಂದ ದೇವಸ್ಥಾನದವರೆಗೂ ಮಡಿ ಉಡಿಯಿಂದ ವಾದ್ಯ ಮೇಳದೊಂದಿಗೆ ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದರು. ಬಿರುಬಿಸಿಲಿನ ನಡುವೆಯೂ ಸಂಜೆ ರಥೋತ್ಸವ ಸಮಯವಾಗುತ್ತಿದ್ದಂತೆ ಬೆಟಗೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನ ಪಾಲ್ಗೊಂಡಿದ್ದರು. ನಂತರ ಧ್ವಜ ಲೀಲಾ ಕಾರ್ಯಕ್ರಮ ನಡೆಯಿತು.

ಮೈನಹಳ್ಳಿ ಬಿಕನಳ್ಳಿಯ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಳವಂಡಿಯ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕುಕನೂರು ಅನ್ನದಾನೇಶ್ವರ ಶಾಖಾಮಠದ ಮಹಾದೇವ ಸ್ವಾಮೀಜಿ ಅವರು ಧ್ವಜಾರೋಹಣ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ಸ್ವಾಮೀಜಿಗಳು ಮಾತನಾಡಿದರು.

ರಥೋತ್ಸವದ ಮುಂದೆ ಸುರಪುರ ತಾಲ್ಲೂಕಿನ ಕಕ್ಕೇರ ಗ್ರಾಮದ ಡೊಳ್ಳಿನ ಮೇಳ, ನವಲಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಮಹಿಳಾ ಹಾಗೂ ಪುರುಷರ ಡೊಳ್ಳಿನ ಮೇಳ ರಥೋತ್ಸವದ ಮೆರುಗು ತಂದಿತು. ಇದಕ್ಕೂ ಮೊದಲು ಎತ್ತಿನ ಮೆರವಣಿಗೆ ನಡೆಯಿತು. ಡೊಳ್ಳಿನ ಮೇಳ, ಬ್ಯಾಂಡ್ ಬಾಜು ಹಾಗೂ ವಿವಿಧ ಕಲಾತಂಡಗಳು ಗಮನ ಸೆಳೆಯಿತು.

ಭಕ್ತರು ರಥೋತ್ಸವಕ್ಕೆ ಉತ್ತುತ್ತಿ ಹಾಗೂ ಬಾಳೆಹಣ್ಣು ಎಳೆದು ಭಕ್ತಿ ಸಮರ್ಪಿಸಿದರು. ವಿವಿಧ ಜಿಲ್ಲೆ ಹಾಗೂ ಗ್ರಾಮಗಳ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದರು. ಭಕ್ತರು ರೊಟ್ಟಿ, ಬದನೆಕಾಯಿ ಪಲ್ಲೆ, ದಾಲ್ , ಮಾದಲಿ, ಬೂಂದಿ, ಜಿಲೇಬಿ, ಮೊಸರು ಅನ್ನ ಹಾಗೂ ಅನ್ನ ಸಾಂಬಾರ ಸವಿದರು. ಗ್ರಾಮದೇವತೆಯ ಜಾತ್ರೆ ಕಾರಣದಿಂದಾಗಿ ಪ್ರತಿ ಮನೆಯಲ್ಲಿ ಹೋಳಿಗೆ, ಮಾದಲಿ ಹೀಗೆ ವಿವಿಧ ಸಿಹಿ ಪದಾರ್ಥಗಳನ್ನು ಮಾಡಲಾಗಿತ್ತು.

ಜಾತ್ರೆಯಲ್ಲಿ ಪ್ರದರ್ಶನ ನೀಡಿದ ಕಲಾ ತಂಡ
ಜಾತ್ರೆಯಲ್ಲಿ ಪ್ರದರ್ಶನ ನೀಡಿದ ಕಲಾ ತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT