ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಸ್ಪರ್ಧೆ; ನಾಲ್ಕರಲ್ಲಿ ಕೊಪ್ಪಳವೇ ಚಾಂಪಿಯನ್‌

ರಾಜ್ಯಮಟ್ಟಕ್ಕೆ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾದ ಜಿಲ್ಲೆಯ ಹ್ಯಾಂಡ್‌ಬಾಲ್‌, ಬಾಲ್‌ ಬ್ಯಾಡ್ಮಿಂಟನ್‌, ಕೊಕ್ಕೊ ತಂಡಗಳು
Published 6 ಅಕ್ಟೋಬರ್ 2023, 15:58 IST
Last Updated 6 ಅಕ್ಟೋಬರ್ 2023, 15:58 IST
ಅಕ್ಷರ ಗಾತ್ರ

ಕೊಪ್ಪಳ: ತವರಿನ ಕ್ರೀಡಾಂಗಣದಲ್ಲಿ ವಿಜೃಂಭಿಸಿದ ಕೊಪ್ಪಳ ಜಿಲ್ಲೆಯ ಕೊಕ್ಕೊ, ಹ್ಯಾಂಡ್‌ಬಾಲ್‌ ಹಾಗೂ ಬಾಲ್‌ ಬ್ಯಾಡ್ಮಿಂಟನ್‌ ಪುರುಷರ ತಂಡಗಳು ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಚಾಂಪಿಯನ್‌ ಆಗಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿವೆ.

ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲಾ ತಂಡಗಳು ಪಾಲ್ಗೊಂಡಿದ್ದ ಟೂರ್ನಿಯಲ್ಲಿ ಜಿಲ್ಲೆಯ ಪುರುಷರ ತಂಡ ಈ ಮೂರೂ ಸ್ಪರ್ಧೆಗಳಲ್ಲಿ ಪ್ರಾಬಲ್ಯ ಮೆರೆದರೆ, ಜಿಲ್ಲೆಯ ಮಹಿಳೆಯರ ಹ್ಯಾಂಡ್‌ಬಾಲ್‌ನಲ್ಲಿ ಕೊಪ್ಪಳ, ಬಾಲ್‌ ಬ್ಯಾಡ್ಮಿಂಟನ್‌ನಲ್ಲಿ ಬೀದರ್ ಮತ್ತು ಕೊಕ್ಕೊದಲ್ಲಿ ರಾಯಚೂರು ತಂಡಗಳು ವಿಜಯದ ಪತಾಕೆ ಹಾರಿಸಿದವು.

ಪುರುಷರ ವಿಭಾಗದ ಬಾಲ್‌ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಕೊಪ್ಪಳ ಜಿಲ್ಲಾ ತಂಡ 35–29, 35–22, 35–22 ಗೇಮ್‌ಗಳಿಂದ ವಿಜಯನಗರ ಜಿಲ್ಲಾ ತಂಡವನ್ನು ಮಣಿಸಿತು. ರೋಚಕ ಹೋರಾಟ ಹಾಗೂ ಮರು ಹೋರಾಟಕ್ಕೆ ಸಾಕ್ಷಿಯಾದ ಕೊಕ್ಕೊ ಪಂದ್ಯದಲ್ಲಿ ಕೊಪ್ಪಳ ಜಿಲ್ಲಾ ತಂಡ ಮೂರು ಅಂಕಗಳ ಅಂತರದಿಂದ ರಾಯಚೂರು ತಂಡವನ್ನು ಮಣಿಸಿತು. ಇಲ್ಲಿನ ತಂಡ ಎಂಟು ಅಂಕ ಗಳಿಸಿದರೆ ರಾಯಚೂರು ತಂಡ ಐದು ಅಂಕ ಗಳಿಸಿ ಗೆಲುವಿನ ಸಮೀಪ ಬಂದರೂ ಯಶಸ್ಸು ಪಡೆಯುವಲ್ಲಿ ವಿಫಲವಾಯಿತು.

ಹ್ಯಾಂಡ್‌ ಬಾಲ್‌ ವಿಭಾಗದ ಹೋರಾಟದಲ್ಲಿ ಕೊಪ್ಪಳ ತಂಡ 14–8 ಅಂಕಗಳಿಂದ ವಿಜಯನಗರ ತಂಡವನ್ನು ಮಣಿಸಿದ್ದರಿಂದ ಜಿಲ್ಲೆಗೆ ಮೂರೂ ವಿಭಾಗದ ಪ್ರಶಸ್ತಿಗಳು ಲಭಿಸಿದವು.

ಮಹಿಳೆಯರ ವಿಭಾಗದ ಹ್ಯಾಂಡ್‌ಬಾಲ್‌ ಸ್ಪರ್ಧೆ ಏಕಪಕ್ಷೀಯವಾಗಿ ಅಂತ್ಯಕಂಡಿತು. ಕನಕಗಿರಿ ತಾಲ್ಲೂಕಿನ ಚಿಕ್ಕಡಂಕನಕಲ್ ಶಾಲಾ ಹಾಗೂ ಕಾಲೇಜುಗಳನ್ನು ಪ್ರತಿನಿಧಿಸಿದ್ದ ವಿದ್ಯಾರ್ಥಿಗಳು 6–0 ಅಂಕಗಳಿಂದ ಕಲಬುರಗಿ ತಂಡವನ್ನು ಮಣಿಸಿದರು. ಶ್ರೀಧರ ನೆಕ್ಕಂಟಿ ಈ ತಂಡದ ಕೋಚ್‌ ಆಗಿದ್ದರು.

ಬಾಲ್‌ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಬೀದರ್ ತಂಡ 35–15, 35–9 ಗೇಮ್‌ಗಳಿಂದ ಬಳ್ಳಾರಿ ತಂಡವನ್ನು ಮಣಿಸಿದರೆ, ಕೊಕ್ಕೊ ಸ್ಪರ್ಧೆಯ ಪೈಪೋಟಿಯಲ್ಲಿ ರಾಯಚೂರಿನ ತಂಡ 17–3 ಅಂಕಗಳಿಂದ ಕಲಬುರಗಿ ತಂಡವನ್ನು ಸೋಲಿಸಿತು. ವಿಭಾಗ ಮಟ್ಟದ ಗುಂಪು ಕ್ರೀಡೆಗಳಲ್ಲಿ ಚಾಂಪಿಯನ್‌ ಆದ ಎಲ್ಲ ತಂಡಗಳು ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸಿವೆ.

ವ್ಯವಸ್ಥೆ: ಬೇರೆ ಬೇರೆ ಜಿಲ್ಲೆಗಳಿಂದ ಬಂದಿದ್ದ ಕ್ರೀಡಾಪಟುಗಳಿಗೆ ನಗರದಲ್ಲಿಯೇ ತಂಗಲು ವ್ಯವಸ್ಥೆ ಮಾಡಲಾಗಿತ್ತು. ವಿವಾದಗಳು ಉಂಟಾಗದಂತೆ ಎಚ್ಚರಿಕೆ ವಹಿಸಿದ್ದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುರುಷರ ಮತ್ತು ಮಹಿಳೆಯರ ವಿಭಾಗದ ಪಂದ್ಯಗಳನ್ನು ನಡೆಸಲು ಒಟ್ಟು 41 ಜನ ದೈಹಿಕ ಶಿಕ್ಷಣ ಶಿಕ್ಷಕರನ್ನು ನಿಯೋಜನೆ ಮಾಡಿತ್ತು.

ಪುರುಷರ ಹ್ಯಾಂಡ್ ಬಾಲ್‌ ವಿಭಾಗದ ಸ್ಪರ್ಧೆಯಲ್ಲಿ ಚಾಂಪಿಯನ್‌ ಆದ ಕೊಪ್ಪಳ ತಂಡದವರು
ಪುರುಷರ ಹ್ಯಾಂಡ್ ಬಾಲ್‌ ವಿಭಾಗದ ಸ್ಪರ್ಧೆಯಲ್ಲಿ ಚಾಂಪಿಯನ್‌ ಆದ ಕೊಪ್ಪಳ ತಂಡದವರು
ಕಲಬುರಗಿ ವಿಭಾಗ ಮಟ್ಟದಲ್ಲಿ ಚಾಂಪಿಯನ್‌ ಆದ ಕೊಪ್ಪಳದ ಪುರುಷರ ಬಾಲ್‌ ಬ್ಯಾಡ್ಮಿಂಟನ್‌ ತಂಡ
ಕಲಬುರಗಿ ವಿಭಾಗ ಮಟ್ಟದಲ್ಲಿ ಚಾಂಪಿಯನ್‌ ಆದ ಕೊಪ್ಪಳದ ಪುರುಷರ ಬಾಲ್‌ ಬ್ಯಾಡ್ಮಿಂಟನ್‌ ತಂಡ
ಮಹಿಳಾ ವಿಭಾಗದ ಹ್ಯಾಂಡ್‌ಬಾಲ್‌ ಸ್ಪರ್ಧೆಯಲ್ಲಿ ಚಾಂಪಿಯನ್‌ ಆಗಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕೊಪ್ಪಳ ತಂಡ. ತಂಡದ ಜೊತೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ ಇದ್ದಾರೆ
ಮಹಿಳಾ ವಿಭಾಗದ ಹ್ಯಾಂಡ್‌ಬಾಲ್‌ ಸ್ಪರ್ಧೆಯಲ್ಲಿ ಚಾಂಪಿಯನ್‌ ಆಗಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕೊಪ್ಪಳ ತಂಡ. ತಂಡದ ಜೊತೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ ಇದ್ದಾರೆ
ಹೆಚ್ಚು ಜನ ದೈಹಿಕ ಶಿಕ್ಷಣ ಶಿಕ್ಷಕರನ್ನು ನಿಯೋಜನೆ ಮಾಡಿದ್ದರಿಂದ ಒಂದೇ ದಿನದಲ್ಲಿ ಎಲ್ಲ ಆರು ಸ್ಪರ್ಧೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿದೆ. ಕೊಪ್ಪಳವೇ ಹೆಚ್ಚು ಪ್ರಶಸ್ತಿ ಜಯಿಸಿದ್ದು ಖುಷಿ ನೀಡಿದೆ.
-ವಿಠ್ಠಲ ಜಾಬಗೌಡರ ಸಹಾಯಕ ನಿರ್ದೇಶಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ಕ್ರೀಡಾಕೂಟಕ್ಕೆ ಶಾಸಕ ಹಿಟ್ನಾಳ ಚಾಲನೆ

ಕ್ರೀಡಾಕೂಟಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಚಾಲನೆ ನೀಡಿದರು. ಹಿಟ್ನಾಳ ಅವರು ಕ್ರೀಡಾ ಧ್ವಜಾರೋಹಣ ಹಾಗೂ ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ಕೊಟ್ಟು ಮಾತನಾಡಿ ‘ಮನುಷ್ಯನ ಆರೋಗ್ಯ ಸ್ಥಿರತೆ ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಕ್ರೀಡೆ ಅತ್ಯವಶ್ಯಕವಾಗಿದೆ. ಎಲ್ಲಾ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಯ ಹವ್ಯಾಸಗಳನ್ನು ಬೆಳಸಿಕೊಳ್ಳಬೇಕು’ ಎಂದರು. ‘ಪಾಲಕರು ಶಿಕ್ಷಕರು ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಬೇಕು. ಕ್ರೀಡೆಯಲ್ಲಿ ಸೋಲು ಗೆಲುವಿನ ಲೆಕ್ಕಾಚಾರಕ್ಕಿಂತ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಕೀರ್ತಿ ಹೆಚ್ಚಿಸಬೇಕು’ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಬಿ ನಾಗರಳ್ಳಿ ಮುಖಂಡ ಕೃಷ್ಣ ಇಟ್ಟಂಗಿ ಜಿಲ್ಲಾ ಹ್ಯಾಂಡ್‌ಬಾಲ್‌ ಸಂಸ್ಥೆ ಕಾರ್ಯದರ್ಶಿ ಶ್ರೀಕಾಂತ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಎ.ಬಸವರಾಜ ತಾಲ್ಲೂಕು ಕ್ರೀಡಾಧಿಕಾರಿ ಶರಣಬಸವ ಬಂಡಿಹಾಳ ತಾಲ್ಲೂಕು ಪ್ರಾಥಮಿಕ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿರೂಪಾಕ್ಷಪ್ಪ ಬಾಗೋಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT