ಕೊಪ್ಪಳ: ಜಿಲ್ಲೆಯ ಕಾರಟಗಿ ತಾಲ್ಲೂಕಿನ ಗುಂಡೂರು ಗ್ರಾಮದ ಅಂಗನವಾಡಿ ಕೇಂದ್ರ 2ರಲ್ಲಿ ಮಕ್ಕಳ ತಟ್ಟೆಗೆ ಮೊಟ್ಟೆ ಹಾಕಿ ಬಳಿಕ ವಾಪಸ್ ಕಸಿದುಕೊಂಡ ಘಟನೆಗೆ ಸಂಬಂಧಿಸಿದಂತೆ ಕ್ಷೇತ್ರ ವ್ಯಾಪ್ತಿಯ ಕನಕಗಿರಿ ವಲಯದ ಸಿಡಿಪಿಒ ಅವರನ್ನೂ ಅಮಾನತು ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆದೇಶಿಸಿದ್ದಾರೆ.
ಈಗಾಗಲೇ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯನ್ನು ಗೌರವಧನ ಸೇವೆಯಿಂದ ಅಮಾನತು ಮಾಡಲಾಗಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಹೆಬ್ಬಾಳಕರ್ ‘ಅಂಗನವಾಡಿಯಲ್ಲಿ ಮಕ್ಕಳ ತಟ್ಟೆಯಿಂದ ಮೊಟ್ಟೆ ಕಸಿದ ಪ್ರಕರಣಕ್ಕೆ ಸಂಬಂಧಿಸಿ ಸಿಡಿಪಿಒ ವಿರೂಪಾಕ್ಷಿ ಅವರನ್ನು ಅಮಾನತು ಮಾಡಲು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಕೊಪ್ಪಳ ಜಿಲ್ಲಾ ಉಪ ನಿರ್ದೇಶಕರಿಗೂ ನೋಟಿಸ್ ನೀಡಲಾಗುವುದು’ ಎಂದಿದ್ದಾರೆ. ಪ್ರಕರಣದ ಕುರಿತು ತನಿಖೆಗೂ ಅವರು ಆದೇಶಿಸಿದ್ದಾರೆ.
‘ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲೇಬೇಕು. ಕೆಳ ಹಂತದಿಂದ ಇಲಾಖೆಯಲ್ಲಿ ಸುಧಾರಣೆ ತರಬೇಕು ಅಂತ ಕಷ್ಟ ಪಡುತ್ತಿದ್ದೇನೆ. ಪೌಷ್ಟಿಕ ಆಹಾರ, ಗುಣಮಟ್ಟದ ಶಿಕ್ಷಣ ಅಂಗನವಾಡಿಯ ಮೂಲ ಉದ್ದೇಶ. ಆದರೆ, ಬಡಮಕ್ಕಳಿಗೆ ಅನ್ಯಾಯ ಆಗಲು ಬಿಡುವುದಿಲ್ಲ’ ಎಂದಿದ್ದಾರೆ.
‘ಮಕ್ಕಳಿಗೆ ಊಟ ಬಡಿಸುವ ವೇಳೆ ಕಡ್ಡಾಯವಾಗಿ ವಿಡಿಯೊ ಚಿತ್ರೀಕರಣ ಮಾಡಬೇಕು ಎಂದು ಸೂಚಿಸಲಾಗಿತ್ತು. ಬಳಿಕ ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ವ್ಯಾಟ್ಸ್ ಆ್ಯಪ್ ಮೂಲಕ ಇಲಾಖೆಯ ಗ್ರೂಪ್‌ಗಳಲ್ಲಿ ವಿಡಿಯೊ ಅಪ್‌ಲೋಡ್ ಆಗಬೇಕು ಎಂದು ಹೇಳಿದ್ದೆವು. ಇದೇ ರೀತಿಯ ಪ್ರಕರಣ ಕಳೆದ ಬಾರಿಯೂ ಬಯಲಾಗಿತ್ತು. ನಂತರ ವಿಡಿಯೊ ಚಿತ್ರೀಕರಣ ಕಡ್ಡಾಯ ಮಾಡಿದ್ದೆವು. ಹಾಗೆ ಮಾಡಿದ್ದರಿಂದಲೇ ಈಗ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ತಿಳಿಸಿದ್ದಾರೆ.