ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಶದ್ಧಾ, ಭಕ್ತಿಯ ‘ಈದ್ ಉಲ್ ಫಿತ್ರ್’

ಜಿಲ್ಲೆಯ ವಿವಿಧೆಡೆ ಆಚರಣೆ: ಕೊಪ್ಪಳ ನಗರದ ಹುಲಿಕೆರೆ, ನಗರಸಭೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ
Last Updated 3 ಮೇ 2022, 13:05 IST
ಅಕ್ಷರ ಗಾತ್ರ

ಕೊಪ್ಪಳ: ತ್ಯಾಗ, ಪ್ರೀತಿ ಹಾಗೂ ಶಾಂತಿಯ ಸಂಕೇತವಾದ ಈದ್-ಉಲ್-ಫಿತ್ರ್ ಅನ್ನು ಮುಸ್ಲಿಮರು ಮಂಗಳವಾರ ಸಂಭ್ರಮದಿಂದ ಆಚರಿಸಿದರು.

ಕೋವಿಡ್ ಕಾರಣದಿಂದಾಗಿ ಎರಡು ವರ್ಷ ಹಬ್ಬ ಕಳೆಗುಂದಿತ್ತು. ಮನೆಗಳಿಗೆ ಸೀಮಿತವಾಗಿತ್ತು. ಈ ಬಾರಿ ಸೋಂಕಿನ ಆತಂಕ ತಗ್ಗಿದ್ದರಿಂದಾಗಿ ಹೆಚ್ಚಿನ ಕಳೆ ಬಂದಿತ್ತು. ನಗರವೂ ಸೇರಿ ಜಿಲ್ಲೆಯಾದ್ಯಂತ ಮುಸ್ಲಿಮರ ಮನೆಗಳಲ್ಲಿ ಸಡಗರ ಮನೆ ಮಾಡಿತ್ತು.

ನಗರದಹುಲಿಕೆರೆ ಬಳಿ ಇರುವ ಈದ್ಗಾ ಮೈದಾನಕ್ಕೆ ನೂರಾರು ಸಂಖ್ಯೆಯಲ್ಲಿ ಬಂದಿದ್ದ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮಕ್ಕಳು ಆಟಿಕೆಗಳನ್ನು ಖರೀದಿಸಿ, ತೆಗೆಸಿಕೊಂಡು ಸಂಭ್ರಮಿಸಿದರು.

ನಗರಸಭೆಯ ಪಕ್ಕದಲ್ಲಿರುವ ಸಾರ್ವಜನಿಕ ಈದ್ಗಾ ಮೈದಾನದಲ್ಲಿ ಕೂಡಾ ಪ್ರಾರ್ಥನೆ ನಡೆಯಿತು.

ಇಸ್ಲಾಂ ಧರ್ಮ ಗುರು ಇಮಾಮ್‌ ಮೌಲಾನಾಮುಫ್ತಿನಜೀರ್ ಅಹಮ್ಮದ್ ಸಾಬ್ ಸಂದೇಶ ನೀಡಿ, ‘ಎಲ್ಲ ಧರ್ಮಗಳ ಆಶಯವೂ ಶಾಂತಿ, ಸೌಹಾರ್ದದಿಂದ ಇರಬೇಕು ಎನ್ನುವುದನ್ನು ತಿಳಿಸುವುದೇ ಆಗಿದೆ. ಅದನ್ನು ಎಲ್ಲರೂ ಪಾಲಿಸಬೇಕು. ಯಾವುದೇ ಧರ್ಮವೂ ಇನ್ನೊಂದು ಧರ್ಮಕ್ಕೆ ಕೇಡು ಬಯಸುವುದಿಲ್ಲ. ಎಲ್ಲ ಧರ್ಮಗಳೂ ಸಹೋದರತ್ವವನ್ನೇ ಸಾರಿವೆ ಮತ್ತು ಉತ್ತಮ ವಿಚಾರಗಳನ್ನು ಹೇಳಿವೆ. ಈ ಸೌಹಾರ್ದ ಪರಂಪರೆಯನ್ನು ಎಲ್ಲರೂ ಮುಂದುವರಿಸಿಕೊಂಡು ಹೋಗಬೇಕು’ ಎಂದು ಸಲಹೆ ನೀಡಿದರು.

‘ಸಮಾಜದಲ್ಲಿ ಪ್ರತಿಯೊಬ್ಬರೂ ಸಹಬಾಳ್ವೆಯಿಂದ ಬದುಕಬೇಕು’ ಎಂದು ಸಂದೇಶ ಸಾರಿದರು.

ಜೆಪಿ ಮಾರುಕಟ್ಟೆ,ಸಿಂಪಿಲಿಂಗಣ್ಣ ರಸ್ತೆ, ರೈಲ್ವೆ ಸ್ಟೇಶನ್ ರಸ್ತೆ,ಕೋಟೆ ಪ್ರದೇಶ, ಹಿರೇಸಿಂದೋಗಿ, ಭಾಗ್ಯನಗರ ಪ್ರದೇಶಗಳಲ್ಲಿ ವಾಸಿಸುವ ಮುಸ್ಲಿಮರು ಅಲ್ಲಾನನ್ನು ಸ್ಮರಿಸುತ್ತ ಈದ್ಗಾ ಮೈದಾನದತ್ತ ಹೆಜ್ಜೆ ಹಾಕಿದರು. ಪ್ರಾರ್ಥನೆ ಬಳಿಕ ಪರಸ್ಪರರು ‘ಈದ್-ಮುಬಾರಕ್’ ಎಂದು ಶುಭಾಶಯ ವಿನಿಮಯ ಮಾಡಿಕೊಂಡರು. ಹೊಸಬಟ್ಟೆ ಧರಿಸಿ–ಹಬ್ಬದೂಟ ಸವಿದು ಸಂಭ್ರಮಿಸಿದರು.

ನಗರದ ಎಲ್ಲ ಮಸೀದಿಗಳಲ್ಲೂ ಸಾಮೂಹಿಕ ಪ್ರಾರ್ಥನೆಗೆ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 9.30ಕ್ಕೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಆ ಭಾಗದ ಮುಸ್ಲಿಮರು ಪಾಲ್ಗೊಂಡಿದ್ದರು. ‘ಸರ್ವರ ಬಾಳು ಕೂಡ ಸಮೃದ್ಧವಾಗಲಿ’ ಎಂದು ಪ್ರಾರ್ಥಿಸಿದರು.

ರಂಜಾನ್ ಮಾಸದ ಅಂಗವಾಗಿ ಒಂದು ತಿಂಗಳು ಉಪವಾಸ ವ್ರತ(ರೋಜಾ) ಕೈಗೊಂಡಿದ್ದವರು, ಹಬ್ಬದ ಅಂಗವಾಗಿ ಬಡವರಿಗೆ ದಾನ(ಜಕಾತ್) ಮಾಡಿ ಸಂಭ್ರಮಿಸಿದರು. ಮಧ್ಯಾಹ್ನ ಮುಸ್ಲಿಮರ ಮನೆಗಳಲ್ಲಿ ಭೋಜನ ಕೂಟ ಆಯೋಜಿಸಲಾಗಿತ್ತು. ಸ್ನೇಹಿತರು, ಹಿತೈಷಿಗಳು ಭೇಟಿ ನೀಡಿ ಶುಭ ಕೋರಿದರು. ಕೆಲವರು ಸಂಜೆ ದರ್ಗಾಗಳಿಗೆ ಭೇಟಿ ಕೊಟ್ಟರು.

ವಿವಿಧ ಪಕ್ಷಗಳ ಮುಖಂಡರು ಪ್ರಾರ್ಥನೆಯಲ್ಲಿ ಪಾಲ್ಗೊಂಡು ಶುಭಾಶಯ ಕೋರಿದರು. ಹಿಂದೂಗಳು ತಂಪು ಪಾನೀಯ, ಪಾನಕ, ಮಜ್ಜಿಗೆಗಳನ್ನು ವಿತರಿಸಿದರು. ಮರ್ದಾನ್ ಅಲಿ ದರ್ಗಾ ಸೇರಿದಂತೆ ಮುಸ್ಲಿಮರ ಪವಿತ್ರ ದರ್ಗಾಗಳಿಗೆ ಭೇಟಿ ನೀಡಿ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT