ಕೊಪ್ಪಳ: ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಗೆ ದಿನಗಣನೇ ಶುರುವಾಗಿರುವ ಬೆನ್ನಲ್ಲೇ ಕೊಪ್ಪಳ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್‌ಗೆ ಭಾರಿ ಪೈಪೋಟಿ ಎದುರಾಗಿದೆ. ಪಕ್ಷದ ಒಳಗಿನ ಹಾಗೂ ಹೊರಗಿನ ಕೆಲ ಆಕಾಂಕ್ಷಿಗಳು ಟಿಕೆಟ್ ಗಿಟ್ಟಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ ಮಹಾಂತಯ್ಯನ ಮಠ ಅವರನ್ನು ನಿಯೋಜಿತ ಅಭ್ಯರ್ಥಿ ಎಂದು ಪಕ್ಷ ಈಗಾಗಲೇ ಹೇಳಿದೆಯಾದರೂ, ಇತ್ತೀಚೆಗೆ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಪಕ್ಷ ನನಗೇ ಟಿಕೆಟ್ ನೀಡುವುದಾಗಿ ಈಗಾಗಲೇ ಖಚಿತವಾಗಿ ಹೇಳಿದೆ ಎಂದು ಮಹಾಂತಯ್ಯನಮಠ ಹೇಳುತ್ತಿದ್ದು, ಈಗಾಗಲೇ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಸಭೆಗಳನ್ನು ನಡೆಸಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ಆರಂಭಿಸಿದ್ದಾರೆ. ಪಕ್ಷ ಪಂಚರತ್ನ ಯಾತ್ರೆಯ ಪ್ರಚಾರ ಸಾಮಗ್ರಿಗಳನ್ನು ಅವರಿಗೆ ಕಳುಹಿಸಿಕೊಟ್ಟಿದೆ.
ಮಹಾಂತಯ್ಯನಮಠ ಅವರಿಗೆ ಸ್ಪರ್ಧೆಯೊಡ್ಡುವಂತೆ ಹಲವು ಜನ ಆಕಾಂಕ್ಷಿಗಳು ಟಿಕೆಟ್ ಪಡೆಯಲು ಲಾಬಿ ನಡೆಸಿದ್ದಾರೆ ಎನ್ನುವುದು ಕೂಡ ಕ್ಷೇತ್ರದಲ್ಲಿ ಗುಟ್ಟಾಗಿ ಉಳಿದಿಲ್ಲ. ಕಾಂಗ್ರೆಸ್ ತೊರೆದು ಕೆಲ ತಿಂಗಳುಗಳ ಹಿಂದೆ ಜೆಡಿಎಸ್ ಸೇರಿರುವ ಸಾಧಿಕ್ ಅತ್ತಾರ್ ತಮ್ಮ ತಂಡವನ್ನು ಕಟ್ಟಿಕೊಂಡು ಪ್ರಚಾರ ನಡೆಸುದ್ದು, ಟಿಕೆಟ್ ಪಡೆಯಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ನಗರದ ಹೆಸರಾಂತ ವೈದ್ಯ ಮಹೇಶ ಗೋವನಕೊಪ್ಪ ಇತ್ತೀಚೆಗೆ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ಟಿಕೆಟ್ ಮೇಲೆ ಅವಲಂಬನೆ?: ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಬಿಜೆಪಿ ಯಾರಿಗೆ ಅವಕಾಶ ಕೊಡುತ್ತದೆ ಎನ್ನುವುದರ ಮೇಲೆ ಅವಲಂಬಿತವಾಗಿದೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ ಏಕೈಕ ಆಕಾಂಕ್ಷಿಯಾದ ಕಾರಣ ಅವರಿಗೇ ಪಕ್ಷ ಟಿಕೆಟ್ ನೀಡಲಿದೆ ಎನ್ನುವುದರಲ್ಲಿ ಅನುಮಾನವೇನಿಲ್ಲ. ಆದರೆ, ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದೆ.
ಸಂಸದ ಸಂಗಣ್ಣ ಕರಡಿ ಅಥವಾ ಮುಖಂಡ ಸಿ.ವಿ. ಚಂದ್ರಶೇಖರ್ ಅವರಿಗೆ ಬಿಜೆಪಿ ಟಿಕೆಟ್ ನೀಡಲಿದೆ ಎನ್ನುವುದು ರಾಜಕೀಯ ಪಡಸಾಲೆಯ ಚರ್ಚೆ. ಚಂದ್ರಶೇಖರ್ ಈಗಾಗಲೇ ಕ್ಷೇತ್ರ ವ್ಯಾಪ್ತಿಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ನಿರಂತರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಸಂಸದರು ಪಕ್ಷದ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟ ಹೇಳಿಕೆ ನೀಡಿರುವ ಸಂಗಣ್ಣ ಕರಡಿ ‘ನಾನು ಟಿಕೆಟ್ ಬೇಕೆಂದು ಕೇಳಿಲ್ಲ. ಪಕ್ಷ ಅವಕಾಶ ಕೊಟ್ಟರೆ ಮಾತ್ರ ಸ್ಪರ್ಧಿಸುವೆ. ಇಲ್ಲವಾದರೆ ಸಂಸದನಾಗಿ ನನ್ನ ಕೆಲಸ ಮುಂದುವರಿಸುವೆ’ ಎಂದಿದ್ದಾರೆ.
ಸಿ.ವಿ. ಚಂದ್ರಶೇಖರ್ ಅವರ ಬೀಗರಾದ ಸುರೇಶ ಭೂಮರಡ್ಡಿ ಮೊದಲು ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದರು. ಈಗ ಆ ಪಕ್ಷದಿಂದ ದೂರ ಉಳಿದಿದ್ದು, ಮುಂದಿನ ನಡೆ ಗೌಪ್ಯವಾಗಿದೆ. ಚಂದ್ರಶೇಖರ್ ಅವರಿಗೇ ಬಿಜೆಪಿ ಟಿಕೆಟ್ ನೀಡಿದರೆ ಬೀಗರ ಪರವಾಗಿ ಓಡಾಡಿ ಕೆಲಸ ಮಾಡುವುದು, ಇಲ್ಲವಾದರೆ ತಾವೇ ಖುದ್ದು ಜೆಡಿಎಸ್‌ನಿಂದ ಸ್ಪರ್ಧೆ ಮಾಡುವ ಲೆಕ್ಕಾಚಾರದಲ್ಲಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸುರೇಶ ‘ನಮ್ಮ ಬೀಗರಾದ ಸಿ.ವಿ. ಚಂದ್ರಶೇಖರ್ ಅವರಿಗೆ ಟಿಕೆಟ್ ಸಿಕ್ಕರೆ ಗೆಲುವಿಗಾಗಿ ಓಡಾಡುವೆ. ಟಿಕೆಟ್ ಸಿಗದಿದ್ದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ನಿಶ್ಚಿತ. ಆದರೆ, ಯಾವ ಪಕ್ಷದಿಂದ ಎನ್ನುವುದನ್ನು ತೀರ್ಮಾನಿಸಿಲ್ಲ’ ಎಂದರು.
ಜೆಡಿಎಸ್ ಕ್ಷೇತ್ರದಲ್ಲಿ ಹಿಂದಿನ ಎರಡು ಚುನಾವಣೆಗಳಿಂದ ಮತಗಳಿಕೆಯ ಪ್ರಮಾಣ ಕಡಿಮೆಯಾಗುತ್ತಲೇ ಬಂದಿದೆ. 2013ರಲ್ಲಿ ಕಣಕ್ಕಿಳಿದಿದ್ದ ಪ್ರದೀಪ ವಿರೂಪಾಕ್ಷಗೌಡ 6,811 ಮತಗಳನ್ನು, 2018ರಲ್ಲಿ ಕೆ.ಎಂ. ಸೈಯದ್ 4,185 ಮತಗಳನ್ನು ಪಡೆದಿದ್ದರು. ಹೀಗಾಗಿ ಈ ಬಾರಿ ಟಿಕೆಟ್ ಗಿಟ್ಟಿಸುವವರು ಎದುರಾಳಿ ಪಕ್ಷಗಳನ್ನು ಎದುರಿಸುವ ಜೊತೆಗೆ ಪಕ್ಷದ ’ಆಂತರಿಕ ಸ್ನೇಹಿತರ ಹರ್ಡಲ್ಸ್’ ದಾಟುವ ಸವಾಲು ಎದುರಿಸಬೇಕಾಗಿದೆ.
ನನ್ನನ್ನು ನಿಯೋಜಿತ ಅಭ್ಯರ್ಥಿ ಎಂದು ಈಗಾಗಲೇ ಪಕ್ಷ ಘೋಷಣೆ ಮಾಡಿದೆ. ಪಕ್ಷ ಪ್ರಚಾರ ಸಾಮಗ್ರಿಗಳನ್ನು ಕಳುಹಿಸಿದೆ. ಟಿಕೆಟ್ ನನಗೇ ಖಚಿತವಾಗಲಿದೆ. ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ.
-ವೀರೇಶ ಮಹಾಂತಯ್ಯಮಠ, ಜೆಡಿಎಸ್ ನಿಯೋಜಿತ ಅಭ್ಯರ್ಥಿ
ಈಗಾಗಲೇ ಪಕ್ಷ ನನಗೆ ಟಿಕೆಟ್ ಅಂತಿಮಗೊಳಿಸಿದ್ದು, ಈ ವಾರದಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಿದೆ. ಕುಮಾರಸ್ವಾಮಿ ಯುವ ಬ್ರಿಗೇಡ್ ಕ್ಷೇತ್ರದಲ್ಲಿ ಸರ್ವೆ ನಡೆಸಿದ್ದು, ಅದರಲ್ಲಿ ನನಗೆ ಬಹುಮತ ಲಭಿಸಿದೆ.
-ಸಾಧಿಕ್ ಅತ್ತಾರ್, ಟಿಕೆಟ್ ಆಕಾಂಕ್ಷಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.