ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾ ಕಂತು ತುಂಬಿದ ರೈತರಿಗೆ ಅನ್ಯಾಯ: ಆರೋಪ

ಬೆಳೆ ವಿಮಾ ಪರಿಹಾರ ಒದಗಿಸಲು ಅಧಿಕಾರಿಗಳ ನಿರ್ಲಕ್ಷ್ಯ
Last Updated 8 ಜುಲೈ 2018, 17:56 IST
ಅಕ್ಷರ ಗಾತ್ರ

ಯಲಬುರ್ಗಾ: ‘ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ವಿಮಾ ಕಂಪನಿ ನೌಕರರು ಮಾಡಿದ ತಪ್ಪಿನಿಂದ ವಿಮಾ ಕಂತು ತುಂಬಿದ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರಿಗೆ ನೀಡಬೇಕಿದ್ದ ಕಳೆದ ವರ್ಷದ ಬೆಳೆ ವಿಮೆ ಈವರೆಗೂ ಬಂದಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗಿದೆ’ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸುಭಾಸ ಮಾದಿನೂರು ಆರೋಪಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ವರ್ಷ ಮಂಜೂರಾಗುವ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರ ವಹಿಸಿ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

‘ರೈತರಿಗೆ ಇರುವ ಯಾವುದೇ ಯೋಜನೆಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ. ಬರಗಾಲದಿಂದ ಬೇಸತ್ತು ಸಾಲ ಮಾಡಿ ವಿಮಾ ಹಣ ತುಂಬಿದ ರೈತರಿಗೆ ಅನ್ಯಾಯವಾದರೆ ಹೇಗೆ’ ಎಂದು ಸದಸ್ಯ ಶಿವಕುಮಾರ ಆದಾಪೂರ ಪ್ರಶ್ನಿಸಿದರು. ಹಿಂಗಾರು ಹಂಗಾಮಿಗೆ ₹24.4ಕೋಟಿ ಮಂಜೂರಾಗಿದ್ದು, ಈಗಾಗಲೇ ವಿಮೆ ತುಂಬಿದ ರೈತರ ಬ್ಯಾಂಕ್ ಖಾತೆ ವಿವರ ಸಂಗ್ರಹಿಸಲಾಗಿದ್ದು ಯಾವುದೇ ರೀತಿಯಲ್ಲಿ ಲೋಪವಾಗದಂತೆ ಕ್ರಮ ಕೈಗೊಳ್ಳಲಾಗುವುದು. ಕಳೆದ ಸಾಲಿನ ಬಾಕಿ ವಿಮಾ ಹಣ ಮಂಜೂರಾತಿಗೆ ಪತ್ರ ಬರೆಯಲಾಗಿದೆ. ಕಳೆದ ವರ್ಷದಿಂದಲೂ ಖಾಸಗಿ ಕಂಪನಿಯಗಳು ನಿರ್ವಹಸುತ್ತಿವೆ ಎಂದು ಕೃಷಿ ಅಧಿಕಾರಿ ರಶೀದ್ ಸಭೆಯ ಗಮನಕ್ಕೆ ತಂದರು.

‘ಸಮವಸ್ತ್ರ ಹಾಗೂ ಶೂ ಪೂರೈಕೆಗೆ ಸರ್ಕಾರದಿಂದ ಮಂಜೂರಾದ ಅನುದಾನವನ್ನು ಎಸ್‍ಡಿಎಂಸಿ ಖಾತೆಗೆ ಜಮಾ ಮಾಡಲಾಗಿದೆ. ಗುಣಮಟ್ಟದ ಸಾಮಗ್ರಿ ವಿತರಣೆಗೆ ಸೂಚಿಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ವಟಗಲ್ಲ ಹೇಳಿದರು.

ಆರೋಗ್ಯ ಇಲಾಖೆಯ ಸಿಬ್ಬಂದಿ ಸಭೆಯ ಉದ್ದೇಶ ಅರಿಯದೆ ಬೇರೆ ಬೇರೆ ವಿಷಯ ಮಂಡಿಸಿದರು. ಇದಕ್ಕೆ ಆಕ್ಷೇಪಿಸಿದ ತಾಲ್ಲೂಕು ಪಂಚಾಯಿತಿ ಇಒ ತಿಮ್ಮಪ್ಪ, ತಾಲ್ಲೂಕು ಪಂಚಾಯಿತಿಯಿಂದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಮಂಜೂರಾದ ಅನುದಾನ ಎಷ್ಟು, ಅದನ್ನು ಯಾವ ಯಾವ ಕೆಲಸಕ್ಕೆ ಎಷ್ಟೆಷ್ಟು ತಗೆದುಕೊಂಡಿದ್ದೀರಿ ಈದರ ಕ್ರಿಯಾಯೋಜನೆ ಇದ್ದರೆ ಸಲ್ಲಿಸಿ ಅನುಷ್ಠಾನಕ್ಕೆ ಅನುಮೋದನೆ ಸಲ್ಲಿಸಿ ಸಭೆಯಲ್ಲಿ ಒಪ್ಪಿಗೆ ಪಡೆಯಬೇಕು ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ ಈ ಬಗ್ಗೆ ಮಾಹಿತಿಯಿಲ್ಲ. ವೈದ್ಯಾಧಿಕಾರಿಗಳು ರಜೆಯಲ್ಲಿದ್ದಾರೆ ನಂತರ ತಿಳಿಸುವುದಾಗಿ ಹೇಳಿದರು. ವಿವಿಧ ಇಲಾಖೆಯ ಅಧಿಕಾರಿಗಳು ಕ್ರಿಯಾ ಯೋಜನೆ ಸಲ್ಲಿಸಿ ಅನುಮೋದನೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT