ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಐ ಕಾರ್ಯಕರ್ತನ ವಿರುದ್ಧ ಎಫ್‌ಐಆರ್‌

ಜಿಲ್ಲಾ ಪಂಚಾಯಿತಿ ಸಿಬ್ಬಂದಿಗೆ ಜೀವ ಬೆದರಿಕೆ ಒಡ್ಡಿದ ಆರೋಪ
Published 10 ಜನವರಿ 2024, 8:40 IST
Last Updated 10 ಜನವರಿ 2024, 8:40 IST
ಅಕ್ಷರ ಗಾತ್ರ

ಕೊಪ್ಪಳ: ಆರ್‌ಟಿಐ ಕಾರ್ಯಕರ್ತ ಕೊಪ್ಪಳ ತಾಲ್ಲೂಕಿನ ಇರಕಲ್ಲಗಡ ಗ್ರಾಮದ ಎಚ್‌.ಎಸ್‌.ಲಿಂಗದಳ್ಳಿ ಎಂಬುವರ ವಿರುದ್ಧ ಸರ್ಕಾರಿ ಅಧಿಕಾರಿಗೆ ಬೆದರಿಕೆಯೊಡ್ಡಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪ ಕೇಳಿ ಬಂದಿದೆ.

ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ವಿಷಯ ನಿರ್ವಾಹಕರಾಗಿರುವ ಜಮೀಲ್‌ ಅಹ್ಮದ್‌ ಅವರು ಕೊಪ್ಪಳ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು ‘ಲಿಂಗದಳ್ಳಿ ವಿನಾಕಾರಣ ನನಗೆ ತೊಂದರೆ ಕೊಡುತ್ತಿದ್ದಾರೆ. ಬೆದರಿಕೆಯೊಡ್ಡಿ ಹಣ ನೀಡುವಂತೆ ಪೀಡಿಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ಜಮೀಲ್‌ ಅಹ್ಮದ್‌ ಮೊದಲು ಕಾರಟಗಿ ತಾಲ್ಲೂಕಿನ ಬೆನ್ನೂರು ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಆಗಿದ್ದರು. ಡಿ.1ರಂದು ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿದ್ದಾಗ ಲಿಂಗದಳ್ಳಿ ಫೋನ್‌ ಕರೆ ಮಾಡಿ ‘ಪಿಡಿಒ ಆಗಿ ಕೆಲಸ ಮಾಡುವಾಗ ನರೇಗಾ ಯೋಜನೆಯ ಬಿಒಸಿ ಬಿಲ್ಲಿಗೆ ಸಂಬಂಧಿಸಿದಂತೆ ಕಾನೂನು ಬಾಹಿರವಾಗಿ ಹಣ ವರ್ಗಾವಣೆ ಮಾಡಲಾಗಿದೆ. ನಾನು ಕೇಳಿದಷ್ಟು ಹಣ ನೀಡದಿದ್ದರೆ ನೆಮ್ಮದಿಯಿಂದ ಜೀವನ ಮಾಡಲು ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾನೆ’ ಎಂದು ಆರೋಪಿಸಿದ್ದಾರೆ.

‘ಇದೇ ವಿಷಯವಾಗಿ ಲಿಂಗದಳ್ಳಿ ಕಚೇರಿಗೆ ಬಂದು ನನ್ನ ಭಯದಿಂದಾಗಿ ಎಲ್ಲ ಪಿಡಿಒಗಳು ಹಣ ನೀಡಿದ್ದು, ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ. ನನಗೆ ಹಣ ನೀಡಿದಿದ್ದರೆ ಲೋಕಾಯುಕ್ತಕ್ಕೆ ದೂರು ನೀಡುತ್ತೇನೆ‘ ಎಂದು ಹೆದರಿಸಿದ್ದಾನೆ ಎಂದು ಆಪಾದಿಸಿದ್ದಾರೆ.

ಇಲ್ಲಿನ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಸರ್ಕಾರಿ ನೌಕರರಿಗೆ ಕಿರುಕುಳ ಹಾಗೂ ಬೆದರಿಕೆ ಒಡ್ಡುತ್ತಿರುವ ಆರೋಪದಡಿ ಇತ್ತೀಚೆಗೆ ಇಬ್ಬರ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆ.  

ಮನೆಯಲ್ಲಿ ಕಳವು: ಇಲ್ಲಿನ ಶಿವಶಾಂತವೀರ ನಗರದಲ್ಲಿ ವಾಸವಾಗಿರುವ ಬ್ಯಾಂಕ್‌ನ ನಿವೃತ್ತ ನೌಕರ ಮಲ್ಲಯ್ಯ ಹಿರೇಮಠ ಎಂಬುವರ ಮನೆಯಲ್ಲಿ ಇತ್ತೀಚೆಗೆ ಕಳ್ಳತನ ನಡೆದಿದೆ.

ಕುಟುಂಬದವರು ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಷ್ಟಗಿಗೆ ಹೋದಾಗ ಈ ಘಟನೆ ನಡೆದಿದೆ. ಮನೆಯ ಬಾಗಿಲು ಮುರಿದು ಬೆಡ್‌ರೂಮ್‌ನಲ್ಲಿದ್ದ ₹4.85 ಲಕ್ಷ ಮೌಲ್ಯದ 15.6 ತೊಲೆ ಚಿನ್ನಾಭರಣ ಮತ್ತು ₹6.66 ಲಕ್ಷ ನಗದು ದೋಚಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ ಕಳವು: ಕೊಪ್ಪಳ ತಾಲ್ಲೂಕಿನ ದೇವಲಾಪುರ ಗ್ರಾಮದ ಹೊಲದಲ್ಲಿ ನಿರ್ಮಿಸಲಾಗಿರುವ ಮನೆಯ ಮುಂದೆ ನಿಲ್ಲಿಸಲಾಗಿದ್ದ ಬೈಕ್‌ ಕಳವಾಗಿದೆ. ಈ ಕುರಿತು ಸಣ್ಣ ಹನುಮಪ್ಪ ಇಲ್ಲಿನ ಗ್ರಾಮೀಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಮನೆಯ ಮುಂದೆ ನಿಲ್ಲಿಸಲಾಗಿದ್ದ ಬೈಕ್‌ ಕಳ್ಳತನ ಮಾಡಿದ ಪ್ರಕರಣ ಕುಣಿಕೇರಿಯಲ್ಲಿಯೂ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT