ಶನಿವಾರ, ಫೆಬ್ರವರಿ 27, 2021
30 °C
ಮೊದಲ ಹಂತದ ಕೋವಿಡ್‌ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ: ಅಭಿನಂದನೆ

ಆರೋಗ್ಯ ಸಿಬ್ಬಂದಿಗೆ ಮೊದಲ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಹಾಗೂ ಕೊಪ್ಪಳ ವೈದ್ಯಕೀಯ ಕಾಲೇಜು ಆಸ್ಪತ್ರೆ ವತಿಯಿಂದ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಲಸಿಕೆ ನೀಡಲು ಎಲ್ಲ ವ್ಯವಸ್ಥೆ ಮಾಡಲಾಗಿತ್ತು.

ಮೊದಲ ಲಸಿಕೆಯನ್ನು ಜಿಲ್ಲಾ ಬೋಧಕ ಆಸ್ಪತ್ರೆಯ ಡಿ-ಗ್ರೂಪ್ ನೌಕರ ಬಸವರಾಜ.ಬಿ.ಎಲ್. ಅವರಿಗೆ ನೀಡಲಾಯಿತು. ಲಸಿಕೆ ನೀಡುವ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ ಧೈರ್ಯ ತುಂಬಿದರು. ಬಳಿಕ ಹೂ ನೀಡಿ, ಅಭಿನಂದನೆ ಸಲ್ಲಿಸಿದರು.

ಲಸಿಕೆ ನೀಡಿದ ಬಳಿಕ ಬಸವರಾಜ ಬಿ.ಎಲ್ ಅವರಿಗೆ ಥರ್ಮಲ್ ಸ್ಕ್ಯಾನಿಂಗ್‌ ಹಾಗೂ ರಕ್ತದೊತ್ತಡ ಪರೀಕ್ಷೆ ಮಾಡಲಾಯಿತು. ಕೆಲಕಾಲ ನಿಗಾ ವಹಿಸಲಾಯಿತು. ನಂತರ ಜಿಲ್ಲಾ ಬೋಧಕ ಆಸ್ಪತ್ರೆಯ ಇನ್ನೊಬ್ಬ ಸಿಬ್ಬಂದಿ ಆಶಾಬಿ, ನರ್ಸಿಂಗ್ ಆಫೀಸರ್‌ಗಳಾದ ಬಾಳಜ್ಜು ಹಾಗೂ ದೀಪಾ ಸೋಂಪುರ, ಸಮುದಾಯ ವೈದ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶರಣಕುಮಾರ ಹೊಳಿಯಾಚೆ, ದಂತ ವೈದ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀನಿವಾಸ ಅವರಿಗೆ ಕೋವಿಡ್ ಲಸಿಕೆ ನೀಡುವುದರೊಂದಿಗೆ ‘ಕೋವಿಡ್-19 ವ್ಯಾಕ್ಸಿನೇಶನ್ ಲಸಿಕಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಪ್ರಧಾನಿ ಕಾರ್ಯಕ್ರಮ ವೀಕ್ಷಣೆ: ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿಯವರು ಚಾಲನೆ ನೀಡಿದ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿಂದು ನೇರವಾಗಿ ವೀಕ್ಷಣೆ ಮಾಡಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಉಪಾಧ್ಯಕ್ಷೆ ಬೀನಾ ಗೌಸ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು ಟಿ., ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಬಿ.ದಾನರೆಡ್ಡಿ, ಕೊಪ್ಪಳ ಕಿಮ್ಸ್ ನಿರ್ದೇಶಕ ವಿಜಯನಾಥ ಪಾಟೀಲ್ ಇಟಗಿ ಸೇರಿದಂತೆ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು ಇದ್ದರು.

‘ಮಾರ್ಗಸೂಚಿ ಪಾಲನೆ ಮುಂದುವರಿಸಿ’
ಯಲಬುರ್ಗಾ:
‘ಕೊರೊನಾ ನಿಯಂತ್ರಣಕ್ಕೆ ಭಾರತೀಯ ಸಂಶೋಧಕರು ಲಸಿಕೆ ಕಂಡು ಹಿಡಿದಿದ್ದಾರೆ. ಅದನ್ನು ಪೂರೈಕೆ ಮಾಡಿದ ಕೇಂದ್ರ ಸರ್ಕಾರದ ಕ್ರಮದಿಂದ ನಾಡಿನ ಜನತೆ ನಿಟ್ಟುಸಿರು ಬಿಡುವಂತಾಗಿದೆ’ ಎಂದು ಶಾಸಕ ಹಾಲಪ್ಪ ಆಚಾರ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಕೋವಿಡ್‌ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮೊದಲ ಲಸಿಕೆಯನ್ನು ಬಸವರಾಜ ಮಹಾಮನಿ ಅವರಿಗೆ ನೀಡಲಾಯಿತು.

‘ಕಳೆದ ಏಳೆಂಟು ತಿಂಗಳಿಂದಲೂ ಆತಂಕ ಸೃಷ್ಟಿಸಿದ್ದ ಕೊರೊನಾ ಸೋಂಕು ಈಗ ನಿಯಂತ್ರಣದಲ್ಲಿದೆ. ಅದರ ಸಂಪೂರ್ಣ ನಿರ್ಮೂಲನೆಯ ಉದ್ದೇಶದಿಂದ ಔಷಧಿ ಕಂಡು ಹಿಡಿಯಲಾಗಿದೆ. ಇನ್ನು ಮುಂದೆ ಜನರು ಯಾವುದೇ ರೀತಿಯಲ್ಲಿ ಕೋವಿಡ್‍ಗೆ ಭಯ ಪಡುವ ಅಗತ್ಯವಿಲ್ಲ. ಆದರೂ ಆರೋಗ್ಯ ಇಲಾಖೆಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿರಬೇಕು’ ಎಂದರು.

‘ಪ್ರಧಾನಿ ನರೇಂದ್ರ ಮೋದಿಯವರ ಪರಿಶ್ರಮದಿಂದ ದೇಶದ ವಿಜ್ಞಾನಿಗಳು ಲಸಿಕೆ ಕಂಡು ಹಿಡಿಯಲು ಸಾಧ್ಯವಾಗಿದೆ. ಲಸಿಕೆ ಹಂಚಿಕೆಯೊಂದಿಗೆ ನಿಯಂತ್ರಣಕ್ಕೆ ದಿಟ್ಟ ಕ್ರಮ ಕೈಗೊಂಡಿದ್ದು, ಕೂಡ ವೇಗದ ಗತಿಯಲ್ಲಿದೆ. ಕೋವಿಡ್ ತಹಬದಿಗೆ ಬಂದ ನಂತರ ದೇಶ ಮತ್ತೆ ಅಭಿವೃದ್ಧಿಯತ್ತ ದಾಪುಗಾಲು ಇಡಲಿದ್ದು, ಜನ ಕಲ್ಯಾಣ ಕಾರ್ಯಕ್ರಮಗಳು ಹೆಚ್ಚಿನ ಪ್ರಮಾಣದಲ್ಲಿ ಜಾರಿಗೊಳ್ಳಲಿವೆ’ ಎಂದು ಅಭಿಪ್ರಾಯಪಟ್ಟರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಮಂಜುನಾಥ ಬ್ಯಾಲಹುಣಸಿ ಲಸಿಕೆ ಕುರಿತು ಮಾತನಾಡಿದರು.

ವೈದ್ಯಾಧಿಕಾರಿಗಳಾದ ಡಾ.ವಿ. ಪ್ರಕಾಶ, ಶೇಖರ ಭಜಂತ್ರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಜಯರಾಂ ಚವ್ಹಾಣ, ಪಿಎಸ್‍ಐ ಹನಮಂತಪ್ಪ ತಳವಾರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಉಮೇಶ ಹಿರೇಮಠ, ಆರೋಗ್ಯ ರಕ್ಷ ಸಮಿತಿ ಉಪಾಧ್ಯಕ್ಷ ಪ್ರಭುರಾಜ ಕಲಬುರ್ಗಿ, ಮುಖಂಡರಾದ ಬಸವಲಿಂಗಪ್ಪ ಭೂತೆ, ಸಿ.ಎಚ್. ಪೊಲೀಸ್‍ ಪಾಟೀಲ, ಸಿದ್ರಾಮೇಶ ಬೇಲೇರಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಹಾಗೂ ವಸಂತ ಭಾವಿಮನಿ ಇದ್ದರು. ‘ಲಸಿಕೆ ‘ಆತಂಕ ಬೇಡ’

ಗಂಗಾವತಿ: ‘ಕೋವಿಡ್‌ ಲಸಿಕೆ ಕುರಿತು ಆತಂಕ ಬೇಡ. ಅದರ ಮೇಲೆ ಸಾಕಷ್ಟು ಪ್ರಯೋಗ ಹಾಗೂ ಅಧ್ಯಯನ ನಡೆಸಲಾಗಿದೆ’ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ನಗರದ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶನಿವಾರ ಕೋವ್ಯಾಕ್ಸಿನ್‌ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಕೋವಿಡ್‌ನಂಥ ಸಂಕಷ್ಟದ ಪರಿಸ್ಥಿತಿ ಎದುರಿಸಿದ ದೇಶದ ಜನರಿಗೆ ತೊಂದರೆ ಆಗಬಾರದು ಎಂದು ಪ್ರಧಾನ ಮಂತ್ರಿ ಇದೀಗ ಕೊರೊನಾಗೆ ಸಂಜೀವಿನಿ ನೀಡುತ್ತಿದ್ದಾರೆ. ಮೊದಲಿಗೆ 400 ಆರೋಗ್ಯ ಸಿಬ್ಬಂದಿಗೆ ಲಸಿಕೆ ಹಾಕಲಾಗುತ್ತಿದೆ. ಎಲ್ಲರೂ ಅದನ್ನು ಪಡೆದುಕೊಂಡು ಆರೋಗ್ಯವಾಗಿರೋಣ’ ಎಂದರು.

ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ.ಎಂ.ಜಿ.ಮಹೇಶ ಮಾತನಾಡಿ,‘ಕಳೆದ 10 ತಿಂಗಳುಗಳಿಂದ ಇಡೀ ದೇಶ ಕೊರೊನಾ ಸೋಂಕಿಗೆ ನಲುಗಿದೆ. ಜಿಲ್ಲೆಯಲ್ಲಿ ಕೂಡ 13,909 ಪ್ರಕರಣಗಳು ಬೆಳಕಿಗೆ ಬಂದಿವೆ. 285 ಜನ ಸಾವನ್ನಪ್ಪಿದ್ದಾರೆ. ಇದೀಗ ಕೊರೊನಾ ತಡೆಯಲು ಲಸಿಕೆ ಬಂದಿದೆ. ಅದರ ಕುರಿತು ವದಂತಿ ಬೇಡ, ಸಾಕಷ್ಟು ಪ್ರಯೋಗಗಳ ನಂತರವೇ ನೀಡಲಾಗುತ್ತಿದೆ. ಯಾರು ಭಯಪಡದೇ ತೆಗೆದುಕೊಳ್ಳುಬೇಕು’ ಎಂದು ಹೇಳಿದರು.

ಆರೋಗ್ಯ ಇಲಾಖೆ ಸಿಬ್ಬಂದಿ ಡಿ ಗ್ರೂಪ್‌ ನೌಕರ ಶಂಕರ ಅವರಿಗೆ ಮೊದಲ ಲಸಿಕೆ ನೀಡಲಾಯಿತು.

ನಂತರ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಈಶ್ವರ ಸವಡಿ, ಡಾ.ಎಂ.ಜಿ.ಮಹೇಶ ಅವರು ಲಸಿಕೆ ಪಡೆದುಕೊಂಡರು. ಬಳಿಕ ಎಲ್ಲ ವೈದ್ಯರಿಗೆ ನೀಡಲಾಯಿತು.

ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭಾಗ್ಯವತಿ ಬೋಲಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹ್ಮದ್‌ ರಫಿ, ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ, ಕನಕಗಿರಿ ಆರೋಗ್ಯಾಧಿಕಾರಿ ರಾಘವೇಂದ್ರ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಎ.ಆರ್.ರಾಯಭಾಗಿ, ನಾಗರಾಜ ನಾಯಕ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು