ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು ಖರೀದಿಗೆ ನಿರಾಕರಿಸಿದ ಕಾರ್ಖಾನೆ: ವಿಷ ಸೇವಿಸಿ ರೈತ ಆತ್ಮಹತ್ಯೆ

ಕಾರ್ಖಾನೆ ನಡೆಗೆ ಆಕ್ರೋಶ
Last Updated 15 ಡಿಸೆಂಬರ್ 2018, 12:28 IST
ಅಕ್ಷರ ಗಾತ್ರ

ಕೊಪ್ಪಳ: ಕಬ್ಬು ಕಟಾವಿಗೆ ಬಂದು 14 ತಿಂಗಳಾದರೂ ಕಾರ್ಖಾನೆಯವರು ಖರೀದಿಸಲಿಲ್ಲ ಎಂದು ಮನನೊಂದ ರೈತರೊಬ್ಬರು ಶನಿವಾರ ಮುಂಡರಗಿ ಸಕ್ಕರೆ ಕಾರ್ಖಾನೆ ಆವರಣದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ರೈತನನ್ನುತಾಲ್ಲೂಕಿನ ತಿಗರಿ ಗ್ರಾಮದ ಹನಮಂತ ಕುರಿ(56) ಎಂದು ಗುರುತಿಸಲಾಗಿದೆ.

ತಮ್ಮ 4 ಎಕರೆ ಜಮೀನಿನಲ್ಲಿ ಬೆಳದಿದ್ದ ಕಬ್ಬು ತೆಗೆದುಕೊಂಡು ಹೋಗುವಂತೆ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಬಳಿ ಇರುವ ವಿಜಯನಗರ ಸಕ್ಕರೆ ಕಾರ್ಖಾನೆಯವರನ್ನು ಮೇಲಿಂದ ಮೇಲೆ ಒತ್ತಾಯಿಸಿದ್ದಾರೆ. ಆದರೂ ಕಾರ್ಖಾನೆ ಸಿಬ್ಬಂದಿ ಸ್ಪಂದಿಸಿರಲಿಲ್ಲ ಎಂಬುದು ರೈತನ ಕುಟುಂಬದ ಆರೋಪವಾಗಿದೆ.

ನಾಲ್ಕು ದಿನಗಳ ಹಿಂದೆಯೇ ರೈತ ಹನಮಂತಪ್ಪ ತಮ್ಮ ವೆಚ್ಚದಲ್ಲಿಯೇ ಕಬ್ಬು ಕಟಾವ್ ಮಾಡಿಸಿದ್ದರು. ನಂತರ ಶನಿವಾರ ಬೆಳಿಗ್ಗೆ ಕಾರ್ಖಾನೆಗೆ ಹೋಗಿ ಕಬ್ಬು ಕಟಾವು ಮಾಡಿಸಿ ನಾಲ್ಕು ದಿನವಾಗಿದೆ. ಶೀಘ್ರ ವಿಲೇವಾರಿ ಮಾಡಬೇಕು. ಕಬ್ಬು ಕಟಾವು ಆದ ನಂತರ ಒಣಗಿ ಹೋಗುತ್ತಿದ್ದು, ತೂಕ ಬಾರದೇ ತಮಗೆ ಹಾನಿ ಆಗುತ್ತಿದೆ. ಕಬ್ಬು ತುಂಬಿಕೊಂಡು ಹೋಗಲುಟ್ರ್ಯಾಕ್ಟರ್ ಕಳುಹಿಸಬೇಕು ಎಂದು ಒತ್ತಾಯಿಸಿದ್ದರು ಎನ್ನಲಾಗಿದೆ.

ಆದರೂ ಕಾರ್ಖಾನೆ ಸಿಬ್ಬಂದಿ ಅವರ ಸಮಸ್ಯೆಗೆ ಸ್ಪಂದಿಸಿರಲಿಲ್ಲ. ಇದರಿಂದ ಮನನೊಂದು ರೈತ ವಿಷ ಸೇವಿಸಿ ಕಾರ್ಖಾನೆ ಎದುರಿನಲ್ಲಿಯೇಆತ್ಮಹತ್ಯೆ ಮಾಡಿಕೊಂಡಿದ್ದಾರೆಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕು ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಲು ವಿಳಂಬವಾಗಿದ್ದರಿಂದ ರೈತ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ರೈತನಿಗೆ ಅಂಗವಿಕಲ ಪುತ್ರ ಮತ್ತು ಪತ್ನಿ ಇದ್ದಾರೆ.

ರೈತರ ಆಕ್ರೋಶ

ರೈತನ ಸಾವಿಗೆ ಕಾರ್ಖಾನೆ ಆಡಳಿತ ಮಂಡಳಿ ಬೇಜವಾಬ್ದರಿಯೇ ಕಾರಣವಾಗಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲೆಯ ರೈತ ಮುಖಂಡ ಹನಮಂತಪ್ಪ ಹೊಳೆಯಾಚೆ ಮುಂತಾದವರು ಆಗ್ರಹಿಸಿದ್ದಾರೆ.

ಸಾವಿನ ಸುದ್ದಿ ತಿಳಿದ ನಂತರ ನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಗ್ರಾಮಸ್ಥರು ಸರ್ಕಾರಿ ಆಸ್ಪತ್ರೆಯಲ್ಲಿ ನೆರೆದಿದ್ದು, ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ತಾಲ್ಲೂಕು ಸರ್ಕಾರಿ ಆಸ್ಪತ್ರೆ ಎದುರು ಮೃತ ರೈತನ ಕುಟುಂಬಸ್ಥರು, ಸಂಬಂಧಿಕರು, ಗ್ರಾಮದ ಜನತೆ ಸೇರಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT