ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿರುದ್ಯೋಗಿ ಯುವಕರಿಂದ ಮಕ್ಕಳಿಗೆ ಉಚಿತ ಮನೆಪಾಠ

ಕೊಪ್ಪಳ ತಾಲ್ಲೂಕಿನ ನೀರಲಗಿ ಗ್ರಾಮದಲ್ಲಿ ಯುವಕರ ನೂತನ ಪ್ರಯತ್ನ
Published : 13 ಸೆಪ್ಟೆಂಬರ್ 2024, 6:30 IST
Last Updated : 13 ಸೆಪ್ಟೆಂಬರ್ 2024, 6:30 IST
ಫಾಲೋ ಮಾಡಿ
Comments

ಅಳವಂಡಿ: ತಾವು ಪಡೆದ ಶಿಕ್ಷಣ ವ್ಯರ್ಥವಾಗಬಾರದು ಎಂಬ ಉದ್ದೇಶದಿಂದ ಕೊಪ್ಪಳ ತಾಲ್ಲೂಕಿನ ನಾಲ್ವರು ಯುವಕರು ಕಳೆದ ಮೂರು ವರ್ಷಗಳಿಂದ ತಮ್ಮ ಗ್ರಾಮದ ಶಾಲಾ ಮಕ್ಕಳಿಗೆ ಉಚಿತ ಮನೆಪಾಠ ಮಾಡುತ್ತಿದ್ದಾರೆ.‌

ಕೊಪ್ಪಳ ತಾಲ್ಲೂಕಿನ ನೀರಲಗಿ ಗ್ರಾಮದ ಪದವೀಧರರಾದ ಆಂದೇಶ ಉಳ್ಳಾಗಡ್ಡಿ, ವಿನಾಯಕ ಮರೇಬಾಳ, ಶಂಕರಗೌಡ ಪೊಲೀಸ್ ಪಾಟೀಲ, ದವನಕುಮಾರ ಆನಂದಹಳ್ಳಿ ಎಂಬುವವರು ತಮ್ಮ ಗ್ರಾಮದ ಶಾಲಾ ಮಕ್ಕಳಿಗೆ ಎರಡರಿಂದ ಮೂರು ಗಂಟೆಗಳ ಕಾಲ ಉಚಿತ ಶಿಕ್ಷಣ ನೀಡುತ್ತಿದ್ದಾರೆ. 

ಗ್ರಾಮದ ಯುವಕರಾದ ಆಂದೇಶ ಉಳ್ಳಾಗಡ್ಡಿ, ಶಂಕರಗೌಡ ಅವರು ಬಿಎಸ್ಸಿ, ಬಿ.ಇಡಿ ಪದವೀಧರರಾಗಿದ್ದರೆ, ವಿನಾಯಕ ಬಿ.ಕಾಂ, ದವನಕುಮಾರ ಬಿಎಸ್ಸಿ ಪೂರ್ಣಗೊಳಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಕೊರೊನಾ ಹಾವಳಿಯಿಂದ ಶಾಲೆಗಳು ಬಂದಾಗಿದ್ದವು. ಹಾಗಾಗಿ ಸರ್ಕಾರ ಆನ್‌ಲೈನ್ ಶಿಕ್ಷಣ ನೀಡಲು ಮುಂದಾಗಿತ್ತು. ಆದರೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಇದರಿಂದ ಶಾಲೆಯಿಂದ ದೂರವಾದ ಮಕ್ಕಳು ಓದು ಬರಹ ಮರೆಯುತ್ತಿರುವುದನ್ನು ಗಮನಿಸಿದ ಈ ಯುವಕರು ಗ್ರಾಮದ ಮಕ್ಕಳಿಗೆ ನಿರಂತರವಾಗಿ ಮನೆ ಪಾಠದ ಮೂಲಕ ಶಿಕ್ಷಣ ನೀಡುತ್ತಿದ್ದಾರೆ.

‘ಕೊರಾನಾ ಸಂದರ್ಭದಲ್ಲಿ ಗ್ರಾಮದ ಮಸೀದಿಯಲ್ಲಿ ಎಂಟರಿಂದ ಹತ್ತನೇ ತರಗತಿ ಮಕ್ಕಳಿಗೆ ಉಚಿತ ಟ್ಯೂಷನ್ ತರಗತಿಯನ್ನು ಪ್ರಾರಂಭಿಸಿದೆವು. ನಂತರ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಗ್ರಾಮಸ್ಥರ ಹಾಗೂ ಶಿಕ್ಷಕರ ಸಹಕಾರದಿಂದ ತರಗತಿ ಆರಂಭ ಮಾಡಿದೆವು. ಸದ್ಯ ಸರ್ಕಾರಿ ಶಾಲೆಯ ಆವರಣದಲ್ಲಿ ಉಚಿತ ಟ್ಯೂಷನ್ ತರಗತಿಯನ್ನು 1 ರಿಂದ 10‌ ನೇ ತರಗತಿ ಮಕ್ಕಳಿಗೆ ನಿತ್ಯ ಸಂಜೆ ನಡೆಸುತ್ತಿದ್ದು, ಸುಮಾರು 90 ರಿಂದ 100 ವಿದ್ಯಾರ್ಥಿಗಳು ಹಾಜರಾಗುತ್ತಾರೆ’ ಎಂದು ಉಚಿತ ಮನೆಪಾಠ ಮಾಡುತ್ತಿರುವ ಯುವಕರು ‘ಪ್ರಜಾವಾಣಿ’ಗೆ ತಿಳಿಸಿದರು.

‌ನಿತ್ಯ ಟ್ಯೂಷನ್ ತರಗತಿಗೆ ಬರುವ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ತರಗತಿ ಪ್ರಾರಂಭಕ್ಕೂ ಮೊದಲು ಪ್ರಾರ್ಥನೆ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉಚಿತ ಶಿಕ್ಷಣದ ಜತೆಗೆ ನಾಡಿನ ಸಂಸ್ಕೃತಿ ಸಂಸ್ಕಾರ ಬಗ್ಗೆ ತಿಳಿಸಲಾಗುತ್ತಿದೆ. ಶಾಲಾ ಪಠ್ಯದ ಜತೆಗೆ ಮೊರಾರ್ಜಿ, ನವೋದಯ, ಸೈನಿಕ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಪ್ರವೇಶ ಪರೀಕ್ಷೆ ಬಗ್ಗೆ ಹಾಗೂ ಸಾಮಾನ್ಯ ಜ್ಞಾನದ ಬಗ್ಗೆ ನೀರಲಗಿ ಗ್ರಾಮದ ನಾಲ್ವರು ಯುವಕರು ಮಕ್ಕಳಿಗೆ ಬೋಧನೆ ಮಾಡುತ್ತಾರೆ.

ಆಂದೇಶ ಉಳ್ಳಾಗಡ್ಡಿ
ಆಂದೇಶ ಉಳ್ಳಾಗಡ್ಡಿ
ಶಾಂಭವಿ
ಶಾಂಭವಿ
ನಮ್ಮೂರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದರಿಂದ ನಮಗೆ ಓದಿದ್ದಕ್ಕೂ ತೃಪ್ತಿ ಇದೆ. ಇದಕ್ಕೆ ನಮ್ಮೂರಿನ ಪ್ರತಿಯೊಬ್ಬರೂ ಸಹಕಾರ ನೀಡುತ್ತಿದ್ದಾರೆ.
ಆಂದೇಶ ಉಳ್ಳಾಗಡ್ಡಿ ಪದವೀಧರ ಯುವಕ
ನಮ್ಮ ಊರಿನ ಶಾಲಾ ಆವರಣದಲ್ಲಿ ಪ್ರತಿದಿನ ಸಂಜೆ ಶುಲ್ಕ ಇಲ್ಲದೇ ಟ್ಯೂಷನ್ ತರಗತಿ ನಡೆಯುತ್ತಿದೆ. ಇಲ್ಲಿ ಶಾಲೆಯಲ್ಲಿ ಕಲಿತ ವಿಷಯವನ್ನು ಪುನರಾವರ್ತನೆ ಮಾಡಲಾಗುತ್ತದೆ. ಸಾಮಾನ್ಯ ಜ್ಞಾನದ ಬಗ್ಗೆ ಮಾಹಿತಿ ಪಠ್ಯದ ವಿಷಯದ ಬಗ್ಗೆ ಕೂಡ ಬೋಧನೆ ಮಾಡುತ್ತಾರೆ.
ಶಾಂಭವಿ ಏಳನೇ ತರಗತಿ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT