₹ 48 ಲಕ್ಷ ವಸೂಲಿ: ಎಪಿಎಂಸಿ ಕಾರ್ಯದರ್ಶಿ ವಿರುದ್ಧ ತನಿಖೆ

7
ಇಲಾಖಾವಾರು ತನಿಖೆಗೆ ನಿರ್ದೇಶಕ ರಾಜೇಶಗೌಡ ಸೂಚನೆ

₹ 48 ಲಕ್ಷ ವಸೂಲಿ: ಎಪಿಎಂಸಿ ಕಾರ್ಯದರ್ಶಿ ವಿರುದ್ಧ ತನಿಖೆ

Published:
Updated:

ಗಂಗಾವತಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಭಾರ ಕಾರ್ಯದರ್ಶಿ ವೀರಭದ್ರಯ್ಯ ಅವರ ವಿರುದ್ಧ ಕೇಳಿ ಬಂದ ₹ 50 ಲಕ್ಷ ಮೊತ್ತದ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇಲಾಖಾವಾರು ತನಿಖೆಗೆ ಎಪಿಎಂಸಿ ಪ್ರಧಾನ ಕಚೇರಿ ನಿರ್ದೇಶಕರಿಂದ ಸೂಚನೆ ಬಂದಿದೆ.

'ಮುಚ್ಚಿದ ಲಕೋಟೆಯಲ್ಲಿ ಸದಸ್ಯರಿಗೆ ಪ್ರತ್ಯೇಕ ದೂರು ರವಾನೆ; ಎಪಿಎಂಸಿ ಕಾರ್ಯದರ್ಶಿಯಿಂದ ₹ 48 ಲಕ್ಷ ವಸೂಲಿ' ಎಂಬ ಶೀರ್ಷಿಕೆಯಡಿ ಡಿ. 23ರಂದು ಪ್ರಜಾವಾಣಿಯಲ್ಲಿ ವರದಿ ಪ್ರಕಟವಾಗಿತ್ತು. 

ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಧಾನ ಕಚೇರಿಯ ನಿರ್ದೇಶಕ ರಾಜೇಶಗೌಡ, ಗಂಗಾವತಿ ಎಪಿಎಂಸಿಯ ಪ್ರಭಾರ ಕಾರ್ಯದರ್ಶಿ ವಿರುದ್ಧ ಇಲಾಖಾವಾರು ತನಿಖೆಗೆ ಅಧಿಕಾರಿಯನ್ನು ನಿಯೋಜಿಸಿದ್ದಾರೆ.

ಇದಕ್ಕೂ ಮೊದಲು ಎಪಿಎಂಸಿಯ ಕೆಲ ಸದಸ್ಯರು ಬೆಂಗಳೂರಿಗೆ ತೆರಳಿ, ಕಾರ್ಯದರ್ಶಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶಕರಿಗೆ ದೂರು ನೀಡಿದ್ದರು ಎಂದು ತಿಳಿದು ಬಂದಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಹುಬ್ಬಳ್ಳಿ ಜಂಟಿ ನಿರ್ದೇಶಕ ನಾಗೇಶ ವಿಚಾರಣಾ ಅಧಿಕಾರಿಯಾಗಿ ನೇಮಕವಾಗಿದ್ದು, ಗುರುವಾರ ಇಲ್ಲಿನ ಎಪಿಎಂಸಿಗೆ ಭೇಟಿ ನೀಡಿ ಪ್ರಾಥಮಿಕ ಹಂತದ ಮಾಹಿತಿ ಕಲೆ ಹಾಕಿದರು ಎಂದು ತಿಳಿದು ಬಂದಿದೆ.

ಕಾರ್ಯದರ್ಶಿ ವಿರುದ್ಧ ಕೇಳಿ ಬಂದ ಅವ್ಯವಹಾರ, ಹಣದ ಮೂಲಗಳ ಬಗ್ಗೆ ಮಾಹಿತಿ ಕಲೆ ಹಾಕಿದರು. ಕಾರ್ಯದರ್ಶಿ ವಿರುದ್ಧ ನಿವೃತ್ತ ನೌಕರ ಅಮರಯ್ಯ ಸ್ವಾಮಿ ಮಾಡಿದ್ದಾರೆ ಎನ್ನಲಾದ ದೂರಿನ ಬಗ್ಗೆ ಮೌಖಿಕವಾಗಿ ಮಾಹಿತಿ ಪಡೆದುಕೊಂಡರು ಎಂದು ಹೇಳಲಾಗುತ್ತಿದೆ.

ಕೆಲ ಕಡತಗಳನ್ನು ತಮ್ಮ ಸುಪರ್ದಿಗೆ ಒಪ್ಪಿಸುವಂತೆ ಸೂಚಿಸಿದ ಅಧಿಕಾರಿ, ದೂರಿನಲ್ಲಿನ ವ್ಯಕ್ತವಾದ ಮೂಲಗಳು ಮಾತ್ರವಲ್ಲ. ಬಾಹ್ಯ ಮೂಲಗಳಿಂದಲೂ ಮಾಹಿತಿ ಸಂಗ್ರಹಿಸುವುದಾಗಿ ಸಿಬ್ಬಂದಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಕಾರ್ಯದರ್ಶಿ ವಿರುದ್ಧ ಕೇಳಿ ಬಂದ ಆರೋಪದ ದೂರಿನಲ್ಲಿ ಒಟ್ಟು 13ಕ್ಕೂ ಹೆಚ್ಚು ಮೂಲಗಳಿಂದ ₹ 48.59 ಲಕ್ಷ ಮೊತ್ತದ ಹಣವನ್ನು ಅಕ್ರಮವಾಗಿ ವಸೂಲಿ ಮಾಡಿದ್ದಾರೆ ಎಂದು ಗುರುತರ ಆಪಾದನೆ ವ್ಯಕ್ತವಾಗಿತ್ತು. ಈ ಬಗ್ಗೆ ತುರ್ತು ಸಭೆ ನಡೆಸಿದ ಆಡಳಿತ ಮಂಡಳಿಯ ಸದಸ್ಯರು, ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ ನೇತೃತ್ವದಲ್ಲಿ ವಿಚಾರಣಾಧಿಕಾರಿಗೆ, 'ಕಾರ್ಯದರ್ಶಿಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ದೂರು ನೀಡಿದ್ದೇವೆ' ಎಂದು ಸದಸ್ಯ ಚಂದ್ರಶೇಖರ ಯರಡೋಣ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !