ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುನ್ನಾಳ | ಗಾಂಧಿ ಗ್ರಾಮ ಪುರಸ್ಕಾರ: ಅನುದಾನ ಸಮರ್ಪಕ ಬಳಕೆಗೆ ಸಂದ ಪುರಸ್ಕಾರ

Published 30 ಸೆಪ್ಟೆಂಬರ್ 2023, 5:03 IST
Last Updated 30 ಸೆಪ್ಟೆಂಬರ್ 2023, 5:06 IST
ಅಕ್ಷರ ಗಾತ್ರ

ಯಲಬುರ್ಗಾ: ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಲಭ್ಯವಿರುವ ಅನುದಾನ ಸಮರ್ಪಕ ಬಳಕೆ, ಕರವಸೂಲಿಯಲ್ಲಿ ಶೇ 90ಕ್ಕೂ ಹೆಚ್ಚಿನ ಸಾಧನೆ, ಶುದ್ಧ ನೀರಿನ ಘಟಕಗಳನ್ನು ಸಮರ್ಪಕ ಬಳಕೆ ಹಾಗೂ ನಿರ್ವಹಣೆ...ಇದು ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ತಾಲ್ಲೂಕಿನ ಗುನ್ನಾಳ ಗ್ರಾಮ ಪಂಚಾಯಿತಿಯ ಅಭಿವೃದ್ಧಿಯ ಮಾನದಂಡದ ನೋಟ.

ಹುಣಸಿಹಾಳ, ಬುಕನಟ್ಟಿ ಗ್ರಾಮ ಒಳಗೊಂಡ ಗುನ್ನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಗುನ್ನಾಳ ಗ್ರಾಮದಲ್ಲಿ ಅಭಿವೃದ್ಧಿಯ ಹೆಜ್ಜೆಗುರುತುಗಳು ಕಾಣಿಸಿಕೊಂಡಷ್ಟು ಬುಕನಟ್ಟಿ ಮತ್ತು ಹುಣಸಿಹಾಳ ಗ್ರಾಮದಲ್ಲಿ ಕಂಡು ಬರದಿದ್ದರೂ ಇತರೆ ಗ್ರಾಮಕ್ಕೆ ಹೋಲಿಸಿದರೆ ಅಭಿವೃದ್ಧಿ ಕಾರ್ಯಗಳು ನಡೆದಿವೆ.

ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಕೆರೆಗಳ ಹೂಳೆತ್ತುವ ಮೂಲಕ ಅಂತರ್ಜಲ ಮಟ್ಟವನ್ನು ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಹಳ್ಳಗಳ ನಾಲಾ ಅಭಿವೃದ್ಧಿ, ಗ್ರಾಮದ ಅಂಗನವಾಡಿ‌ ಕೇಂದ್ರಗಳನ್ನು ವಿವಿಧ ಚಿತ್ರಗಳಿಂದ ಅಲಂಕರಿಸಿ‌ ಮಕ್ಕಳ ಸ್ನೇಹಿ ಕೇಂದ್ರವನ್ನಾಗಿ ಮಾಡಲಾಗಿದೆ. ಪ್ರತಿಯೊಂದು ಮನೆಗೆ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. 15ನೇ ಹಣಕಾಸು ಯೋಜನೆ ಅಡಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಿಸಿ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ಪಂಚಾಯಿತಿಗೆ ಹೆಚ್ಚು ಅಂಕಗಳು ಲಭಿಸಲು ಕಾರಣವಾಗಿದೆ.

ಪಂಚಾಯಿತಿಗೆ ಬರುವ ಅನುದಾನವನ್ನು ಎಲ್ಲಾ ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸಕ್ಕೆ ಸರ್ವ ಸದಸ್ಯರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಸದಸ್ಯರು ಹಾಗೂ ಗ್ರಾಮಸ್ಥರು ಹಾಗೂ ಅಧಿಕಾರಿಗಳ ಸಹಕಾರದಿಂದ ಗ್ರಾಮ ಪಂಚಾಯಿತಿ ಪ್ರಶಸ್ತಿಗೆ ಆಯ್ಕೆಮಾಡಿದ್ದು ಖುಷಿ ತಂದಿದೆ. ಇನ್ನೂ ಹೆಚ್ಚಿನ ಕೆಲಸಕ್ಕೆ ಪ್ರೇರಣೆ ಸಿಕ್ಕಂತಾಗಿದೆ.
ಶಾಂತಮ್ಮ ಕಂಬಳಿ, ಅಧ್ಯಕ್ಷೆ, ಗುನ್ನಾಳ ಗ್ರಾ.ಪಂ.

ಬೀದಿದೀಪ ಹಾಗೂ ಕುಡಿಯುವ ನೀರು ಪೂರೈಕೆಯಲ್ಲಿ ವಿಶೇಷ ಕಾಳಜಿ ತೋರಲಾಗಿದ್ದು, ಜನರಿಗೆ ಯಾವುದೇ ತೊಂದರೆಯಿಲ್ಲದೇ ಪೂರೈಸುವ ಕೆಲಸ ಮಾಡಲಾಗುತ್ತಿದೆ. ಗ್ರಾಮಗಳಲ್ಲಿನ ವಿವಿಧ ಓಣಿಯಲ್ಲಿನ ರಸ್ತೆಗಳು ಸಿಸಿ ರಸ್ತೆಗಳಾಗಿವೆ. ಗುನ್ನಾಳ ಪ್ರೌಢಶಾಲೆಯು ಪರಿಸರ ಶಾಲೆ ಪ್ರಶಸ್ತಿಗೆ ಪಾತ್ರವಾಗಿದ್ದು ಕೂಡ ಗ್ರಾಮದ ವಿಶೇಷವಾಗಿದೆ. ಪ್ರಶಸ್ತಿ ಪಡೆದ ಪಂಚಾಯಿತಿ ಎಂಬ ಹಿರಿಮೆಗೆ ಪಾತ್ರವಾಗುವುದರಿಂದ ಸ್ಥಾನಮಾನ ಹೆಚ್ಚಾಗುವುದರ ಜತೆಗೆ ಇಲ್ಲಿನ ಜನರ ಜೀವನಮಟ್ಟದ ಇನ್ನೂ ಉತ್ತಮ ರೀತಿಯಲ್ಲಿ ಆಗಬೇಕಾಗಿದೆ ಎಂದು ಗ್ರಾಮಸ್ಥ ದುರ್ಗೇಶ ಕಡೆಮನಿ ಹೇಳಿದರು.

ಪಂಚಾಯಿತಿಯ ಮುಖಾಂತರ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ.  ಕರವಸೂಲಿಯಲ್ಲಿ ಶೇ 90ಕ್ಕೂ ಅಧಿಕ ಪ್ರಮಾಣದ ಸಾಧನೆಯಾಗಿದೆ. ಮುಖ್ಯವಾಗಿ ಶುದ್ಧ ನೀರಿನ ಘಟಕಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಇವೆ ಮೊದಲಾದ ಅಂಶಗಳು ಗುನ್ನಾಳ ಪಂಚಾಯಿತಿಯು ಪ್ರಶಸ್ತಿಗೆ ಆಯ್ಕೆಯಾಗಲು ಮುಖ್ಯ ಕಾರಣವಾಗಿವೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹನಮಂತರಾಯ ಯಂಕಂಚಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT